Kantara: Chapter 1: ಇದೇ ನೋಡಿ ʼಕಾಂತಾರ: ಚಾಪ್ಟರ್ 1' ಚಿತ್ರದ ಶೂಟಿಂಗ್ ನಡೆದ ಸ್ಥಳ
ಬೆಂಗಳೂರು: ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ, ಈ ವರ್ಷದ ಬಹುನಿರೀಕ್ಷಿತ ಚಿತ್ರ ʼಕಾಂತಾರ: ಚಾಪ್ಟರ್ 1' ಕೊನೆಗೂ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್-ರಿಷಬ್ ಶೆಟ್ಟಿ ಕಾಂಬಿನೇಷನ್ನ ಈ ಚಿತ್ರ 3 ವರ್ಷಗಳ ಹಿಂದೆ ಘೋಷಣೆಯಾದಾಗಿನಿಂದಲೇ ಕುತೂಹಲ ಮೂಡಿಸಿತ್ತು. 'ಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಅದ್ಧೂರಿಯಾಗಿ ಮೂಡಿ ಬಂದಿದೆ. ರಿಲೀಸ್ ಆಗಿ 2ನೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿದ್ದು, ಆ ಮೂಲಕ ಸ್ಯಾಂಡಲ್ವುಡ್ ಮತ್ತೊಮ್ಮೆ ಸದ್ದು ಮಾಡತೊಡಗಿದೆ. ಕದಂಬ ರಾಜಾಡಳಿತ ಕಾಲದ ಕಥೆಯನ್ನು ರಿಷಬ್ ಈ ಭಾಗದಲ್ಲಿ ಹೇಳಿದ್ದು, ನೈಜ ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ, ಹಿನ್ನೆಲೆ ಸಂಗೀತಕ್ಕೆಕ್ಕ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶೇಷ ಎಂದರೆ ಇಡೀ ಚಿತ್ರವನ್ನು ಕರ್ನಾಟಕದಲ್ಲೇ ಚಿತ್ರೀಕರಿಸಲಾಗಿದೆ. ಅಂತಹ ಕೆಲವು ಸ್ಥಳಗಳ ವಿವರ ಇಲ್ಲಿದೆ.

-


ಕುಂದಾಪುರ
ಉಡುಪಿ ಜಿಲ್ಲೆಯ ಕುಂದಾಪುರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಕರಾವಾಳಿಯ ಬಹುಮುಖ್ಯ ಭಾಗ. ಇಲ್ಲಿ ದಟ್ಟ ಕಾಡುಗಳಿವೆ. ರಿಷಬ್ ಶೆಟ್ಟಿ ಅವರ ಊರು ಕೂಡ ಕುಂದಾಪುರವೇ. ಹೀಗಾಗಿ ಅವರು ʼಕಾಂತಾರʼ ಜತೆಗೆ ʼಕಾಂತಾರ: ಚಾಪ್ಟರ್ 1' ಚಿತ್ರದ ಶೂಟಿಂಗ್ಗಾಗಿ ಕುಂದಾಪುರದಲ್ಲಿನ ದಟ್ಟ ಕಾಡುಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಕೊಲ್ಲೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜತೆಗ ಕುಂದಾಪುರದಲ್ಲಿರುವ ಯುವಾ ಮೆರಿಡಿಯನ್ ಬೇ ಸ್ಟುಡಿಯೋದಲ್ಲಿ ʼಕಾಂತಾರ: ಚಾಪ್ಟರ್ 1' ಸಿನಿಮಾದ ಬಹುತೇಕ ಭಾಗದ ಶೂಟಿಂಗ್ ನಡೆದಿದೆ.

ಕೆರಾಡಿಯ ಮೂಡುಗಲ್ಲು
ರಿಷಬ್ ಶೆಟ್ಟಿ ಅವರ ಊರು ಕುಂದಾಪುರದ ಕೆರಾಡಿ ಎನ್ನುವ ಗ್ರಾಮ. ಇಲ್ಲಿನ ಮೂಡುಗಲ್ಲು ಎಂಬಲ್ಲಿ ಗುಹಾಂತರ ದೇವಾಲಯದಲ್ಲಿ, ಇದರಲ್ಲಿ ಶಿವ ಶ್ರೀ ಕೇಶವನಾಥೇಶ್ವರ ರೂಪದಲ್ಲಿ ನೆಲೆಸಿದ್ದಾನೆ ಎನ್ನುವ ಪ್ರತೀತಿ ಇದೆ. ಗುಹೆಯೊಳಗೆ ಇರುವ ಶಿವನ ಸನ್ನಿಧಿಗೆ ಭಕ್ತರು ಮೊಣಕಾಲೆತ್ತರವಿರುವ ನೀರಿನಲ್ಲಿ ಸಾಗಬೇಕು. ಪ್ರಕೃತಿ ಮತ್ತು ಧಾರ್ಮಿಕತೆ ಹದವಾಗಿ ಬೆರೆತಿರುವ ಈ ಪರಿಸರದಲ್ಲಿಯೂ ರಿಷಬ್ ಚಿತ್ರೀಕರಣ ನಡೆಸಿದ್ದಾರೆ. ರಿಷಬ್ ಈ ಹಿಂದೆ ಮೂಡಗಲ್ಲು ದೇಗುಲಕ್ಕೆ ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕರೆತಂದಿದ್ದರು.

ಮಾಣಿ ಜಲಾಶಯ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯ ʼಕಾಂತಾರ: ಚಾಪ್ಟರ್ 1' ಚಿತ್ರದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟಿನ ಸುತ್ತ ಹಚ್ಚ ಹಸುರಿನಿಂದ ಕಂಗೊಳಿಸುವ ಕಾಡು ಇದ್ದು, ಚಿತ್ರದ ಪ್ರಧಾನ ಆಕರ್ಷಣೆ ಎನಿಸಿಕೊಂಡಿದೆ. ಈ ಜಲಾಶಯದಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ ದೋಣಿ ಮಗುಚಿ ಅವಘಡ ಸಂಭವಿಸಿತ್ತು. ಈ ವೇಳೆ ರಿಷಬ್ ಮತ್ತು ತಂಡ ಯಾವುದೇ ಅಪಾಯವಿಲ್ಲದೆ ಪಾರಾಗಿತ್ತು.

ಸಕಲೇಶಪುರ
ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಸಕಲೇಶಪುರ ಕೂಡ ಕಾಡಿನಿಂದ ಸಮೃದ್ಧವಾಗಿದ್ದು, ಇಲ್ಲಿ ಚಿತ್ರದ ಪ್ರಮುಖ ಭಾಗವನ್ನು ಚಿತ್ರೀಕರಿಸಲಾಗಿದೆ. ಮುಖ್ಯ ಭಾಗದಲ್ಲಿ ಬರುವ ಯುದ್ಧದ ದೃಶ್ಯವನ್ನು ಸೆರೆ ಹಿಡಿದಿದ್ದು ಇಲ್ಲಿಯೇ. ಹಸುರಿನಿಂದ ಕೂಡಿದ ಭೂ ಪ್ರದೇಶ, ಅದನ್ನು ಆವರಿಸುವ ಮಂಜು ಸ್ವರ್ಗ ಸದೃಶ ವಾತಾವರನ ನಿರ್ಮಿಸುತ್ತದೆ. ಅದನ್ನು ಚಿತ್ರದಲ್ಲಿ ಸಮರ್ಥವಾಗಿ ಸೆರೆ ಹಿಡಿಯಲಾಗಿದೆ.

ಬುಡಕಟ್ಟು ಜನಾಂಗ-ರಾಜ ಮನೆತನದ ಸಂಘರ್ಷ
ʼಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿ ಕಾಡಿನ ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ನಡುವಿನ ಸಂಘರ್ಷವೇ ಮುಖ್ಯ ತಿರುಳು. ಹೀಗಾಗಿ ಚಿತ್ರದ ಬಹುತೇಕ ಭಾಗವನ್ನು ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಸುಮಾರು 250 ದಿನಗಳ ಕಾಲ ಶೂಟಿಂಗ್ ನಡೆದಿದೆ.