ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ರಾಜಕೀಯ ಮತ್ತು ಸಿನಿಮಾ ಎರಡು ಒಂದಕ್ಕೊಂದು ಬೆಸೆದಿರುವುದು ಗೊತ್ತೇ ಇದೆ. ಈ ರಾಜ್ಯಗಳಲ್ಲಿ ಒಂದೇ ಏಟಿಗೆ ಎಜಿಆರ್, ಎನ್‌ಟಿಆರ್, ಜಯಲಲಿತಾ, ದಳಪತಿ ವಿಜಯ್ ಮುಖ್ಯಮಂತ್ರಿ ಆಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಇವರೆಲ್ಲಾ ಏಕಾಏಕಿ ಸಿಎಂ ಪಟ್ಟ ಅಲಂಕರಿಸಲು ಸಿನಿಮಾವೇ ಅವರಿಗೆ ವೇದಿಕೆ ಆಗಿತ್ತು. ಈಚೆಗೆಷ್ಟೇ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗಿದ್ದು, ಇದೀಗ ಎಲ್ಲರ ಕಣ್ಣು ನಟ ಜೂನಿಯರ್ ಎನ್‌ಟಿಆರ್ ಮೇಲಿದೆ!
ಸಿಎಂ ಆಗ್ತಾರಾ ಎನ್‌ಟಿಆರ್?
ನಟ ಜೂನಿಯರ್ ನಂದಮೂರಿ ತಾರಕ ರಾಮಾರಾವ್ ಅವರು ಸಿನಿಮಾ ಮತ್ತು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಅಜ್ಜ ಸೀನಿಯರ್ ಎನ್‌ಟಿಆರ್ ಸೂಪರ್ ಸ್ಟಾರ್ ಆಗಿ, ಆನಂತರ ರಾಜಕೀಯ ಪಕ್ಷ (ಟಿಡಿಪಿ) ಕಟ್ಟಿ ಸಿಎಂ ಆದವರು. ಆನಂತರ ಎನ್‌ಟಿಆರ್ ಕುಟುಂಬದ ಅನೇಕರು ರಾಜಕೀಯದಲ್ಲಿ ಸಕ್ರಿಯವಾದರು. ಜೂನಿಯರ್ ಎನ್‌ಟಿಆರ್ ತಂದೆ, ಸಹೋದರಿ, ಸೋದರತ್ತೆ, ಚಿಕ್ಕಪ್ಪ, ಸೋದರಮಾವ, ಸೋದರಳಿಯ.. ಎಲ್ಲರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ಆಂಧ್ರದಲ್ಲಿ ಸೀನಿಯರ್ ಎನ್‌ಟಿಆರ್ ಸ್ಥಾಪಿಸಿದ್ದ ತೆಲುಗು ದೇಶಂ ಪಾರ್ಟಿಯೇ ಅಧಿಕಾರದಲ್ಲಿದೆ.
ಇಷ್ಟೆಲ್ಲಾ ಆದರೂ ಎನ್‌ಟಿಆರ್ ಕುಟುಂಬದ ಅಭಿಮಾನಿಗಳಿಗೆ ಸಮಾಧಾನವಿಲ್ಲ. ಕಾರಣ, ಜೂನಿಯರ್ ಎನ್‌ಟಿಆರ್ ರಾಜಕೀಯಕ್ಕೆ ಬರಬೇಕು, ಭವಿಷ್ಯದಲ್ಲಿ ಸಿಎಂ ಆಗಬೇಕು, ಸೀನಿಯರ್ ರೀತಿಯಲ್ಲೇ ಜೂನಿಯರ್ ಕೂಡ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಆದರೆ ಎನ್‌ಟಿಆರ್ ಮಾತ್ರ ರಾಜಕೀಯ ಎಂದರೆ ಸದ್ಯಕ್ಕೆ ಮಾರುದೂರ ಓಡುತ್ತಿದ್ದಾರೆ.
