ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: ನಾಲ್ಕೇ ದಿನಕ್ಕೆ 200 ಕೋಟಿ ರೂ. ಕ್ಲಬ್‌ ಸೇರಿದ ʼಕಾಂತಾರ: ಚಾಪ್ಟರ್‌ 1'; ಅಪರೂಪದ ದಾಖಲೆ ಬರೆದ ಹೊಂಬಾಳೆ ಫಿಲ್ಮ್ಸ್‌

Kantara Chapter 1 Worldwide Box Office Collection: ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ʼಕಾಂತಾರ: ಚಾಪ್ಟರ್‌ 1' ಗಮನ ಸೆಳೆದಿದ್ದು, ಈಗಾಗಲೇ 200 ಕೋಟಿ ರೂ. ಕ್ಲಬ್‌ ಸೇರಿದೆ.

ಬೆಂಗಳೂರು: ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ರಿಲೀಸ್‌ ಆದ ʼಸು ಫ್ರಮ್‌ ಸೋʼ ಸದ್ದಿಲ್ಲದೆ ಸುದ್ದಿಯಾಗಿದ್ದರೆ, ಇದೀಗ ಭಾರಿ ಕುತೂಹಲದೊಂದಿಗೆ ತೆರೆಗೆ ಬಂದ ʼಕಾಂತಾರ: ಚಾಪ್ಟರ್‌ 1' (Kantara: Chapter 1) ನಿರೀಕ್ಷೆಗೂ ಮೀರಿ ಗಮನ ಸೆಳೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್‌ (Hombale Films)-ರಿಷಬ್‌ ಶೆಟ್ಟಿ (Rishab Shetty) ಎಂಬ ಡೆಡ್ಲಿ ಕಾಂಬಿನೇಷನ್‌ ಅಂತಹದ್ದೊಂದು ಮ್ಯಾಜಿಕ್‌ ಮಾಡಿದೆ. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಈ ಜೋಡಿ ಯಶಸ್ವಿಯಾಗಿದ್ದು, ಹಲವು ದಾಖಲೆ ಉಡೀಸ್‌ ಆಗಿದೆ. ರಿಲೀಸ್‌ ಆದ ನಾಲ್ಕೇ ದಿನಕ್ಕೆ 3ನೇ ಅತೀ ಹೆಚ್ಚು ಗಳಿಸಿದ ಕನ್ನಡ ಚಿತ್ರ ಎನಿಸಿಕೊಂಡಿದೆ. ಮುಂದೆ ಯಾವೆಲ್ಲ ಇತಿಹಾಸ ತಿದ್ದಿ ಬರೆಯಲಿದೆ ಎನ್ನುವ ಕುತೂಹಲ ಸದ್ಯಕ್ಕೆ ಮೂಡಿದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ರಿಲೀಸ್‌ ಆಗಿ 4 ದಿನ ಕಳೆದಿದ್ದು, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 250 ಕೋಟಿ ರೂ.ಗಿಂತ ಅಧಿಕ ಗಳಿಸಿದ್ದು, 300 ಕೋಟಿ ರೂ. ಕ್ಲಬ್‌ ಹೊಸ್ತಿಲಿನಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

ಹೊಂಬಾಳೆ ಫಿಲ್ಮ್ಸ್‌ನ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Kantara Chapter 1: 2ನೇ ದಿನಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರ; 100 ಕೋಟಿ ರೂ. ಕ್ಲಬ್‌ಗೆ ಎಂಟ್ರಿ

ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ʼಕಾಂತಾರ: ಚಾಪ್ಟರ್‌ 1ʼ ಇದುವರೆಗೆ 200 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದ್ದು, ವಿದೇಶಗಳಿಂದ 50 ಕೋಟಿ ರೂ. ಹರಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಚಿತ್ರತಂಡದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬೀಳಬೇಕಿದೆ. ಸಾಕ್ನ್ಲಿಕ್‌ ವೆಬ್‌ಸೈಟ್‌ ವರದಿ ಪ್ರಕಾರ ಚಿತ್ರ 4ನೇ ದಿನವಾದ ಭಾನುವಾರ 55.47 ಕೋಟಿ ರೂ. ಗಳಿಸಿದೆ. ಆ ಮೂಲಕ ಭಾರತವೊಂದರಲ್ಲೇ 250 ಕೋಟಿ ರೂ. ಗಳಿಸುವತ್ತ ದಾಪುಗಾಲು ಹಾಕಿದೆ.

ಇತಿಹಾಸ ಬರೆದ ಹೊಂಬಾಳೆ ಫಿಲ್ಮ್ಸ್‌

ʼಕಾಂತಾರ: ಚಾಪ್ಟರ್‌ 1' 200 ಕೋಟಿ ರೂ. ಕ್ಲಬ್‌ ಸೇರಿದ 4ನೇ ಕನ್ನಡ ಚಿತ್ರ ಎನಿಸಿಕೊಂಡಿದೆ. ಈ ಹಿಂದೆ ಯಶ್‌-ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ʼಕೆಜಿಎಫ್‌ʼ, ʼಕೆಜಿಎಫ್‌ 2ʼ ಕ್ರಮವಾಗಿ 237 ಕೋಟಿ ರೂ. ಮತ್ತು 1,215 ಕೋಟಿ ರೂ., ʼಕಾಂತಾರʼ 408 ಕೋಟಿ ರೂ. ಗಳಿಸಿದೆ. ಇದೀಗ 4ನೇ ಚಿತ್ರವಾಗಿ ʼಕಾಂತಾರ: ಚಾಪ್ಟರ್‌ 1' ಈ ಕ್ಲಬ್‌ಗೆ ಪ್ರವೇಶ ಪಡೆದಿದೆ. ವಿಶೇಷ ಎಂದರೆ ಈ ನಾಲ್ಕೂ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿದೆ.

ರೋಮಾಂಚನಗೊಂಡ ಪ್ರೇಕ್ಷಕರು

2022ರಲ್ಲಿ ತೆರೆಕಂಡ ʼಕಾಂತಾರʼದಲ್ಲಿ ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ಪರಿಚಯಿಸಿದ್ದ ರಿಷಬ್‌ ಶೆಟ್ಟಿ ಈ ಬಾರಿಯೂ ದೈವಿಕ ಕಥೆಯನ್ನೇ ಆಯ್ದುಕೊಂಡಿದ್ದಾರೆ. ತೆರೆಮೇಲೆ ದೈವ ದರ್ಶನ ಮಾಡಿಸಿದ್ದು, ನೋಡಿದ ಪ್ರೇಕ್ಷಕರು ರೋಮಾಂಚನಗೊಂಡಿದ್ದಾರೆ. ಅರವಿಂದ್‌ ಕಶ್ಯಪ್‌ ಅವರ ಸಿನಿಮಾಟೋಗ್ರಫಿ ಮತ್ತು ಬಿ. ಅಜನೀಶ್‌ ಲೋಕನಾಥ್‌ ಅವರ ಸಂಗೀತಕ್ಕೂ ಪ್ರೇಕ್ಷಕರು ಮನಸೋತಿದ್ದು, ತೆರೆಮೇಲೆ ಮೂಡುವ ಹೊಸದೊಂದು ಪ್ರಪಂಚ ನೋಡಿ ಬೆರಗಾಗಿದ್ದಾರೆ. ರಕ್ಮಿಣಿ ವಸಂತ್‌ ನಾಯಕಿಯಾಗಿ ನಟಿಸಿದ್ದು, ಜಯರಾಮ್‌, ರಾಕೇಶ್‌ ಪೂಜಾರಿ, ಗುಲ್ಶನ್‌ ದೇವಯ್ಯ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.