ಖ್ಯಾತ ಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಭಾನುವಾರ (ಜುಲೈ 5) ಬೆಳಿಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲಹೊತ್ತು ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ಇತ್ತೀಚೆಗಷ್ಟೇ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಕರಾವಳಿ ಪ್ರವಾಸೋದ್ಯಮ ಸಭೆ ನಡೆದಿತ್ತು. ಈ ಸಭೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಿ ನಟ ರಿಷಬ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ಕ್ಯಾಬಿನೆಟ್ ಸಭೆ
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ನಡೆದಿದ್ದ ಆ ಸಭೆಯಲ್ಲಿ ಕರಾವಳಿ ಭಾಗದ ಶಾಸಕರು ಹಾಗೂ ಉದ್ಯಮಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದರು. ಸಭೆಯಲ್ಲಿ ಮಾತನಾಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಇನ್ನು 15 ರಿಂದ 20 ದಿನಗಳ ಒಳಗಾಗಿ ಮಂಗಳೂರಿನಲ್ಲಿ ಸಚಿವ ಸಂಪುಟ (ಕ್ಯಾಬಿನೆಟ್) ಸಭೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದರು. ಅಷ್ಟರೊಳಗೆ ಸಿಆರ್‌ಝಡ್ (CRZ) ಮತ್ತು ಅರಣ್ಯ ಇಲಾಖೆಯಿಂದ ಎದುರಾಗುತ್ತಿರುವ ತಾಂತ್ರಿಕ ತಕರಾರುಗಳು ಹಾಗೂ ಅವುಗಳಿಗೆ ಇರುವ ಪರಿಹಾರಗಳ ಕುರಿತು ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಸಿನಿಮಾ ಚಿತ್ರೀಕರಣ, ಜಾನಪದ ಕಲೆಗೆ ಪ್ರೋತ್ಸಾಹ
ಪ್ರವಾಸೋದ್ಯಮ ಸಭೆಯಲ್ಲಿ ನಟ ರಿಷಬ್ ಶೆಟ್ಟಿ ಅವರು ಕರಾವಳಿಯ ಜಾನಪದ ಕಲೆ ಮತ್ತು ಸಂಗೀತಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ್ದರು. ಇದರೊಂದಿಗೆ, ಕರಾವಳಿ ಭಾಗದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಹಾಗೂ ರಿಯಾಯಿತಿಗಳನ್ನು ಕಲ್ಪಿಸಿಕೊಡುವುದರಿಂದ ಕೇರಳ, ಗೋವಾ ಮತ್ತು ಕರ್ನಾಟಕದ ಸಿನಿಮಾ ಜಗತ್ತಿನ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು.
ರಿಷಬ್ ಶೆಟ್ಟಿ ಮೀಟ್ಸ್ ಸಿಎಂ ಡಿಕೆ ಶಿವಕುಮಾರ್
ಈ ಎಲ್ಲಾ ಹಿನ್ನೆಲೆಗಳ ನಡುವೆ ಇಂದು ನಡೆದಿರುವ ಸಿಎಂ ಹಾಗೂ ರಿಷಬ್ ಶೆಟ್ಟಿ ಅವರ ಭೇಟಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.