ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರಾಮಾಯಣʼ ಸಿನಿಮಾ ನಿರ್ಮಾಪಕರ ಜೊತೆ ಭರ್ಜರಿ ಡೀಲ್‌ ಕುದುರಿಸಿದ ಕರಣ್‌ ಜೋಹರ್;‌ ಎಷ್ಟಕ್ಕೇ ಸೇಲ್‌ ಆಯ್ತು ವಿತರಣೆ ಹಕ್ಕುಗಳು?

ನಿತೇಶ್‌ ತಿವಾರಿ ಅವರ ‘ರಾಮಾಯಣ’ ಸಿನಿಮಾದ ಭಾರತೀಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳನ್ನು ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಬರೋಬ್ಬರಿ 250 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿದೆ. ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಸಿನಿಮಾದ ಮೊದಲ ಭಾಗವು 2026ರ ದೀಪಾವಳಿಗೆ ತೆರೆಕಾಣಲಿದೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಚಲನಚಿತ್ರವು ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಪ್ರಸ್ತುತ ಈ ಚಿತ್ರದ ಭಾರತದ ಥಿಯೇಟ್ರಿಕಲ್ ವಿತರಣೆಯ ಜವಾಬ್ದಾರಿಯನ್ನು ಬಾಲಿವುಡ್‌ನ ದೈತ್ಯ ಸಿನಿಮಾ ಸಂಸ್ಥೆಯಾದ ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ ವಹಿಸಿಕೊಂಡಿದೆ ಎಂದು ವರದಿಯಾಗಿದೆ.

250 ಕೋಟಿ ರೂ.ಗೆ ಕುದುರಿದ ಡೀಲ್

ಮೂಲಗಳ ಪ್ರಕಾರ, ಈ ಭಾರಿ ಬಜೆಟ್‌ನ 'ರಾಮಾಯಣ' ಸಿನಿಮಾದ ಭಾರತೀಯ ಮಾರುಕಟ್ಟೆಯ ವಿತರಣಾ ಹಕ್ಕುಗಳಿಗಾಗಿ ಆರಂಭದಲ್ಲಿ ಸುಮಾರು 500 ಕೋಟಿ ರೂ.ಗಳ ಮಾತುಕತೆ ನಡೆದಿತ್ತು. ಆದರೆ, ಅಂತಿಮವಾಗಿ ನಿರ್ಮಾಪಕ ನಮಿತ್‌ ಮಲ್ಹೋತ್ರ ಮತ್ತು ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಒಮ್ಮತಕ್ಕೆ ಬಂದು, ಸುಮಾರು 250 ಕೋಟಿ ರೂ.ಗಳ ಮೊತ್ತಕ್ಕೆ ಒಪ್ಪಂದವನ್ನು ಅಂತಿಮಗೊಳಿಸಿವೆ. ಈ ಒಪ್ಪಂದದ ಮೂಲಕ ಧರ್ಮ ಪ್ರೊಡಕ್ಷನ್ಸ್ ಚಿತ್ರವನ್ನು ದೇಶಾದ್ಯಂತ ಭರ್ಜರಿ ಪ್ರಚಾರದೊಂದಿಗೆ ರಿಲೀಸ್‌ ಮಾಡಲು ಪ್ಲ್ಯಾನ್‌ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

Ramayana Movie: ದೀಪಾವಳಿಗೂ ಮುನ್ನವೇ 'ರಾಮಾಯಣ' ರಿಲೀಸ್‌?

‘ರಾಮಾಯಣ’ ಚಿತ್ರವನ್ನು ಎರಡು ಭಾಗದಲ್ಲಿ ತೆರೆಗೆ ತರಲಾಗುತ್ತಿದ್ದು, ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಹೆಸರಾಂತ ನಟರ ದಂಡೇ ಇದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಲಿದ್ದಾರೆ. ಚಿತ್ರದ ಮೊದಲ ಭಾಗವು 2026ರ ದೀಪಾವಳಿಯ ಸಂದರ್ಭದಲ್ಲಿ ವಿಶ್ವದ್ಯಾಂತ ತೆರೆಕಾಣಲು ಸಜ್ಜಾಗಿದ್ದರೆ, ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ವೇಳೆಗೆ ರಿಲೀಸ್‌ ಆಗುವ ನಿರೀಕ್ಷೆಯಿದೆ.

Ramayana Movie: ಇದೊಂದು ಕಾರಣಕ್ಕೆ ರಾಮಾಯಣದಲ್ಲಿ ನಟಿಸಿದೆ ಎಂದ ಕಾಜಲ್ ಅಗರ್ವಾಲ್‌!

ಜಾಗತಿಕ ಮಟ್ಟದಲ್ಲಿ ಜಂಟಿ ವಿತರಣೆ

ಭಾರತದಲ್ಲಿ ಧರ್ಮ ಪ್ರೊಡಕ್ಷನ್ಸ್ ವಿತರಣೆ ಮಾಡಲಿದ್ದರೆ, ಅಂತರರಾಷ್ಟ್ರೀಯ ಮಟ್ಟದ ವಿದೇಶಿ ಮಾರುಕಟ್ಟೆಗಳಲ್ಲಿ ಜಾಗತಿಕ ಸಿನಿಮಾ ವಿತರಕ ಸಂಸ್ಥೆಯಾದ ‘ವಾರ್ನರ್ ಬ್ರದರ್ಸ್’ ಈ ಚಿತ್ರವನ್ನು ರಿಲೀಸ್‌ ಮಾಡಲಿದೆಯಂತೆ. ಇನ್ನು, ಈ ಚಿತ್ರದಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ಭರತನಾಗಿ ಆದಿನಾಥ್ ಕೊಠಾರೆ, ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್, ಕೈಕೇಯಿಯಾಗಿ ಲಾರಾ ದತ್ತಾ, ದಶರಥ ಮಹಾರಾಜನಾಗಿ ಹಿರಿಯ ನಟ ಅರುಣ್ ಗೋವಿಲ್, ಮಂಥರೆಯಾಗಿ ಶೀಬಾ ಚಡ್ಡಾ ಮತ್ತು ಇಂದ್ರನಾಗಿ ಕುನಾಲ್ ಕಪೂರ್ ನಟಿಸುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಹ್ಯಾನ್ಸ್ ಝಿಮ್ಮರ್ ಜಂಟಿಯಾಗಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜುಲೈ 18ರಂದು ‘ರಾಮಾಯಣ: ಭಾಗ-1’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯಂತೆ.