ಬೆಂಗಳೂರು, ಅ. 18: ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ʼಕಾಂತಾರ ಚಾಪ್ಟರ್ 1ʼ (Kantara Chapter 1) ಮೂಲಕ ಸ್ಯಾಂಡಲ್‌ವುಡ್ ಜಾಗತಿಕ ಚಿತ್ರರಂಗದಲ್ಲೇ ಮತ್ತೊಮ್ಮೆ ತನ್ನ ಛಾಪು ಮೂಡಿಸಿದೆ. ಉತ್ತಮ ಕಥೆ, ಕಾಡುವ ಚಿತ್ರಕಥೆ, ಮನಮುಟ್ಟುವ ನಟನೆ, ಗಮನ ಸೆಳೆಯುವ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಇದ್ದರೆ ಭಾಷೆಯ ಹಂಗಿಲ್ಲದೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಾರೆ ಎನ್ನುವುದಕ್ಕೆ ʼಕಾಂತಾರ ಚಾಪ್ಟರ್ 1ʼ ಸ್ಪಷ್ಟ ಉದಾಹರಣೆ. ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಗೆ ಕಂಡ ಈ ಚಿತ್ರ 16 ದಿನಗಳಲ್ಲಿ 725 ಕೋಟಿ ರೂ. ಗಳಿಸಿದೆ. ಆ ಮೂಲಕ ಬಾಲಿವುಡ್‌ನ ದಿಗ್ಗಜರಾದ ಸಲ್ಮಾನ್ ಖಾನ್, ರಣಬೀರ್ ಕಪೂರ್ ಅವರ ಬಾಕ್ಸ್ ಆಫೀಸ್ ಕಲೆಕ್ಷನ್ ಮೀರಿ ಮುನ್ನುಗ್ಗುತ್ತಿದೆ. ದೀಪಾವಳಿ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಮುಂದಿನ ದಿನಗಳಲ್ಲಿ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ ಈ ವರ್ಷ ಭಾರತೀಯ ಚಿತ್ರರಂಗದಲ್ಲೇ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದೆ.
ಚಿತ್ರ ತೆರೆಕಂಡ 16ನೇ ದಿನವಾದ ಅಕ್ಟೋಬರ್ 17ರಂದು 8.5 ಕೋಟಿ ರೂ. ದೋಚಿಕೊಂಡಿದೆ. ಇದುವರೆಗಿನ ದಿನದ ಅತಿ ಕಡಿಮೆ ಕಲೆಕ್ಷನ್ ಇದಾಗಿದೆ. ಅದಾಗ್ಯೂ ಹಲವು ಟಾಪ್ ನಟರ ಚಿತ್ರದ ಮೊದಲ ದಿನದ ಗಳಿಕೆಗಿಂತ ಹೆಚ್ಚು ಎನ್ನುವುದು ವಿಶೇಷ. ಇದರೊಂದಿಗೆ ಭಾರತವೊಂದರಲ್ಲೇ ʼಕಾಂತಾರ ಚಾಪ್ಟರ್ 1' 493.75 ಕೋಟಿ ರೂ. ಗಳಿಸಿದಂತಾಗಿದೆ. ಜಾಗತಿಕವಾಗಿ ಗಳಿಕೆ 725 ಕೋಟಿ ರೂ. ದಾಟಿದೆ.
ʼಕಾಂತಾರ ಚಾಪ್ಟರ್ 1' ಚಿತ್ರದ ದೀಪಾವಳಿ ಟ್ರೈಲರ್:
ಈ ಸುದ್ದಿಯನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
ಹಲವು ದಾಖಲೆ ಉಡೀಸ್
ಸದ್ಯ ʼಕಾಂತಾರ ಚಾಪ್ಟರ್ 1' ಜಾಗತಿಕ ಕಲೆಕ್ಷನ್ ಮೂಲಕ ಹಲವು ಸೂಪರ್ ಸ್ಟಾರ್‌ಗಳ ದಾಖಲೆಗಳನ್ನು ಉಡೀಸ್ ಮಾಡಿದೆ. ಬಾಲಿವುಡ್‌ನ ಸನ್ನಿ ಡಿಯೋಲ್ ನಟನೆಯ ʼಗದರ್ 2' (686 ಕೋಟಿ ರೂ.), ಸಲ್ಮಾನ್ ಖಾನ್ ಅವರ ʼಸುಲ್ತಾನ್ʼ (627 ಕೋಟಿ ರೂ.), ರಣಬೀರ್ ಕಪೂರ್ ಅಭಿನಯದ ʼಸಂಜುʼ (588 ಕೋಟಿ ರೂ.), ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ʼಕೂಲಿʼ (675 ಕೋಟಿ ರೂ.) ಚಿತ್ರಗಳ ಕಲೆಕ್ಷನ್ ಮೀರಿದೆ.
ಇತಿಹಾಸ ಬರೆಯಲು ಸಜ್ಜು
ಈ ಮಧ್ಯೆ ʼಕಾಂತಾರ ಚಾಪ್ಟರ್ 1' ಈ ವರ್ಷದ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ ಎನಿಸಿಕೊಳ್ಳುವ ಹಾದಿಯಲ್ಲಿದೆ. 2025ರಲ್ಲಿ ತೆರೆಕಂಡ ಭಾರತೀಯ ಚಿತ್ರಗಳ ಪೈಕಿ ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೋಡಿಯ ʼಛಾವಾʼ ಮೊದಲ ಸ್ಥಾನದಲ್ಲಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಸಿನಿಮಾ ಜಾಗತಿಕವಾಗಿ 807 ಕೋಟಿ ರೂ. ಬಾಚಿಕೊಂಡಿದೆ. ಇನ್ನೇನು 82 ಕೋಟಿ ರೂ. ದಾಟಿದರೆ ʼಕಾಂತಾರ ಚಾಪ್ಟರ್ 1' ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಳ್ಳಲಿದೆ. ಇದೇ ರೀತಿ ಮುಂದುವರಿದರೆ ಈ ಸಾಧನೆ ಕಷ್ಟವೇನಲ್ಲ ಎನ್ನುವುದು ಸಿನಿ ತಜ್ಞರ ಅಭಿಮತ.
2022ರಲ್ಲಿ ರಿಲೀಸ್ ಆದ ʼಕಾಂತಾರʼದ ಪ್ರೀಕ್ವೆಲ್ ಆಗಿರುವ ʼಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಗುಲ್ಶನ್ ದೇವಯ್ಯ, ಜಯರಾಮ್, ರಾಕೇಶ್ ಪೂಜಾರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.