Kantara: Chapter 1: ʼಕಾಂತಾರ ಚಾಪ್ಟರ್ 1ʼ ಹವಾ ಶುರು; ರಿಷಬ್ ಶೆಟ್ಟಿ ಚಿತ್ರಕ್ಕೆ ಸ್ಟಾರ್‌ಗಳ ಸಾಥ್
Rishab Shetty: ಜಾಗತಿಕ ಸಿನಿ ರಸಿಕರ ಗಮನ ಸೆಳೆದ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ʼಕಾಂತಾರ: ಚಾಪ್ಟರ್ 1ʼ ಚಿತ್ರ ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಕಾಣಲಿದ್ದು, ಸೆಪ್ಟೆಂಬರ್ 22ರಂದು ಟ್ರೈಲರ್ ರಿಲೀಸ್ ಆಗಲಿದೆ. ವಿವಿಧ ಚಿತ್ರರಂಗದ ಸೂಪರ್ ಸ್ಟಾರ್‌ಗಳು ಟ್ರೈಲರ್ ಅನಾವರಣಗೊಳಿಸಲಿದ್ದಾರೆ.

-

ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಚಿತ್ರ ರಿಷಬ್ ಶೆಟ್ಟಿ (Rishab Shetty) ಅವರ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರಕ್ಕಾಗಿ ಈಗಾಗಲೇ ಪ್ಯಾನ್ ಇಂಡಿಯಾ ಮೀರಿ ಜಾಗತಿಕ ಸಿನಿಪ್ರೇಮಿಗಳು ಕಾದು ಕುಳಿತಿದ್ದಾರೆ. ಅಕ್ಟೋಬರ್ 2ರಂದು ಸುಮಾರು 30 ದೇಶಗಳಲ್ಲಿ ಕನ್ನಡ, ಇಂಗ್ಲಿಷ್ ಸೇರಿ 7 ಭಾಷೆಗಳಲ್ಲಿ ತೆರೆ ಕಾಣಲಿದೆ. ಬಿಡುಗಡೆಗೆ 10 ದಿನವಿರುವಾಗಲೇ ಚಿತ್ರದ ಬಗ್ಗೆ ಕ್ರೇಝ್ ಆರಂಭವಾಗಿದೆ. ಈ ಮಧ್ಯೆ ಚಿತ್ರತಂಡ ಸೆಪ್ಟೆಂಬರ್ 22ರಂದು ಟ್ರೈಲರ್ ರಿಲೀಸ್ ಮಾಡುವುದಾಗಿ ಘೋಷಿಸಿದೆ. ಇದಕ್ಕೆ ವಿವಿಧ ಚಿತ್ರರಂಗಗಳ ಸೂಪರ್ ಸ್ಟಾರ್‌ಗಳು ಕೈಜೋಡಿಸಿದ್ದು, ಸೆಪ್ಟೆಂಬರ್ 22ರ ಅಪರಾಹ್ನ 12:45ರಂದು ಟ್ರೈಲರ್ ರಿಲೀಸ್ ಮಾಡಲಿದ್ದಾರೆ.
ಟ್ರೈಲರ್ ಹಿಂದಿಯಲ್ಲಿ ಹೃತಿಕ್ ರೋಷನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಬಿಡುಗಡೆ ಮಾಡಲಿದ್ದು, ತೆಲುಗಿನಲ್ಲಿ ಪ್ರಭಾಸ್ ಅಥವಾ ಜೂ. ಎನ್‌ಟಿಆರ್ ಅನಾವರಣಗೊಳಿಸುವ ಸಾಧ್ಯತೆ ಇದೆ. ಇನ್ನುಳಿದ ಭಾಷೆಗಳ ವಿವರ ಇನ್ನಷ್ಟೇ ಹೊರ ಬೀಳಬೇಕಿದೆ.
When the force of nature meets the fire of a Superstar 🔥
— Rishab Shetty (@shetty_rishab) September 20, 2025
The Hindi Trailer of #KantaraChapter1 will be unveiled by the phenomenal @iHrithik Sir.
More legends. More languages.