Rukmini Vasanth: ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ; ನಿರ್ಮಾಪಕನಿಂದ ಘೋಷಣೆ
ಚುನಾವಣಾ ಪ್ರಚಾರ ಮಾಡಿದ್ದ ಎನ್‌ಟಿಆರ್
ಹಾಗಂತ, ಎನ್‌ಟಿಆರ್‌ಗೆ ರಾಜಕೀಯ ಇಷ್ಟವಿಲ್ಲ, ರಾಜಕೀಯ ಗೊತ್ತಲ್ಲವೆಂದಲ್ಲ. 2009ರಲ್ಲಿ ಆಂಧ್ರಪ್ರದೇಶ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಸಮಯದಲ್ಲಿ ಎನ್‌ಟಿಆರ್ ಟಿಡಿಪಿ ಪರ ಪ್ರಚಾರ ಮಾಡಿದ್ದರು. ಆಗಿನ್ನೂ ಬಿಸಿ ರಕ್ತದ ಯುವಕನಾಗಿದ್ದ ತಾರಕ್, ತಮ್ಮ ತಾತನ ಶೈಲಿಯಲ್ಲೇ ಅದ್ಭುತವಾಗಿ ಭಾಷಣ ಮಾಡುತ್ತಾ, ತೆರೆದ ವಾಹನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಇದಕ್ಕೆ ಜನರಿಂದಲೂ ಅಭೂತಪೂರ್ವ ಬೆಂಬಲ ಸಿಕ್ಕಿತ್ತು, ಜನಸಾಗರವೇ ಹರಿದುಬಂದಿತ್ತು.
ಪ್ರಚಾರಕ್ಕೆ ಹೋದಾಗಲೇ ಅಪಘಾತವಾಗಿತ್ತು
ಆದರೆ, ಈ ಎಲೆಕ್ಷನ್ ಪ್ರಚಾರದ ವೇಳೆಯೇ ಎನ್‌ಟಿಆರ್ ಇದ್ದ ಕಾರು ಖಮ್ಮಂ ಜಿಲ್ಲೆಯ ಬಳಿ ಭೀಕರ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಅವರು ತೀವ್ರವಾಗಿ ಗಾಯಗೊಂಡು, ದೀರ್ಘಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂತು. 2009ರ ಆ ಒಂದು ಚುನಾವಣೆಯ ನಂತರ ಜೂನಿಯರ್ ಎನ್‌ಟಿಆರ್ ಅವರು ಯಾವುದೇ ಪಕ್ಷದ ಪರವಾಗಿ ನೇರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ.
ಅದು ಮಟ್ಟಕ್ಕೆಂದರೆ, 2018 ರ ತೆಲಂಗಾಣ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಸ್ವಂತ ಸಹೋದರಿ ನಂದಮೂರಿ ಸುಹಾಸಿನಿ ಅವರು ಕೂಕಟ್‌ಪಲ್ಲಿ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ವಂತ ಸಹೋದರಿಯೇ ಚುನಾವಣೆಗೆ ನಿಂತಿದ್ದರೂ ಜೂನಿಯರ್ ಎನ್‌ಟಿಆರ್ ಅವರು ನೇರವಾಗಿ ಪ್ರಚಾರ ಕಣಕ್ಕೆ ಇಳಿಯದೆ, ಕೇವಲ ಟ್ವಿಟರ್ ಮೂಲಕ ಶುಭ ಹಾರೈಸಿದ್ದರು. ಆಂಧ್ರಪ್ರದೇಶದಲ್ಲಿ 2024ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲೂ ಸಹ ಅವರು ತಮ್ಮ ಸೋದರಮಾವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷಕ್ಕಾಗಲಿ ಅಥವಾ ಮತ್ಯಾವುದೇ ಪಕ್ಷಕ್ಕಾಗಲಿ ಪ್ರಚಾರ ಮಾಡಲಿಲ್ಲ.
