ಬೆಂಗಳೂರು, ಅ. 22: ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್ ಆದ ʼಕಾಂತಾರ ಚಾಪ್ಟರ್ 1' (Kantara Chapter 1) ಸದ್ಯ ಬಾಕ್ಸ್ ಆಫೀಸ್‌ನಲಿ ಅಬ್ಬರಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದಲ್ಲಿ, ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಪ್ರೇಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ರಿಲೀಸ್ ಆದ 20 ದಿನಗಳಲ್ಲಿ ಜಾಗತಿಕವಾಗಿ 750 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ತೆರೆಮೇಲೆ ಮೂಡಿರುವ ದೃಶ್ಯ ವೈಭವಕ್ಕೆ ನೋಡುಗರು ಮನ ಸೋತಿದ್ದು,ವ ದೀಪಾವಳಿ ವೇಳೆ ಕಲೆಕ್ಷನ್ ಮತ್ತೆ ಹೆಚ್ಚಾಗಿದೆ. ಹೀಗೆ ಸಾಗಿದರೆ ಕೆಲವೇ ದಿನಗಳಲ್ಲಿ ಈ ವರ್ಷ ಅತೀ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಳ್ಳಲಿದೆ. ಇದರೊಂದಿಗೆ ಸಿನಿಮಾತಂಡ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.
ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತತಿದ್ದಂತೆ ಇಂಗ್ಲಿಷ್ ಅವತರಣಿಕೆಯ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್ 31ರಂದು ವಿಶ್ವಾದ್ಯಂತ ಇಂಗ್ಲಿಷ್ ʼಕಾಂತಾರ ಚಾಪ್ಟರ್ 1ʼ ತೆರೆೆಗೆ ಬರಲಿದೆ. ಕನ್ನಡದ ತಯಾರಾದ ಈ ಚಿತ್ರವನ್ನು ವಿವಿಧ ಭಾಷೆಗಳಿಗೆ ಡಬ್ ಮಾಡಲಾಗಿದೆ.
ರಿಷಬ್ ಶೆಟ್ಟಿ ಅವರ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Kantara Chapter 1 Collection: ದೀಪಾವಳಿ ವೇಳೆ ಮತ್ತೆ ಹೆಚ್ಚಾಯ್ತು ʼಕಾಂತಾರ ಚಾಪ್ಟರ್ 1' ಕಲೆಕ್ಷನ್; 1 ಸಾವಿರ ಕೋಟಿ ರೂ. ಗುರಿಗೆ ಇನ್ನಷ್ಟು ಸನಿಹ
ಈಗಾಗಲೇ ವಿವಿಧ ಭಾಷೆಗಳಲ್ಲಿ ಜಾಗತಿಕ ಪ್ರೇಕ್ಷಕರನ್ನು ತಲುಪಿರುವ ಚಿತ್ರ ಇಂಗ್ಲಿಷ್ ಮೂಲಕ ಇನ್ನಷ್ಟು ಮಂದಿಯ ಗಮನ ಸೆಳೆಯಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ʼʼದೈವಿಕ ಅನುಭವವು ಭಾಷೆಯ ಗಡಿಯನ್ನು ಮೀರಲಿದೆ. ʼಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ಜಾಗತಿಕವಾಗಿ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ. ನಂಬಿಕೆ, ಸಂಸ್ಕೃತಿಯ ಪಯಣವನ್ನು ಅನುಭವಿಸಿʼʼ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ಇಂಗ್ಲಿಷ್ ವರ್ಷನ್ ಇನ್ನಷ್ಟು ಟ್ರಿಮ್ ಆಗಲಿದ್ದು, ಚಿತ್ರದ ಕಾಲಾವಧಿ ಕೊಂಚ ತಗ್ಗಲಿದೆ. ಇದರ ಅವಧಿ 2 ಗಂಟೆ 14 ನಿಮಿಷ ಮತ್ತು 45 ಸೆಕೆಂಡ್ ಇರಲಿದೆ.
2022ರಲ್ಲಿ ತೆರೆಕಂಡ ಕಂಡಿದ್ದ ʼಕಾಂತಾರʼ ಕೂಡ ಜಾಗತಿಕ ಪ್ರೇಕ್ಷರಿಗೆ ತಲುಪಿತ್ತು. ಕರಾವಳಿಯ ವಿಶಿಷ್ಟ ಸಂಸ್ಕೃತಿ, ಭೂತಾರಾಧನೆಯನ್ನು ವಿದೇಶಿಗರೂ ಕಣ್ತುಂಬಿಕೊಂಡಿದ್ದರು. ಹೀಗಾಗಿ ʼಕಾಂತಾರʼದ ಪ್ರೀಕ್ವೆಲ್ ಆಗಿರುವ ʼಕಾಂತಾರ ಚಾಪ್ಟರ್ 1' ಬಗ್ಗೆ ಇಂಗ್ಲಿಷ್ ಸಿನಿಪ್ರಿಯರಿಗೂ ಸಾಕಷ್ಟು ಕುತೂಹಲವಿದೆ. ಈಗಾಗಲೇ ಚಿತ್ರತಂಡ ಆಸ್ಕರ್ ನಾಮ ನಿರ್ದೇಶನಕ್ಕೆ ಸಿನಿಮಾವನ್ನು ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಅದ್ಧೂರಿ ಮೇಕಿಂಗ್, ಅದ್ಭುತ ಸಿನಿಮಾಟೋಗ್ರಫಿ ಮತ್ತು ಸಂಗೀತ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದು, ಇಂಗ್ಲಿಷ್ ಚಿತ್ರಪ್ರೇಮಿಗಳನ್ನು ಆಕರ್ಷಿಸಲಿದೆ.
4ನೇ ಶತಮಾನದಲ್ಲಿ, ಕದಂಬರ ಆಡಳಿತದ ಕಾಲದಲ್ಲಿ ಕರಾವಳಿಯಲ್ಲಿ ನಡೆಯುವ ಕಾಲ್ಪನಿಕ ಕಥೆಗೆ ರಿಷಬ್ ಚಿತ್ರದ ರೂಪ ನೀಡಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಮುಖ್ಯ ಪಾತ್ರಗಳಲ್ಲಿ ಬಾಲಿವುಡ್ ನಟ ಗುಲ್ಶನ್ ದೇವಯ್ಯ, ಮಲಯಾಳಂ ಕಲಾವಿದ ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ದಿ. ರಾಕೇಶ್ ಪೂಜಾರಿ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಹಿನ್ನೆಲೆ ಸಂಗೀತವಿದೆ. ʼಕಾಂತಾರʼದಂತೆಯೇ ಇದು ತುಳುನಾಡಿನ ಸಂಸ್ಕೃತಿಯನ್ನು, ಅಲ್ಲಿನ ಜನಜೀವನವನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಸಫಲವಾಗಿದೆ.