Actor Jayaram: ʼಕಾಂತಾರʼದ ದೊರೆ ರಾಜಶೇಖರ ಪಾತ್ರದಲ್ಲಿ ಮಿಂಚಿದ ಜಯರಾಮ್ ಹಿನ್ನೆಲೆ ಏನು? ಈ ಹಿಂದೆಯೂ ಕನ್ನಡ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ಸ್ಟಾರ್
Kantara: Chapter 1: ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಚಿತ್ರ ʼಕಾಂತಾರ: ಚಾಪ್ಟರ್ 1' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾದಲ್ಲಿ ರಾಜಶೇಖರ್ ಪಾತ್ರದಲ್ಲಿ ಮಲಯಾಳಂ ನಟ ಜಯರಾಮ್ ಕಾಣಿಸಿಕೊಂಡಿದ್ದು, ಅವರ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

-

ತಿರುವನಂತಪುರಂ: ಸಿನಿಪ್ರಿಯರ ಬಹು ದಿನಗಳ ಕಾಯುವಿಕೆಗೆ ಬ್ರೇಕ್ ಹಾಕಿ ಕೊನೆಗೂ ʼಕಾಂತಾರ: ಚಾಪ್ಟರ್ 1' (Kantara: Chapter 1) ಚಿತ್ರ ರಿಲೀಸ್ ಆಗಿದೆ. ಅಕ್ಟೋಬರ್ 2ರಂದು 30 ದೇಶಗಳಲ್ಲಿ, ಸುಮಾರು 7 ಭಾಷೆಗಳಲ್ಲಿ ಇದು ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಮತ್ತೊಮ್ಮೆ ಎಲ್ಲೆಡೆ ಸ್ಯಾಂಡಲ್‌ವುಡ್ ಕಂಪನ್ನು ಹರಡುತ್ತಿದೆ. ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನಕ್ಕೆ ಪ್ರೇಕ್ಷಕರು ಮನ ಸೋತಿದ್ದು, ತೆರೆಮೇಲಿನ ಸುಮಾರು 3 ಗಂಟೆಗಳ ದೃಶ್ಯ ವೈಭವನ್ನು ಶರಣಾಗಿದ್ದಾರೆ. ಚಿತ್ರದಲ್ಲಿ ಗಮನ ಸೆಳೆದ ಮತ್ತೊಂದು ಪಾತ್ರ ರಾಜಶೇಖರ. ಈ ಪಾತ್ರವನ್ನು ಮಲಯಾಳಂನ ಸೂಪರ್ ಸ್ಟಾರ್, ಬಹುಭಾಷಾ ನಟ ಜಯರಾಮ್ (Actor Jayaram) ನಿರ್ವಹಿಸಿದ್ದು, ಅವರ ಅಭಿನಯಕ್ಕೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದ ʼಕಾಂತಾರʼ 2022ರಲ್ಲಿ ಯಾವುದೇ ಸದ್ದುಗದ್ದಲ, ನಿರೀಕ್ಷೆ ಇಲ್ಲದೆ ತೆರೆಗೆ ಬಂದಿತ್ತು. ರಿಷಬ್ ಶೆಟ್ಟಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಅದಾಗ್ಯೂ ಚಿತ್ರದ ಬಗ್ಗೆ ಅಷ್ಟೇನೂ ಕುತೂಹಲ ಮೂಡಿರಲಿಲ್ಲ. ಚಿತ್ರ ತೆರೆಗೆ ಬಂದ ಬಳಿಕ ಸಾಕಷ್ಟು ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಜತೆಗೆ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಅಧಿಕ ದೋಚಿಕೊಂಡಿತು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಿಷಬ್ ಪ್ರೀಕ್ವೆಲ್ ಆಗಿ ʼಕಾಂತಾರ: ಚಾಪ್ಟರ್ 1ʼ ಘೋಷಿಸಿದರು. ಅದಾಗಿ 3 ವರ್ಷಗಳ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತೆರೆಗೆ ಬಂದಿದ್ದು, ತೆರೆಮೇಲೆ ಮೂಡಿ ಬಂದ ದೈವ ದರ್ಶನಕ್ಕೆ ವೀಕ್ಷಕರು ರೋಮಾಂಚನಗೊಂಡಿದ್ದಾರೆ.
ಜಯರಾಮ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Colonel Vasanth Venugopal: ʼಕಾಂತಾರʼದ ಕನಕವತಿ ರುಕ್ಮಿಣಿ ತಂದೆ, ಅಶೋಕ ಚಕ್ರ ಪುರಸ್ಕೃತ ಕರ್ನಲ್ ವಸಂತ್ ವೇಣುಗೋಪಾಲ್ ಬಗ್ಗೆ ನಿಮಗೆಷ್ಟು ಗೊತ್ತು?
