ಪ್ರತಿಷ್ಠಿತ ಪೆನ್ ಮೂವೀಸ್ ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್, ಆರ್‌ವಿ ಸ್ಟುಡಿಯೋಸ್ (RV Studios) ಸಹಯೋಗದಲ್ಲಿ ಕರ್ಣನ ಬಗ್ಗೆ 'ಮಹಾವೀರ ಕರ್ಣ' (mahaveer Karna) ಸಿನಿಮಾ ಅನೌನ್ಸ್ ಆಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಕ್ಷಸುಡು, ಖಿಲಾಡಿ, ವೀರ ಅಂತ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ರಮೇಶ್ ವರ್ಮಾ 'ಮಹಾವೀರ ಕರ್ಣ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಆ್ಯಕ್ಷನ್, ಥ್ರಿಲ್ಲರ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಮೇಶ್ ವರ್ಮಾ, ಇದೀಗ ಮಹಾಭಾರತದ ವ್ಯಕ್ತಿ ಕರ್ಣನ ಕಥೆಯನ್ನು ಹೊಸ ರೀತಿಯಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ.
ಮಹಾನ್ ವ್ಯಕ್ತಿಯ ಕಥೆ
ಕರ್ಣನ ಕಥೆ ಕೇವಲ ಕೀರ್ತಿಗಾಗಿ ಹೋರಾಡಿದ ಒಬ್ಬ ಮಹಾನ್ ವ್ಯಕ್ತಿಯ ಕಥೆಯಲ್ಲ. ಮಾತಿಗೆ ತಕ್ಕಂತೆ ನಡೆದುಕೊಂಡ ವ್ಯಕ್ತಿಯ ಕಥೆ. ಕುಂತಿ ಪುತ್ರನಾಗಿ ಜನಿಸಿದರೂ ರಾಜಮನೆತನದ ಮಾನ್ಯತೆಯಿಂದ ದೂರ ಬೆಳೆದ ಕರ್ಣ, ತನ್ನ ಜೀವನದುದ್ದಕ್ಕೂ ತಿರಸ್ಕಾರ ಮತ್ತು ವಿಧಿಯ ವಿರುದ್ಧ ಹೋರಾಡುತ್ತಾನೆ. ಆದರೂ ತಾನು ನಂಬಿದ ವ್ಯಕ್ತಿಗಳು ಹಾಗೂ ತತ್ವಗಳಿಗೆ ಅಚಲವಾದ ನಿಷ್ಠೆಯನ್ನು ಹೊಂದಿರುತ್ತಾನೆ.
ಇದನ್ನೂ ಓದಿ: Om Prakash Rao: ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?
ತಾನು ನೀಡಿದ ಮಾತನ್ನು ಉಳಿಸಿಕೊಳ್ಳುವ ಬದ್ಧತೆ ಹಾಗೂ ಆತನ ಅಪ್ರತಿಮ ದಾನಶೀಲತೆ ಕರ್ಣನ ವ್ಯಕ್ತಿತ್ವವನ್ನು ಮತ್ತಷ್ಟು ವಿಶಿಷ್ಟವಾಗಿಸುತ್ತವೆ. ತನ್ನ ಮಾತನ್ನು ಮುರಿಯುವುದಕ್ಕಿಂತ ಅದರ ಪರಿಣಾಮಗಳನ್ನು ಎದುರಿಸುವುದನ್ನೇ ಆಯ್ಕೆ ಮಾಡುವ ಕರ್ಣ, ಮಹಾಭಾರತದ ಅತ್ಯಂತ ಆಕರ್ಷಕ ಹಾಗೂ ದುರಂತಮಯ ಪಾತ್ರಗಳಲ್ಲಿ ಒಬ್ಬನಾಗಿದ್ದಾನೆ. ಇದೇ ಗುಣ ಮಹಾವೀರ ಕರ್ಣ ಚಿತ್ರದ ಭಾವನಾತ್ಮಕ ತಳಹದಿಯಾಗಲಿದೆ.
ಚಿತ್ರದ ಟೀಸರ್‌ನಲ್ಲಿಯೂ ಕರ್ಣನ ಈ ಪ್ರಮುಖ ಗುಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಯೋಧರು, ಸಾಮ್ರಾಜ್ಯಗಳು, ಆಯುಧಗಳು ಮತ್ತು ಅದ್ಧೂರಿ ದೃಶ್ಯಗಳ ನಡುವೆ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು ತನ್ನ ಮಾತಿಗೆ ಬದ್ಧನಾಗಿ ನಿಂತಿರುವ ಕರ್ಣನ ವ್ಯಕ್ತಿತ್ವ. ಕೇವಲ ಪೌರಾಣಿಕ ವೈಭವವನ್ನು ತೋರಿಸುವ ಬದಲು, ಗೌರವ, ನಿಷ್ಠೆ, ಸ್ನೇಹ, ದ್ರೋಹ, ವಿಧಿ ಹಾಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬೆಲೆಯ ಸುತ್ತ ಹೆಣೆದ ಆಳವಾದ ಮಾನವೀಯ ಕಥೆಯಾಗಿ 'ಮಹಾವೀರ ಕರ್ಣ' ಚಿತ್ರವನ್ನು ರೂಪಿಸಲಾಗುತ್ತಿದೆ.
ಇದನ್ನೂ ಓದಿ: Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್?
ಚಿತ್ರಕ್ಕೆ ರಾಮ್‌ಜಿ ದತ್ – ಛಾಯಾಗ್ರಹಣ, ಪ್ರವೀಣ್ ಪುಡಿ – ಸಂಕಲನ, ಶ್ರೀಮಣಿ – ಸಂಭಾಷಣೆ ಹಾಗೂ ಜ್ಞಾನಿ – ಸಂಗೀತವಿರಲಿದೆ. ಮಹಾವೀರ ಕರ್ಣ ಚಿತ್ರವು ಡಿಸೆಂಬರ್ 4, 2026ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.