ರಾಜಕೀಯದ ಬಗ್ಗೆ ಎನ್‌ಟಿಆರ್ ಏನಂತಾರೆ?
ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಜೂನಿಯರ್ ಎನ್‌ಟಿಆರ್ ಬಂದಿರುವ ಕಾರಣ, ಆಗಾಗ ಅವರಿಗೆ ಪಾಲಿಟಿಕ್ಸ್ ಕುರಿತ ಪ್ರಶ್ನೆಗಳು ಎದುರಾಗುವುದು ಸಹಜ. ಆಗೆಲ್ಲಾ, ಜೂನಿಯರ್ ಎನ್‌ಟಿಆರ್, "ಪ್ರಸ್ತುತ ತಮ್ಮ ಸಂಪೂರ್ಣ ಗಮನ ಸಿನಿಮಾಗಳ ಮೇಲಷ್ಟೇ. ನನಗೆ ಈಗ ರಾಜಕೀಯಕ್ಕೆ ಬರುವ ಯೋಚನೆ ಇಲ್ಲ, ಸದ್ಯಕ್ಕೆ ಸಿನಿಮಾ ರಂಗವೇ ನನ್ನ ಪ್ರಪಂಚ" ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೂ, "ಸಿಎಂ ಎನ್‌ಟಿಆರ್... ಸಿಎಂ ಎನ್‌ಟಿಆರ್.." ಎಂಬ ಘೋಷಣೆಗಳು ಅವರ ಫ್ಯಾನ್ಸ್ ಬಾಯಿಂದ ಬರುವುದು ನಿಂತಿಲ್ಲ.
ಹಿಂದೊಮ್ಮೆ ಜೂನಿಯರ್ ಎನ್‌ಟಿಆರ್ ಅವರ ಸಹೋದರಿ ನಂದಮೂರಿ ಸುಹಾಸಿನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. "ಎನ್‌ಟಿಆರ್ ಪ್ರಸ್ತುತ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಸರಿಯಾದ ಸಮಯ ಬಂದಾಗ ಅವರು ಖಂಡಿತವಾಗಿಯೂ ರಾಜಕೀಯಕ್ಕೆ ಪ್ರವೇಶಿಸುತ್ತಾರೆ. ನಂದಮೂರಿ ಕುಟುಂಬಕ್ಕೆ ರಾಜಕೀಯ ಹೊಸದಲ್ಲ ಮತ್ತು ಜೂನಿಯರ್ ಎನ್‌ಟಿಆರ್ ಕೂಡ ಅದೇ ಪರಂಪರೆಯನ್ನು ಹೊಂದಿದ್ದಾರೆ" ಎಂದು ಹೇಳಿದ್ದರು.
ಸದ್ಯ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಎನ್‌ಟಿಆರ್, ಡ್ರಾಗನ್ ಸಿನಿಮಾದ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಕಳೆದ 18 ವರ್ಷಗಳಿಂದ ಟಿಡಿಪಿಯಿಂದ ಕೊಂಚ ದೂರವೇ ಇರುವ ಎನ್‌ಟಿಆರ್, ಭವಿಷ್ಯದಲ್ಲಿ ಟಿಡಿಪಿ ಸೇರಿ ರಾಜಕೀಯದಲ್ಲಿ ಸಕ್ರಿಯವಾಗುತ್ತಾರಾ? ಅಥವಾ ಪವನ್ ಕಲ್ಯಾಣ್, ದಳಪತಿ ವಿಜಯ್ ಮಾದರಿಯಲ್ಲಿ ಹೊಸ ಪಕ್ಷ ಆರಂಭಿಸಿ, ತೆಲುಗು ರಾಜ್ಯಗಳಲ್ಲಿ ಹೊಸ ರಾಜಕೀಯ ಶೆಕೆ ಆರಂಭಿಸುತ್ತಾರಾ ಎಂಬುದನ್ನ ಕಾದುನೋಡಬೇಕು.