ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ʼಕಾಂತಾರ ಚಾಪ್ಟರ್ 1ʼ ಸಿನಿಮಾ (Kantara: Chapter 1) ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈಗಾಗಲೇ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕದಂಬರ ಕಾಲದಲ್ಲಿ ನಡೆಯುವ ಐತಿಹಾಸಿಕ, ಧಾರ್ಮಿಕ ಕಥೆಗೆ ಪ್ರೇಕ್ಷಕರು ಫುಲ್ ಮಾರ್ಕ್ ನೀಡುತ್ತಿದ್ದು ಬಹುತೇಕ ಚಿತ್ರಮಂದಿರದಲ್ಲಿ ಹೌಸ್ ಫುಲ್ ಬೋರ್ಡ್ ಕಾಣುತ್ತಿದೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಈಗ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ. ʼಕಾಂತಾರ ಚಾಪ್ಟರ್ 1ʼ ಸಿನಿಮಾದಲ್ಲಿ ದೈವದ ಪಾತ್ರಗಳು ಜನರನ್ನು ಮೂಕ ವಿಸ್ಮಿತಗೊಳಿಸುತ್ತಿವೆ. ಈ ನಡುವೆ ಕೆಲವು ಪ್ರೇಕ್ಷಕರು ಸಿನಿಮಾ ನೋಡಿ ಪಾತ್ರವನ್ನೇ ತಾವೆಂದುಕೊಂಡು ಹುಚ್ಚಾಟದ ವರ್ತನೆ ತೋರಿದ್ದಾರೆ. ಸಿನಿಮಾ ನೋಡುತ್ತಿದ್ದಂತೆ ತಮ್ಮ ಮೈ ಮೇಲೆ ದೈವ ಬಂದಿದೆ ಎಂಬಂತೆ ವರ್ತಿಸುವ ಕೆಲವು ಪ್ರೇಕ್ಷಕರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರ ಬೆನ್ನಲ್ಲೇ ತುಳುಕೂಟವು ನಟ ರಿಷಬ್ ಶೆಟ್ಟಿ (Rishab Shetty) ಅವರಿಗೆ ಈ ಬಗ್ಗೆ ಪತ್ರವೊಂದನ್ನು ಬರೆದು ಅಸಮಾಧಾನ ಹೊರಹಾಕಿದೆ.
ದೈವದ ಕಥೆ ಹೊಂದಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಪ್ರೇಕ್ಷಕರ ಅತಿರೇಕದ ವರ್ತನೆ ಕೂಡ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಾಗಿದೆ. ಸಿನಿಮಾ ಮಂದಿರ ಹಾಗೂ ಹೊರಗಡೆ ಅನೇಕರು ದೈವ ಬಂದಂತೆ ವರ್ತಿಸುತ್ತಿದ್ದ ವಿಡಿಯೊ ವೈರಲ್ ಆಗುತ್ತಿದ್ದಂತೆ ತುಳುಕೂಟ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ʼʼರಿಷಬ್ ಶೆಟ್ಟಿ ನಿಮಗೆ ದೈವಗಳಲ್ಲಿ ಅಪಾರ ನಂಬಿಕೆ ಇರುವುದು ನಮಗೆ ತಿಳಿದಿದೆ. ನೀವು ದೈವದ ಬಗ್ಗೆ ಸಿನಿಮಾ ಮಾಡಿದ್ದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿʼʼ ಎಂದು ಪತ್ರದಲ್ಲಿ ಬರೆದಿದೆ.

