‘ನವರಸ ನಾಯಕ’ ಜಗ್ಗೇಶ್ ಮತ್ತು ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಮಿಂಚಲು ಸಜ್ಜಾಗಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮಗೊಳ್ಳದ ಈ ಹೊಸ ಚಿತ್ರಕ್ಕೆ ನಿರ್ದೇಶಕ ನಾಗರಾಜ್ ಪೀಣ್ಯ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. 2024ರಲ್ಲಿ ತೆರೆಕಂಡಿದ್ದ ‘ರಂಗನಾಯಕ’ ಚಿತ್ರದ ಬಳಿಕ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಈ ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯರಾಗುತ್ತಿದ್ದು, ಸ್ಯಾಂಡಲ್ವುಡ್ನಲ್ಲಿ ಈ ಹೊಸ ಜೋಡಿಯ ಬಗ್ಗೆ ಭಾರಿ ಕುತೂಹಲ ಮೂಡಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ನಟಿ
ಇನ್ನು, ನಟಿ ರಚಿತಾ ರಾಮ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅತ್ಯಂತ ಬ್ಯುಸಿಯಾಗಿದ್ದು, ಕನ್ನಡದ ಜೊತೆಗೆ ಬಹುಭಾಷಾ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ‘ಕೂಲಿ’ ಚಿತ್ರದಲ್ಲಿನ ತಮ್ಮ ವಿಭಿನ್ನ ಪಾತ್ರಕ್ಕಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದ ರಚಿತಾ, ಕೊನೆಯದಾಗಿ ‘ಅಯೋಗ್ಯ 2’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರ ಕೈಯಲ್ಲಿ ಹಲವು ಚಿತ್ರಗಳಿದ್ದು, ನಟಿ ಮಾನ್ವಿತಾ ಕಾಮತ್ ನಿರ್ದೇಶನದ ಹೊಸ ಸಿನಿಮಾ, ನಿರ್ದೇಶಕ ವಿಜಯ ಪ್ರಸಾದ್ ಅವರ ಮುಂದಿನ ಚಿತ್ರಕ್ಕೂ ರಚಿತಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರ ಜೊತೆಗೆ, ತೆಲುಗಿನ ‘ಕಾಕ’ ಚಿತ್ರದಲ್ಲೂ ಅವರು ಬಣ್ಣ ಹಚ್ಚಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದು ಪಕ್ಕಾ ಸದಭಿರುಚಿಯ ಸಿನಿಮಾ
ಚಿತ್ರತಂಡದ ಮೂಲಗಳ ಪ್ರಕಾರ, ಈ ಹೊಸ ಸಿನಿಮಾದ ಕಥಾಹಂದರದಲ್ಲಿ ಒಂದು ವಿಶೇಷ ಬದಲಾವಣೆಯನ್ನು ಮಾಡಲಾಗಿದೆ. ಜಗ್ಗೇಶ್ ಅವರ ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಉತ್ತಮ ಸಂದೇಶಗಳಿದ್ದರೂ, ಅವುಗಳಲ್ಲಿ ಅಡಲ್ಟ್ ಕಾಮಿಡಿ ಮತ್ತು ಡಬಲ್ ಮೀನಿಂಗ್ ಸಂಭಾಷಣೆಗಳು ಹೆಚ್ಚಾಗಿದ್ದವು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ, ಈ ಹೊಸ ಚಿತ್ರಕ್ಕಾಗಿ ನಿರ್ದೇಶಕರು ಮತ್ತು ಸ್ವತಃ ಜಗ್ಗೇಶ್ ಅವರು ಉದ್ದೇಶಪೂರ್ವಕವಾಗಿಯೇ ಅಂತಹ ಸಂಭಾಷಣೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಿದ್ದಾರಂತೆ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಯಾವುದೇ ಮುಜುಗರವಿಲ್ಲದೆ ಆನಂದಿಸುವಂತಹ ಒಂದು ಸದಭಿರುಚಿಯ ಕಥೆಯನ್ನು ಈ ಸಿನಿಮಾಗಾಗಿ ಅತ್ಯಂತ ಸೂಕ್ಷ್ಮವಾಗಿ ಹೆಣೆಯಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
Rachita Ram: ಅಭಿಮಾನಿಗಳ ಜೊತೆ ಬರ್ತ್ಡೇ ಸೆಲಬ್ರೇಷನ್; ದರ್ಶನ್ ನೆನೆದ ರಚಿತಾ ರಾಮ್
ಈ ಹಿಂದೆ ‘ಪದೇ ಪದೇ’, ‘ಭೂತಯ್ಯನ ಮೊಮ್ಮಗ ಅಯ್ಯು’ ಹಾಗೂ ‘ನಮಕ್ ಹರಾಮ್’ನಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಸದ್ಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿರುವ ‘ಅತಿಕಾಯ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಜೊತೆಗೆ, ಜಗ್ಗೇಶ್ ಮತ್ತು ರಚಿತಾ ರಾಮ್ ಕಾಂಬಿನೇಷನ್ನ ಈ ಹೊಸ ಚಿತ್ರದ ಸ್ಕ್ರಿಪ್ಟ್ ಕೆಲಸವನ್ನೂ ಅವರು ಈಗಾಗಲೇ ಪೂರ್ಣಗೊಳಿಸಿದ್ದು, ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. 2027ರ ಆರಂಭದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಚಿತ್ರತಂಡ ಯೋಜನೆ ರೂಪಿಸಿದ್ದು, ಸಿನಿಮಾದ ಶೀರ್ಷಿಕೆ, ಇತರ ತಾರಾಗಣ ಹಾಗೂ ತಾಂತ್ರಿಕ ವರ್ಗದ ಕುರಿತಾದ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.