ಅನ್ಯಾಯ, ಆಕ್ರೋಶ ಹಾಗೂ ಪ್ರತೀಕಾರದ ರೋಚಕ ಕಥಾಹಂದರವನ್ನು ಒಳಗೊಂಡಿರುವ ನೂತನ ಕನ್ನಡ ಚಲನಚಿತ್ರ ‘ದ್ರೌಪದಿ’ (DRAUPADI) ಸಿನಿಮಾಗೆ ಶುಭ ಮುಹೂರ್ತ ನೆರವೇರಿದೆ. "ಒಂದು ಸೀರೆಯ ಸೆರಗು, ಸಾವಿರ ಪ್ರಶ್ನೆಗಳು ಹಾಗೂ ರಕ್ತಸಿಕ್ತ ಇತಿಹಾಸದ ಹಿಂದಿರುವ ನಿಗೂಢ ಸತ್ಯ" ಎಂಬ ಕುತೂಹಲಕಾರಿ ಟ್ಯಾಗ್ಲೈನ್ನೊಂದಿಗೆ ಈ ಚಿತ್ರ ಸೆಟ್ಟೇರಿದೆ. ಮುಹೂರ್ತ ಸಮಾರಂಭದಲ್ಲಿ ಜಿತೇಂದರ್ ಗುಲಾಟಿ (Jeetendar Gulati) ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಾ.ಮಾ. ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಎಲ್.ಸಿ. ಕುಶಾಲ್ ಮತ್ತು ಬಾ.ಮಾ. ಗಿರೀಶ್ ಕ್ಯಾಮೆರಾ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಖ್ಯಾತ ಸಂಗೀತ ನಿರ್ದೇಶಕ ಅಮ್ರೀಶ್ ಅವರು ‘ದ್ರೌಪದಿ’ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಕೆಲವು ಕಥೆಗಳು ಇತಿಹಾಸವಾದರೆ, ಕೆಲವು ಪಾತ್ರಗಳು ಇತಿಹಾಸವನ್ನೇ ಪ್ರಶ್ನಿಸುತ್ತವೆ ಎಂಬ ಗಟ್ಟಿಯಾದ ಆಶಯದೊಂದಿಗೆ, ಊಹೆಗೂ ನಿಲುಕದ ಹಲವು ತಿರುವುಗಳನ್ನೊಳಗೊಂಡ ಕಥೆಯನ್ನು ಈ ಸಿನಿಮಾ ಹೊಂದಿದೆ.
ಇದನ್ನೂ ಓದಿ; Bigg Boss Kannada 13: ಸೌಂದರ್ಯಾಗೆ ಉರಿಸಿದ ಆಸಿಯಾ; ಮನೆಯಲ್ಲಿ ಮೈತ್ರಿ ಧಗ ಧಗ!
ಎಡಗೊಟ್ಟಿ ಸುಬ್ರಮಣ್ಯಂ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ವೆಂಕಟ್ ಗೌಡ ಮತ್ತು ಮೀನಾ ವೆಂಕಟ್ ನಿರ್ಮಿಸುತ್ತಿದ್ದು, ಗಲಭ ವೆಂಕಟರಾವ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಚಿತ್ರದ ತಾರಾಗಣದಲ್ಲಿ ನಾಯಕನಾಗಿ ರೋಹಿತ್ ರಾಘವೇಂದ್ರ ಅಭಿನಯಿಸುತ್ತಿದ್ದು, ದಿವಿ ಪ್ರಮುಖ (ಸೆಕೆಂಡ್ ಲೀಡ್) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕನಾಗಿ ಪ್ರಶಾಂತ್ ಬಜಾಜ್ ಅಬ್ಬರಿಸಲಿದ್ದಾರೆ.
ಇದನ್ನೂ ಓದಿ: Bigg Boss Kannada 13: ಆತ್ಮೀಯ ಗೆಳೆಯ ತಾಂಡವ್ಗೆ `ಕುನ್ನಿ' ಎಂದ ಗಗನ್! ದೋಸ್ತಿಗಳಲ್ಲಿ ಬಿರುಕು
ತಾಂತ್ರಿಕ ವರ್ಗದಲ್ಲಿ ಅನುಭವಿ ಛಾಯಾಗ್ರಾಹಕ ಎಂ.ಬಿ. ಅಳ್ಳಿಕಟ್ಟಿ ಕ್ಯಾಮೆರಾ ಕೈಚಳಕ ಹಾಗೂ ಸುಜಿತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿರಲಿದ್ದು, ಸದ್ಯದಲ್ಲೇ ಚಿತ್ರೀಕರಣ ಭರದಿಂದ ಸಾಗಲಿದೆ. ಚಿತ್ರರಂಗದ ಹಲವು ಗಣ್ಯರಾದ ಝೇಂಕರ್ ಮ್ಯೂಸಿಕ್ನ ಭರತ್ ಜೈನ್, ಹೊಯ್ಸಳ, ಗೌಸುಬ ನರೇಂದ್ರ ರೆಡ್ಡಿ ಅವರು ಆಗಮಿಸಿ, ಈ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.