ʼʼಇತ್ತೀಚಿನ ದಿನದಲ್ಲಿ ಜನರಿಗೆ ನಿಮ್ಮ ಸಿನಿಮಾದಿಂದ ದೈವದ ಮೇಲೆ ನಂಬಿಕೆ ಬೆಳೆದಿರುವುದು ನಮಗೂ ಖುಷಿ ಇದೆ. ಆದರೆ ದೈವದ ಹೆಸರಲ್ಲಿ, ಸಿನಿಮಾದಿಂದ ಪ್ರೇರಿತವಾಗಿ ದೈವ ಬಂದಂತೆ ವರ್ತಿಸುವುದು ನಮ್ಮ ಸಂಪ್ರದಾಯಕ್ಕೆ ಅವಮಾನ ಮಾಡಿದಂತೆ. ಸಿನಿಮಾ ಮಂದಿರಕ್ಕೆ ದೈವದ ವೇಷದಲ್ಲಿ ಬರುವುದು, ಸಿನಿಮಾ ನೋಡುವಾಗಲೇ ದೈವ ಬಂದಂತೆ ವರ್ತಿಸುವ ಅನೇಕ ವಿಡಿಯೊ ನಮಗೆ ಕಾಣ ಸಿಗುತ್ತಲೇ ಇದೆ. ಇದನ್ನು ನಿತ್ಯ ಕಂಡು ನಮಗೆ ಬೇಸರವಾಗಿದೆ. ಆದರೆ ಈ ಬಗ್ಗೆ ನೀವು ಮೌನವಹಿಸಿದ್ದ ಕಾರಣ ನಮಗೆ ತಿಳಿದಿಲ್ಲʼʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ʼʼದೈವಾರಾಧನೆ ನಮ್ಮ ತುಳುನಾಡಿನ ನಂಬಿಕೆಯಾಗಿದ್ದು ಅದರ ಬಗ್ಗೆ ಹೀಗೆಲ್ಲ ಇಲ್ಲ ಸಲ್ಲದ ನಡವಳಿಕೆಯನ್ನು ನಾವು ಸಹಿಸಲಾರೆವು. ಹೀಗಾಗಿ ನೀವು ಆದಷ್ಟು ಬೇಗ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಅಭಿಮಾನಿಗಳಿಗೆ ಹೀಗೆ ವರ್ತಿಸದಂತೆ ತಿಳಿಸಿ. ಸಿನಿಮಾ ಪ್ರದರ್ಶನಕ್ಕೆ ಮೊದಲು ಡಿಸ್ ಕ್ಲೈಮರ್‌ನಲ್ಲಿಯೂ ಈ ಬಗ್ಗೆ ತಿಳಿಸಬೇಕಾಗಿ ಮನವಿ ಮಾಡುತ್ತಿದ್ದೇವೆʼʼ ಎಂದು ತುಳುಕೂಟ ರಿಷಬ್ ಶೆಟ್ಟಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದೆ.
ಇತ್ತೀಚೆಗಷ್ಟೆ ತಮಿಳುನಾಡಿನ ದಿಂಡಿಗಲ್ನ ಚಿತ್ರ ಮಂದಿರವೊಂದಕ್ಕೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರದರ್ಶನಕ್ಕೆ ವ್ಯಕ್ತಿಯೊಬ್ಬ ದೈವದ ವೇಷ ಧರಿಸಿ ಚಿತ್ರಮಂದಿರ ಪ್ರವೇಶಿಸಿದ್ದ ವಿಡಿಯೊ ವೈರಲ್ ಆಗಿತ್ತು. ಬಳಿಕ ಸಿನಿಮಾ ನೋಡಲು ಹೋದ ಮಹಿಳೆ ಹಾಗೂ ಪುರುಷರು ಕೂಡ ಅನೇಕ ಚಿತ್ರ ಮಂದಿರದಲ್ಲಿ ದೈವ ಬಂದಂತೆ ವರ್ತಿಸಿದ್ದ ವಿಡಿಯೊ ಸಹ ವೈರಲ್ ಆಗಿತ್ತು. ಇದೆಲ್ಲದರಿಂದ ಬೇಸರಗೊಂಡ ತುಳುಕೂಟದ ಪದಾಧಿಕಾರಿಗಳು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಚ್ಚರವಹಿಸಲು ನಟ ರಿಷಬ್ ಶೆಟ್ಟಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.