ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sapthami Gowda: ಭರ್ಜರಿಯಾಗಿ ತೆಲುಗಿಗೆ ಕಾಲಿಟ್ಟ ಸಪ್ತಮಿ ಗೌಡ; ನಿತಿನ್‌ಗೆ ʼಕಾಂತಾರʼ ಬೆಡಗಿ ನಾಯಕಿ: ಫಸ್ಟ್‌ ಲುಕ್‌ ಔಟ್‌

Thammudu Movie: 2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಲೀಲಾ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ ಮಾತ್ರ ಭಾರತೀಯ ಚಿತ್ರರಂಗದ ಗಮನ ಸೆಳೆದ ಸಪ್ತಮಿ ಗೌಡ ಇದೀಗ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ನಿತಿನ್‌ಗೆ ನಾಯಕಿಯಾಗಿ ಅವರು ತಮ್ಮುಡು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದು, ಇದೀಗ ಅವರ ಫಸ್ಟ್‌ ಲುಕ್‌ ಹೊರ ಬಿದ್ದಿದೆ.

ಭರ್ಜರಿಯಾಗಿ ತೆಲುಗಿಗೆ ಕಾಲಿಟ್ಟ ಸಪ್ತಮಿ ಗೌಡ

ಸಪ್ತಮಿ ಗೌಡ (ಇನ್‌ಸ್ಟಾಗ್ರಾಂ ಚಿತ್ರ).

Profile Ramesh B Jun 8, 2025 4:43 PM

ಹೈದರಾಬಾದ್‌: 2022ರಲ್ಲಿ ತೆರೆಕಂಡ ರಿಷಬ್‌ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿಸಿದ ʼಕಾಂತಾರʼ (Kantara) ಹಲವರ ಅದೃಷ್ಟವನ್ನೇ ಬದಲಾಯಿಸಿದ ಚಿತ್ರ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಈ ಚಿತ್ರದಲ್ಲಿ ರಿಷಬ್‌ ಜತೆಗೆ ನಟಿಸಿ ಸೈ ಎನಿಸಿಕೊಂಡವರು ಅಪ್ಪಟ ಕನ್ನಡದ ಪ್ರತಿಭೆ ಸಪ್ತಮಿ ಗೌಡ (Sapthami Gowda). ಅವರಿಗೆ ʼಕಾಂತಾರʼ 2ನೇ ಚಿತ್ರವಾಗಿತ್ತು. ಲೀಲಾ ಎಂಬ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮೋಡಿ ಮೋಡಿದ್ದ ಅವರೀಗ ಟಾಲಿವುಡ್‌ನಲ್ಲಿ ಮಿಂಚಲು ಹೊರಟಿದ್ದಾರೆ. ತೆಲುಗಿನ ʼತಮ್ಮುಡುʼ (Thammudu) ಚಿತ್ರದಲ್ಲಿ ನಿತಿನ್‌ಗೆ (Nithiin) ನಾಯಕಿಯಾಗಿ ಸಪ್ತಮಿ ನಟಿಸುತ್ತಿದ್ದು, ಅವರ ಫಸ್ಟ್‌ ಲುಕ್‌ ಹೊರ ಬಿದ್ದಿದೆ. ಭಾನುವಾರ (ಜೂ. 8) ಹುಟ್ಟುಹಬ್ಬ ಆಚರಿಸಿಕೊಂಡ ಸಪ್ತಮಿಗೆ ʼತಮ್ಮುಡುʼ ಚಿತ್ರತಂಡ ಫಸ್ಟ್‌ ಲುಕ್‌ ಮೂಲಕ ಭಜರ್ರಿ ಉಡುಗೊರೆ ನೀಡಿದೆ.

ʼತಮ್ಮುಡುʼ ಚಿತ್ರದಲ್ಲಿ ಸಪ್ತಮಿ ರತ್ನಾ ಎನ್ನುವ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಕಥೆ ಸಾಗಲಿದ್ದು, ಸಪ್ತಮಿಗೆ ಪವರ್‌ಫುಲ್‌ ಪಾತ್ರವೇ ಸಿಕ್ಕಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Kantara Chapter 1: ಕಾಂತಾರ ಚಾಪ್ಟರ್ 1 ಬಿಡುಗಡೆ ಅಪ್‌ಡೇಟ್‌, ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ

ದಿಲ್‌ ರಾಜು ನಿರ್ಮಾಣದ, ವೇಣು ಶ್ರೀರಾಂ ನಿರ್ದೇಶನದ ʼತಮ್ಮುಡುʼ ಎಮೋಷನಲ್‌ ಆ್ಯಕ್ಷನ್‌ ಚಿತ್ರವಾಗಿದ್ದು, ಈಗಾಗಲೇ ಕುತೂಹಲ ಮೂಡಿಸಿದೆ. ಕನ್ನಡದ ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನದ ಈ ಸಿನಿಮಾದಲ್ಲಿ ಲಯ, ಸ್ವಾಸಿಕಾ, ವರ್ಷಾ ಬೊಲಮ್ಮ, ಸೌರಬ್‌ ಸಚ್‌ದೇವ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಚಿತ್ರವನ್ನು ಜು. 4ರಂದು ರಿಲೀಸ್‌ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಆದರೆ ಇದೀಗ ಅನಿವಾರ್ಯ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕ ಇನ್ನಷ್ಟೇ ಹೊರ ಬರಬೇಕಿದೆ.

ಗೆಲುವಿನ ನಿರೀಕ್ಷೆಯಲ್ಲಿ ನಿತಿನ್‌

ಸತತ ಸೋಲಿನಿಂದ ಕಂಗೆಟ್ಟಿರುವ ನಿತಿನ್‌ ʼತಮ್ಮುಡುʼ ಚಿತ್ರದ ಮೂಲಕ ಕಂಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ. 2020ರಲ್ಲಿ ತೆರೆಕಂಡ ʼಭೀಷ್ಮʼ ಚಿತ್ರದ ಬಳಿಕ ನಿತಿನ್‌ಗೆ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ. ಇತ್ತೀಚೆಗೆ ತೆರಕಂಡ ʼಎಕ್ಸ್ಟ್ರಾ ಆರ್ಡಿನರಿ ಮ್ಯಾನ್‌ʼ, ʼರಾಬಿನ್‌ಹುಡ್‌ʼ ಮುಂತಾದ ಚಿತ್ರಗಳು ಮಕಾಡೆ ಮಲಗಿವೆ. ಹೀಗಾಗಿ ಈ ಚಿತ್ರದ ಮೂಲಕ ಬಹದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಅದೃಷ್ಟ ತಂದುಕೊಡ್ತಾರಾ ಸಪ್ತಮಿ?

ಈಗಾಗಲೇ ತೆಲುಗಿನಲ್ಲಿ ಕನ್ನಡತಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್‌, ಶ್ರೀನಿಧಿ ಶೆಟ್ಟಿ ಗಮನ ಸೆಳೆದಿದ್ದಾರೆ. ಅವರ ಸಾಲಿಗೆ ಸಪ್ತಮಿ ಗೌಡ ಕೂಡ ಸೇರುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಹಾಗೆ ನೋಡಿದರೆ ಸಪ್ತಮಿ ಪರಭಾಷೆಗೆ ಕಾಲಿಡುತ್ತಿರುವುದು ಇದು ಮೊದಲ ಸಲವೇನಲ್ಲ. 2023ರಲ್ಲಿ ಬಿಡುಗಡೆಯಾಗಿದ್ದ ಹಿಂದಿಯ ʼದಿ ವ್ಯಾಕ್ಸಿನ್‌ ವಾರ್‌ʼ ಸಿನಿಮಾದಲ್ಲಿ ಸಪ್ತಮಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.

ಇದೇ ವೇಳೆ ಸಪ್ತಮಿ ನಟಿಸುತ್ತಿರುವ ಕನ್ನಡದ ʼದಿ ರೈಸ್‌ ಆಫ್‌ ಅಶೋಕʼ ಚಿತ್ರತಂಡವೂ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೊವನ್ನು ರಿಲೀಸ್‌ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ʼʼಅಶೋಕನ ಕಥೆಯಲ್ಲಿ ಅಂಬಿಕಾ ಆಗಿ ಹೊಸ ಅಧ್ಯಾಯ ತೆರೆಯುತ್ತಿರುವ ಸಪ್ತಮಿ ಗೌಡ ಅವರಿಗೆ ‘ದಿ ರೈಸ್ ಆಫ್ ಅಶೋಕ’ ತಂಡದಿಂದ ಹುಟ್ಟುಹಬ್ಬದ ಶುಭಾಶಯಗಳುʼʼ ಎಂದು ವಿಶ್‌ ಮಾಡಿದೆ. ಈ ಚಿತ್ರದಲ್ಲಿ ನೀನಾಸಂ ಸತೀಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ಮನು ಶೇಡ್ಗಾರ್ ನಿರ್ದೇಶನದ ಈ ಚಿತ್ರ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.