The roar of #Kantara will now echo across the world. Stay tuned!#KantaraChapter1Trailer drops on… pic.twitter.com/IGOWv7CmlK
ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ, 2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ರಿಷಬ್ ಶೆಟ್ಟಿ ನಟಿಸುವ ಜತೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತುಳುನಾಡಿನ ಜಾನಪದ ನಂಬಿಕೆಗೆ ಅವರು ದೃಶ್ಯರೂಪ ಕೊಟ್ಟಿದ್ದು, ಅದ್ಧೂರಿಯಾಗಿ ಮೂಡಿ ಬಂದಿದೆ. ಸುಮಾರು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದು, ಈಗಾಗಲೇ ಟಿವಿ ರೈಟ್ಸ್, ಒಟಿಟಿ ರೈಟ್ಸ್‌ನಿಂದಲೇ 200 ಕೋಟಿ ರೂ.ಗಿಂತ ಅಧಿಕ ದೋಚಿಕೊಂಡಿದೆ ಎನ್ನಲಾಗಿದ್ದು, ಆ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಸಂಚಲ ಮೂಡಿಸಲು ಸಜ್ಜಾಗಿದೆ. 3 ವರ್ಷಗಳ ಹಿಂದೆ ತೆರೆಕಂಡ ʼಕಾಂತಾರʼ ಸುಮಾರು 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಅಧಿಕ ಬಾಚಿಕೊಂಡಿತ್ತು. ಈ ಬಾರಿ ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿಯೇ ನಿರ್ಮಿಸಿದ್ದು, ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ 250ಕ್ಕಿಂತ ಅಧಿಕ ದಿನಗಳ ಕಾಲ ಶೂಟಿಂಗ್ ನಡೆದಿದೆ. ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗಿದ್ದು, ಹಾಲಿವುಡ್ ತಂತ್ರಜ್ಞರು ಕೈ ಜೋಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara: Chapter 1 trailer : ಕಾಂತಾರ: ಚಾಪ್ಟರ್ 1' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಮೂಹೂರ್ತ ಫಿಕ್ಸ್; ಯಾವಾಗ ಗೊತ್ತಾ?
ಯುದ್ಧದ ದೃಶ್ಯವೇ ಹೈಲೈಟ್
ʼಕಾಂತಾರʼ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಯುದ್ಧದ ದೃಶ್ಯ ಗಮನ ಸೆಳೆದಿತ್ತು. ಈ ಭಾಗದಲ್ಲಿಯೂ ಯುದ್ಧದ ದೃಶ್ಯವೇ ಹೈಲೈಟ್ ಆಗಲಿದ್ದು, ಇದನ್ನು 28 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಅದರಲ್ಲಿಯೂ ರಿಷಬ್ ಶೆಟ್ಟಿ ಯಾವುದೇ ಡ್ಯೂಪ್ ಸಹಾಯವಿಲ್ಲದೆ ಸಾಹಸ ದೃಶ್ಯದಲ್ಲಿ ಭಾಗವಹಿಸಿದ್ದಾರೆ. ಇದಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟು ಕಲಿತಿದ್ದಾರೆ. ಕದಂಬ ರಾಜಾಡಳಿತ ಕಾಲದ ಕಥೆ ಇದರಲ್ಲಿರಲಿದ್ದು, ನಾಗಸಾಧುವಾಗಿಯೂ ರಿಷಬ್ ಶೆಟ್ಟಿ ನಟಿಸಿದ್ದಾರೆ.
ಪೇಯ್ಡ್ ಪ್ರೀಮಿಯರ್ ಶೋಗೆ ಮುಂದಾದ ಚಿತ್ರತಂಡ
ವಿಶೇಷ ಎಂದರೆ ಚಿತ್ರತಂಡ ಇದುವರೆಗೆ ಹೇಳಿಕೊಳ್ಳುವಂತಹ ಪ್ರಚಾರಕ್ಕೆ ಇಳಿದಿಲ್ಲ. ಅಲ್ಲೊಂದು ಇಲ್ಲೊಂದು ಪೋಸ್ಟರ್ ರಿಲೀಸ್, ಮೇಕಿಂಗ್ ವಿಡಿಯೊ ಹೊರತಂದಿದ್ದು ಬಿಟ್ಟರೆ ಅಬ್ಬರದ ಪ್ರಮೋಷನ್‌ಗೆ ಮುಂದಾಗಿಲ್ಲ. ಮೂಲಗಳ ಪ್ರಕಾರ ಚಿತ್ರತಂಡ ಪೇಯ್ಡ್ ಪ್ರೀಮಿಯರ್ ಶೋ ನಡೆಸಲು ನಿರ್ಧರಿಸಿದೆ. ದೇಶದ ವಿವಿಧ ಭಾಗಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರೀಮಿಯರ್ ಶೋ ಇರಲಿದೆ ಎನ್ನಲಾಗಿದೆ. ವಿದೇಶದಲ್ಲಿಯೂ ಪ್ರೀಮಿಯರ್ ಶೋ ಆಯೋಜಿಸುವ ಸಾಧ್ಯತೆ ಇದೆ. ರುಕ್ಮಿಣಿ ವಸಂತ್, ರಾಕೇಶ್ ಪೂಜಾರಿ, ಗುಲ್ಶನ್ ದೇವಯ್ಯ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.