ಗಮನ ಸೆಳೆದ ಜಯರಾಮ್
ಸುಮಾರು 4-5ನೇ ಶತಮಾನದಲ್ಲಿ, ಕದಂಬರ ಆಡಳಿತದ ಕಾಲದಲ್ಲಿ ಕರಾವಳಿ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದೆ. ಬಾಂಗ್ರಾ ಎನ್ನುವ ಸಾಮ್ರಾಜ್ಯ ಮತ್ತು ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಸಂಘರ್ಷವೇ ಕಥೆಯ ಮುಖ್ಯ ತಿರುಳು. ಬಾಂಗ್ರಾದ ಸಾಮಂತ ದೊರೆ ರಾಜಶೇಖರ ಪಾತ್ರದಲ್ಲಿ ಜಯರಾಮ್ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಮಗ ಕುಲಶೇಖರ (ಗುಲ್ಶನ್ ದೇವಯ್ಯ)ನಿಗೆ ಪಟ್ಟಾಭಿಷೇಕ ಮಾಡುವ ರಾಜಶೇಖರ ಅದಾದ ಬಳಿಕ ಇದಕ್ಕಾಗಿ ಪ್ರಾಯಶ್ಚಿತ ಪಡುತ್ತಾನೆ. ಮಗ ಕೈತಪ್ಪಿ ಹೋಗುತ್ತಿದ್ದಾನೆ, ಅಡ್ಡ ದಾರಿ ಹಿಡಿಯುತ್ತಿದ್ದಾನೆ ಎನ್ನುವಾಗ ಚಡಪಡಿಸುತ್ತಾನೆ. ಬುದ್ಧಿ ಹೇಳಿ ಸರಿ ದಾರಿಗೆ ತರಲು ಯತ್ನಿಸುತ್ತಾನೆ. ಹೀಗೆ ವಿಭಿನ್ನ ನೆಲೆಯಲ್ಲಿ, ಕಾಲಘಟ್ಟದಲ್ಲಿ ರಾಜಶೇಖರನ ಪಾತ್ರ ಸಾಗುತ್ತದೆ. ತಂದೆಯಾಗಿ, ರಾಜನಾಗಿ, ಸೇಡು ತೀರಿಸಲು ತಹತಹಿಸುವ ವ್ಯಕ್ತಿಯಾಗಿ ಜಯರಾಮ್ ಅದ್ಭುತ ಅಭಿನಯ ನೀಡಿದ್ದಾರೆ.
ಜಯರಾಮ್ ಪಾತ್ರಕ್ಕೂ ಸಾಕಷ್ಟು ಸ್ಕ್ರೀನ್ ಸ್ಪೇಸ್ ಸಿಕ್ಕಿದ್ದು, ಅದನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ಕೊನೆಯವರೆಗೂ ಅವರ ಪಾತ್ರ ಸಾಗುತ್ತದೆ. ಜಯರಾಮ್ ಅಭಿಮಾನಿಗಳೂ ಈ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಅಭಿನಯಕ್ಕೆ ಒತ್ತು ಇರುವ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಅವರನ್ನು ಈ ರೀತಿ ತೆರೆಮೇಲೆ ನೋಡಲು ಸಂತಸವಾಗುತ್ತದೆ ಎಂದಿದ್ದಾರೆ. ಜಯರಾಮ್ ಕೂಡ ಇಂತಹದ್ದೊಂದು ಪಾತ್ರ ನೀಡಿದ್ದಕ್ಕಾಗಿ ರಿಷಬ್ ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ.
ಬಹುಭಾಷಾ ನಟ
1965ರಲ್ಲಿ ಜನಿಸಿದ ಜಯರಾಮ್ ಇದುವರೆಗೆ ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಸಂಸ್ಕೃತ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ನಟಿಸಿದ್ದಾರೆ. 1988ರಲ್ಲಿ ತೆರೆಕಂಡ ʼಅಪಾರಂʼ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿ ಮಾಲಿವುಡ್‌ನ ಟಾಪ್ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಮೋಹನ್‌ಲಾಲ್-ಮಮ್ಮುಟ್ಟಿ ಅವರಂತಹ ಸ್ಟಾರ್ ನಟರ ಮಧ್ಯೆಯೂ ತಮ್ಮ ಪ್ರತಿಭೆಯಿಂದಲೇ ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ.
ವಿಶೇಷ ಎಂದರೆ ʼಕಾಂತಾರ: ಚಾಪ್ಟರ್ 1ʼಗಿಂತ ಮೊದಲೇ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದುವೇ 2023ರಲ್ಲಿ ರಿಲೀಸ್ ಆದ ʼಘೋಸ್ಟ್ʼ. ಶಿವ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಈ ಚಿತ್ರದಲ್ಲಿ ಜಯರಾಮ್ ಎಸಿಪಿ ಚೆಂಗಪ್ಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.