'ರಾಧಾ ರಮಣ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯ ಗೌಡ (Kavya Gowda) ಮತ್ತು ಅವರ ಪತಿ ಸೋಮಶೇಖರ್ ಮೇಲೆ ಕುಟುಂಬದವರಿಂದಲೇ ಹಲ್ಲೆ ನಡೆದಿರುವ ಘಟನೆ ಇತ್ತೀಚೆಗೆ (ಜ. 26 ರಂದು) ನಡೆದಿದೆ. ಕಾವ್ಯ ಗೌಡ ಪತಿ ಸೋಮಶೇಖರ್ ಅವರ ಸಹೋದರ ನಂದೀಶ್, ಅವರ ಪತ್ನಿ ಪ್ರೇಮಾ, ಪ್ರೇಮಾ ಅವರ ತಂದೆ ರವಿಕುಮಾರ್ ಅವರುಗಳು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಕಾವ್ಯ ಗೌಡ ಅವರ ಸಹೋದರಿ ಭವ್ಯಾ ಗೌಡ ಅವರು ದೂರು ನೀಡಿದ್ದು, ಎಫ್‌ಐಆರ್‌ನಲ್ಲಿ ದಾಖಲಾದ ಮಾಹಿತಿ ಇಲ್ಲಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ಪಿರ್ಯಾದುದಾರರಾದ ಶ್ರೀಮತಿ ಭವ್ಯಾ ರಾಣಿ ಬಿನ್ ವೆಂಕಟೇಶ 36 ವರ್ಷ ಕೆ ಆರ್ ರಸ್ತೆ ಶಾಸ್ತ್ರೀ ನಗರ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ತಂಗಿ ಕಾವ್ಯ ಗೌಡ. ಈಕೆಯನ್ನು ಎನ್ ಆರ್ ಐ ಲೇಔಟ್ ನಿವಾಸಿ ಸೋಮಶೇಖರ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು. ಈ ದಿನ ಸಂಜೆ ಸುಮಾರು 6.30 ಗಂಟೆಯಲ್ಲಿ ನನ್ನ ತಂಗಿ ಕರೆ ಮಾಡಿ, ಶ್ರೀಮತಿ ಪ್ರೇಮಾ, ನಂದೀಶ, ಪ್ರೇಮಾರವರ ತಂದೆ ನನ್ನ ಮೇಲೆ ಗಲಾಟೆಯನ್ನು ಮಾಡಿ, ಕೆಟ್ಟ ಪದಗಳಿಂದ ಬೈಯು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದು, ಕೂಡಲೇ ಮನೆಯಿಂದ ಹೊರಟಿದ್ದು, ಮಾರ್ಗ ಮಧ್ಯೆ ನನ್ನ ತಂಗಿ ಹಲವಾರು ಬಾರಿ ಕರೆ ಮಾಡಿ ಮೇಲ್ಕಂಡವರು ತನಗೆ ಮತ್ತು ತನ್ನ ಗಂಡ ಸೋಮಶೇಖರವರಿಗೆ ಹೊಡೆಯುತ್ತಿದ್ದಾರೆ ಎಂದು ಮತ್ತು ಚಾಕುವಿನಿಂದ ತಿವಿಯಲು ಬಂದಿರುತ್ತಾರೆಂದು ತಿಳಿಸುತ್ತಿದ್ದರು.
Kavya Gowda: ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡಗೆ ಸಂಬಂಧಿಯಿಂದಲೇ ರೇ*ಪ್ ಬೆದರಿಕೆ, ಪತಿಯ ಮೇಲೂ ಹಲ್ಲೆ
ನಾವು ಈ ಕುರಿತು ಸಹಾಯಕ್ಕಾಗಿ ಪೊಲೀಸ್ ಠಾಣೆಗೆ ಕರೆ ಮಾಡಿ ರಾತ್ರಿ 8.45 ಗಂಟೆಗೆ ನನ್ನ ತಂಗಿಯ ಮನೆಗೆ ಬಂದು ನನ್ನ ತಂಗಿ ಮತ್ತೆ ಆಕೆಯ ಗಂಡನ ಮೇಲೆ ಗಲಾಟೆ ಮಾಡಿ ಹೊಡೆದವರಲ್ಲಿ ಕೇಳಲಾಗಿ, ಅವರು ನನಗೆ ಕೆಟ್ಟ ಪದಗಳಿಂದ ಬೈಯು ನಂದೀಶ, ಪ್ರೇಮಾ ಮತ್ತು ಅವರ ತಂದೆ ಕೈಗಳಿಂದ ನನಗೆ ಹೊಡೆದು, ಕತ್ತಿನ ಭಾಗವನ್ನು ಹಿಡಿದು ಕಾಲುಗಳಿಂದ ಒದ್ದಿರುತ್ತಾರೆ. ನಿನ್ನೆಯು ನಿಮ್ಮ ಮನೆಯವರನ್ನು ಸಾಯಿಸದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ನನ್ನನ್ನು ಮುಂದೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿರುತ್ತಾರೆ. ನಾನು ಗಾಯಗೊಂಡಿದ್ದ ನನ್ನ ತಂಗಿ ಕಾವ್ಯ ಗೌಡ ಮತ್ತು ಬಾವ ಸೋಮಶೇಖರ ಅವರನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟು, ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ನನ್ನ ಮೇಲೆ ಗಲಾಟೆ ಮಾಡಿ ಕೆಟ್ಟ ಪದಗಳಿಂದ ಬೈಯ್ದು ಬೆದರಿಕೆ ಹಾಕಿ, ಆಕ್ರಮ ತಡೆ ಮಾಡಿರುವ ಪ್ರೇಮಾ, ನಂದೀಶ ಮತ್ತು ಪ್ರೇಮಾ ಅವರ ತಂದೆಯ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು.
-ಇದು ನಟಿ ಕಾವ್ಯಾ ಗೌಡ ಅವರ ಸಹೋದರಿ ಭವ್ಯಾ ಗೌಡ ನೀಡಿದ ದೂರಿನ ಆಧಾರ ಮೇಲೆ ದಾಖಲಾಗಿರುವ ಎಫ್‌ಐಆರ್ ಆಗಿದೆ. ಸದ್ಯ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.