ಚೆನ್ನೈ: ಅಕ್ಟೋಬರ್ 2ರಂದು ʼಕಾಂತಾರ: ಚಾಪ್ಟರ್ 1ʼ (Kantara Chapter 1) ಚಿತ್ರ ಬಿಡುಗಡೆಯಾಗಿ ಮೊದಲ ಶೋ ಮುಗಿದಿದ್ದಷ್ಟೇ. ಪ್ರೇಕ್ಷಕರ ಹುಚ್ಚಾಟ ಆಗಲೇ ಆರಂಭವಾಗಿ ಬಿಟ್ಟಿತು. ಚಿತ್ರ ನೋಡಿದ ಪ್ರೇಕ್ಷಕನೊಬ್ಬ ಬೆಂಗಳೂರಿನಲ್ಲಿ ಥಿಯೇಟರ್ ಒಂದರ ಹೊರಗೆ ದೈವ ಮೈಮೇಲೆ ಬಂದಂತೆ ಕಿರುಚಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿತು. ಅದಾದ ಬಳಿಕ ರಾಜ್ಯದ ಒಂದೆರಡು ಕಡೆ ಮಹಿಳೆಯರು ಥಿಯೇಟರ್ ಒಳಗೆ ಮೈಮೇಲೆ ಭೂತ ಬಂದಂತೆ ವರ್ತಿಸಿ ಅತಿರೇಕದ ವರ್ತನೆ ತೋರಿದರು (Viral Video). ಇದೀಗ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೈವದಂತೆ ವೇಷ ಧರಿಸಿ ಥಿಯೇಟರ್‌ಗೆ ನುಗ್ಗಿ ನೃತ್ಯ ಮಾಡಿದ್ದಾನೆ.
ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದ ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಕಾಂತಾರ: ಚಾಪ್ಟರ್ 1ʼ ಚಿತ್ರದಲ್ಲಿ ಭೂತಾರಾಧನೆಯೇ ಮುಖ್ಯ ಕಥಾವಸ್ತು. ರಿಷಬ್ ಶೆಟ್ಟಿ ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ತೆರೆಮೇಲೆ ತಂದಿದ್ದಾರೆ. ಇದನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದು, ಕೆಲವರು ಅತಿರೇಕದ ವರ್ತನೆ ತೋರುತ್ತಿದ್ದಾರೆ.
ಥಿಯೇಟರ್‌ಗೆ ದೈವದ ವೇಷ ಧರಿಸಿ ಬಂದ ವ್ಯಕ್ತಿಯ ವಿಡಿಯೊ:
ಈ ಸುದ್ದಿಯನ್ನೂ ಓದಿ: Kantara: Chapter 1: ಇದೇ ನೋಡಿ ʼಕಾಂತಾರ: ಚಾಪ್ಟರ್ 1' ಚಿತ್ರದ ಶೂಟಿಂಗ್ ನಡೆದ ಸ್ಥಳ
ಭೂತಾರಾಧನೆಗೆ ತುಳುನಾಡಿನಲ್ಲಿ ವಿಶಿಷ್ಟ ಸ್ಥಾನವಿದ್ದು, ಸಂಸ್ಕೃತಿಯ ಬಹುಮುಖ್ಯ ಭಾಗವೇ ಆಗಿದೆ. ಧಾರ್ಮಿಕ ದೃಷ್ಟಿಯಿಂದಲೂ ಇದು ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ದೈವದ ಅನುಕರಣೆಗೆ ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ, ಮನವಿ ಮಾಡಿದರೂ ಮತ್ತೆ ಮತ್ತೆ ಇಂತಹ ಘಟನೆ ಪುನರಾವರ್ತನೆಯಾಗುತ್ತಲೇ ಇದೆ. 2022ರಲ್ಲಿ ʼಕಾಂತಾರʼ ಚಿತ್ರ ರಿಲೀಸ್ ಆದಾಗಲೂ ಇದೇ ರೀತಿಯ ಘಟನೆ ನಡೆದಿದ್ದವು.
ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ದಿಂಡಿಗಲ್‌ನ ಥಿಯೇಟರ್‌ಗೆ ವ್ಯಕ್ತಿಯೊಬ್ಬ ಪಂಜುರ್ಲಿ ದೈವದಂತೆ ವೇಷ-ಭೂಷಣ ಧರಿಸಿ ಆಗಮಿಸಿರುವುದು ಕಂಡುಬಂದಿದೆ. ಹಿನ್ನೆಲೆಯಲ್ಲಿ ʼಕಾಂತಾರʼ ಚಿತ್ರದ ʼವರಾಹ ರೂಪಂʼ ಹಾಡು ಕೇಳಿ ಬರುತ್ತಿದ್ದು, ಆತ ದೈವದಂತೆ ನರ್ತಿಸಿದ್ದಾನೆ. ಆತನ ಈ ಅತಿರೇಕದ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದು, ನಮ್ಮ ಆಚಾರ-ವಿಚಾರವನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಚಿತ್ರಕ್ಕಾಗಿ ದೈವದ ದೃಶ್ಯದ ಶೂಟಿಂಗ್ ನಡೆಸುವ ಮುನ್ನ ದೈವದ ಅನುಮತಿ ಕೇಳಿದ್ದಾರೆ. ದೈವದ ಅಣತಿಯಂತೆ ಬಳಸಿಕೊಂಡಿದ್ದಾರೆ. ಆದರೆ ಪ್ರೇಕ್ಷಕರ ಹುಚ್ಚಾಟ ಮಿರಿ ಮೀರಿದ್ದು, ಈ ರಿತಿ ಮಾಡದಂತೆ ಹಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ದಾಖಲೆಯ ಕಲೆಕ್ಷನ್
ʼಕಾಂತಾರ: ಚಾಪ್ಟರ್ 1' ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. 2 ದಿನಗಳಲ್ಲಿ 100 ಕೋಟಿ ರೂ. ದೋಚಿಕೊಂಡಿದ್ದು, 4 ದಿನಗಳಲ್ಲಿ 200 ಕೋಟಿ ರೂ. ಬಾಚಿಕೊಂಡಿದೆ. ಆ ಮೂಲಕ ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರ ಎನಿಸಿಕೊಂಡಿದೆ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ಮಲಯಾಳಂ ನಟ ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಅಭಿನಯಿಸಿದ್ದಾರೆ.