ಬೆಂಗಳೂರು: ಕೊನೆಗೂ ಸಿನಿಪ್ರಿಯರ ಬಹು ದಿನಗಳ ಆಸೆ ಈಡೇರುತ್ತಿದೆ. ಇಂತಹದ್ದೊಂದು ಕ್ಷಣಕ್ಕಾಗಿ ಕಾಯುತ್ತಿದ್ದ ಆ ಘಳಿಗೆ ಬಂದೇಬಿಟ್ಟಿದೆ. ನಾವು ಹೇಳಹೊರಟಿರುವುದು ಸಿನಿ ಜಗತ್ತೇ ಕುತೂಹಲದಿಂದ ಕಾದು ನೋಡುತ್ತಿರುವಕನ್ನಡ ಹೆಮ್ಮೆಯ ʼಕಾಂತಾರ ಚಾಪ್ಟರ್ 1' (Kantara Chapter 1) ಚಿತ್ರದ ಬಗ್ಗೆ. ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರ ರಿಲೀಸ್ ಆಗಲಿದೆ. ಈ ಮಧ್ಯೆ ಚಿತ್ರತಂಡ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ (Kantara Chapter 1 Trailer). ಹೌದು, ಸೆಪ್ಟೆಂಬರ್ 22ರ ಮಧ್ಯಾಹ್ನ 12:45ಕ್ಕೆ ಬಹುನಿರೀಕ್ಷಿತ ʼಕಾಂತಾರ ಚಾಪ್ಟರ್ 1ʼ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ʼಕಾಂತಾರʼದ ಮೂಲಕ ಹೊಸದೊಂದು ಲೋಕಕ್ಕೆ ಕರೆದೊಯ್ದ ರಿಷಬ್ ಶೆಟ್ಟಿ (Rishab Shetty) ಈ ಬಾರಿ ಯಾವ ರೀತಿಯ ಮ್ಯಾಜಿಕ್ ಮಾಡಿದ್ದಾರೆ ಎನ್ನುವುದನ್ನು ನೋಡಲು ಪ್ರೇಕ್ಷಕರು ಕೂತೂಹಲದಿಂದ ಕಾಯುತ್ತಿದ್ದಾರೆ. ವಿಜಯ್ ಕಿರಗಂದೂರು ಒಡೆತನದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Hombale Films) ಅದ್ಧೂರಿಯಾಗಿ ಚಿತ್ರ ತಯಾರಿಸಿದೆ.
ಬಹುಶಃ ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕ್ರೇಝ್ ಹುಟ್ಟುಹಾಕಿರುವ ಚಿತ್ರ ʼಕಾಂತಾರ ಚಾಪ್ಟರ್ 1'. 'ಕಾಂತಾರʼ ಸಿನಿಮಾ ಹಿಟ್ ಆದ ಸಂದರ್ಭದಲ್ಲಿ 2022ರಲ್ಲಿ ರಿಷಬ್ ಶೆಟ್ಟಿ ಅದರ ಪ್ರೀಕ್ವೆಲ್ ಆಗಿ ʼಕಾಂತಾರ ಚಾಪ್ಟರ್ 1' ಘೋಷಿಸಿದ್ದರು. ಅಂದಿನಿಂದ ಕುತೂಹಲ ಹುಟ್ಟುಹಾಕಿದ್ದ ಚಿತ್ರ ಬಗೆಗಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯ್ತು. ಬೃಹತ್ ಸೆಟ್ ಹಾಕಿ ಗುಟ್ಟಾಗಿ ಶೂಟಿಂಗ್ ನಡೆಸಿದ್ದ ರಿಷಬ್ ಆ್ಯಂಡ್ ಟೀಂ ಚಿತ್ರದ ಕುರಿತಾದ ಯಾವುದೇ ರಹಸ್ಯ ಹೊರಬಿಟ್ಟಿರಲಿಲ್ಲ. ರಿಷಬ್ ಬಿಟ್ಟರೆ ಬೇರೆ ಯಾರೆಲ್ಲ ನಟಿಸುತ್ತಾರೆ ಎನ್ನವ ಸಂಗತಿಯೂ ಇತ್ತೀಚಿನವರಗೆ ಹೊರ ಬಿದ್ದಿರಲಿಲ್ಲ.
ಈ ಸುದ್ದಿಯನ್ನೂ ಓದಿ: Kantara: Chapter 1: ʼಕಾಂತಾರ ಚಾಪ್ಟರ್ 1ʼ ಹವಾ ಶುರು; ರಿಷಬ್ ಶೆಟ್ಟಿ ಚಿತ್ರಕ್ಕೆ ಸ್ಟಾರ್‌ಗಳ ಸಾಥ್
ಕನ್ನಡ ಟ್ರೈಲರ್ ರಿಲೀಸ್ ಮಾಡೋದು ಯಾರು?
ಇದೀಗ ಚಿತ್ರದ ಕೆಲಸಗಳೆಲ್ಲ ಮುಗಿಯುವ ಹಂತಕ್ಕೆ ಬಂದಿದ್ದು ಟ್ರೈಲರ್ ದಿನಾಂಕ ಘೋಷಣೆಯಾಗಿದೆ. ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಸಿನಿಮಾ ಮೂಡಿಬಂದಿದೆ. ಆಯಾ ಭಾಷೆಯ ಸೂಪರ್ ಸ್ಟಾರ್‌ಗಳು ಏಕಕಾಲಕ್ಕೆ ಟ್ರೈಲರ್ ಅನಾವರಣಗೊಳಿಸಲಿದ್ದಾರೆ. ಹಿಂದಿಯಲ್ಲಿ ಹೃತಿಕ್ ರೋಷನ್, ತೆಲುಗಿನಲ್ಲಿ ಪ್ರಭಾಸ್, ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಕನ್ನಡದಲ್ಲಿ ಯಾರು ಬಿಡುಗಡೆ ಮಾಡಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಇದೀಗ ಈ ಗುಟ್ಟು ಕೂಡ ರಟ್ಟಾಗಲಿದೆ.
ಕನ್ನಡ ಜನತೆಯೇ ʼಕಾಂತಾರ ಚಾಪ್ಟರ್ 1ʼ ಕನ್ನಡ ಆವೃತ್ತಿಯ ಟ್ರೈಲರ್ ರಿಲೀಸ್ ಮಾಡಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ʼʼಕಾಂತಾರʼ ಸಿನಿಮಾವನ್ನು ಮೆಚ್ಚಿ ಬೆಳೆಸಿದ ಕನ್ನಡ ಜನತೆಯಿಂದ, ʼಕಾಂತಾರ ಚಾಪ್ಟರ್ 1ʼ ಕನ್ನಡ ಟ್ರೈಲರ್ ಬಿಡುಗಡೆ. ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ. #KantaraChapter1Trailer – ಇದೇ ಸೆಪ್ಟೆಂಬರ್ 22ರಂದು, ಮಧ್ಯಾಹ್ನ 12:45ಕ್ಕೆʼʼ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.
ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಮುಖ್ಯ ಪಾತ್ರಗಳಲ್ಲಿ ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಅಭಿನಯಿಸಿದ್ದಾರೆ. ʼಕಾಂತಾರʼಕ್ಕೆ ಸಂಗೀತ ನೀಡಿದ್ದ ಬಿ. ಅಜನೀಶ್ ಲೋಕನಾಥ್ ಈ ಭಾಗದಲ್ಲೂ ಮುಂದುವರಿದಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.