ನಟಿ ಸಪ್ತಮಿ ಗೌಡ ಅವರು ಒಂದು ಗಂಭೀರವಾದ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಸಿನಿಮಾ ಇವೆಂಟ್‌ಗಳಲ್ಲಿ ಕೆಲ ಪಾಪರಾಜಿಗಳು ನಟಿಯರು ವಿಡಿಯೋಗಳನ್ನು ಚಿತ್ರೀಕರಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ನಟಿಯರ ದೇಹವನ್ನು ಅನಾವಶ್ಯಕವಾಗಿ ಜೂಮ್ ಮಾಡಿ, ವಿಡಿಯೋ ಚಿತ್ರೀಕರಿಸುವಂತಹ ಈ ಬೆಳವಣಿಗೆ ಬಗ್ಗೆ ನಟಿ ಸಪ್ತಮಿ ಗೌಡ ರೊಚ್ಚಿಗೆದ್ದಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿರುವ ಅವರು, "ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ" ಎಂದು ಹೇಳಿಕೊಂಡಿದ್ದಾರೆ.
ಸಪ್ತಮಿ ಗೌಡ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
"ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಯಿಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ" ಎಂದು ಸಪ್ತಮಿ ಗೌಡ ಕಿಡಿಕಾರಿದ್ದಾರೆ.
"ಇಂತಹ ವರ್ತನೆ, ಕೆಲವರಿಂದ ನಡೆಯುತ್ತಿರುವುದಾದರೂ, ಅದು ಅಸಭ್ಯ,ಅವಮಾನಕಾರಿ ಮತ್ತು ಸೆಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯಕೋನಗಳಿಂದ ಬಳಸುವುದು ನಮ್ಮಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ" ಎಂದು ಸಪ್ತಮಿ ಗೌಡ ಬರೆದುಕೊಂಡಿದ್ದಾರೆ.
"ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಗಡಿ ರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ" ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ.
ಮಾಧ್ಯಮದವರ ಬಗ್ಗೆ ಸಪ್ತಮಿ ಗೌಡ ಹೇಳಿದ್ದೇನು?
"ಅಪಾರ ಗೌರವ ತೋರಿಸಿರುವ ಪತ್ರಕರ್ತರು ಮತ್ತು ಮಾಧ್ಯಮ ಸ್ನೇಹಿತರು ಇದ್ದಾರೆ. ಅವರೊಂದಿಗೆ ನಾವು ಅತ್ಯಂತ ಸುರಕ್ಷಿತ ಭಾವನೆ ಹೊಂದಿದ್ದೇವೆ. ಮಹಿಳೆಯರನ್ನು ಸೆರೆಹಿಡಿಯುವಲ್ಲಿ ಮತ್ತು ಬಿಂಬಿಸುವಲ್ಲಿ ಕ್ರೂರರಾಗಿರುವ ಈ ಬೆರಳೆಣಿಕೆಯಷ್ಟು ಜನರ ವಿರುದ್ಧ ನಮ್ಮನ್ನು ಬೆಂಬಲಿಸುವಂತೆ ನಾವು ಅವರನ್ನು ವಿನಂತಿಸುತ್ತೇವೆ" ಎಂದು ಸಪ್ತಮಿ ಗೌಡ ಅವರು ಕೇಳಿಕೊಂಡಿದ್ದಾರೆ.
ಸಪ್ತಮಿ ಗೌಡ ಹಂಚಿಕೊಂಡಿರುವ ಪೋಸ್ಟ್
ಸ್ಯಾಂಡಲ್‌ವುಡ್‌ನಿಂದ ವ್ಯಾಪಕ ಬೆಂಬಲ
ಸಪ್ತಮಿ ಗೌಡ ಅವರ ಈ ಪೋಸ್ಟ್‌ಗೆ ಸ್ಯಾಂಡಲ್‌ವುಡ್‌ನಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಮ್ಯಾ, ರಕ್ಷಿತಾ ಪ್ರೇಮ್, ರಿತನ್ಯಾ ವಿಜಯ್‌ಕುಮಾರ್, ಯುವರಾಜ್‌ಕುಮಾರ್, ಮೇಘನಾ ರಾಜ್. ಅಮೃತಾ ಪ್ರೇಮ್, ಕಾಜಲ್ ಕುಂದರ್, ವಾಸುಕಿ ವೈಭವ್, ಸಂಚಿತ್ ಸಂಜೀವ್, ರೀಷ್ಮಾ ನಾಣಯ್ಯ, ಅಪೂರ್ವ, ರೋಶಿನಿ ಪ್ರಕಾಶ್ ಮುಂತಾದವರು ಬೆಂಬಲ ನೀಡಿದ್ದಾರೆ.