ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಕರಾವಳಿ' ವಿವಾದದ ನಡುವೆಯೂ ಚಿತ್ರ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಪ್ರಜ್ವಲ್‌ ದೇವರಾಜ್‌ ಮನವಿ: ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದೇನು?

Karavali Film Controversy: ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟಿಸಿರುವ ʼಕರಾವಳಿʼ ಸಿನಿಮಾ ಹಾಗೂ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆ ನಟ ಪ್ರಜ್ವಲ್ ದೇವರಾಜ್ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದು, ಚಿತ್ರ ಥಿಯೇಟರ್‌ನಲ್ಲೇ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್ (ಸಂಗ್ರಹ ಚಿತ್ರ)

ಬೆಂಗಳೂರು, ಜು. 11: ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟಿಸಿರುವ ʼಕರಾವಳಿʼ ಸಿನಿಮಾದ (Karavali Film) ವಿವಾದ ಕೆಲವು ದಿನಗಳಿಂದ ಜೋರಾಗಿದೆ. ಈ ಸಿನಿಮಾ ಹಾಗೂ ಸಂಭಾವನೆ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಇದೀಗ ನಟ ಪ್ರಜ್ವಲ್ ದೇವರಾಜ್ (Prajwal Devaraj) ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ನಿರ್ದೇಶಕ ಗುರುದತ್ ಗಾಣಿಗ ಅವರೊಂದಿಗಿನ ವಾಟ್ಸ್‌ಆ್ಯಪ್ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅವರು ಹಂಚಿಕೊಂಡಿದ್ದಾರೆ.

ಹೌದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ 'ಕರಾವಳಿ' ಚಿತ್ರದ ವಿವಾದಕ್ಕೆ ಪ್ರಜ್ವಲ್ ದೇವರಾಜ್ ಹೊಸ ತಿರುವು ನೀಡಿದ್ದಾರೆ. ವಿವಾದಗಳ ನಡುವೆಯೂ ಚಿತ್ರದ ಮೇಲಿನ ಬದ್ಧತೆ ಪ್ರದರ್ಶಿಸಿರುವ ಅವರು, ಜುಲೈ 24ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 'ಕರಾವಳಿ' ಸಿನಿಮಾ ನೋಡಿ ಎಂದು ಕೈಮುಗಿಯುವ ಎಮೋಜಿ ಹಾಕಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌:



ಪ್ರಜ್ವಲ್ ದೇವರಾಜ್ ಅವರ ಪೋಸ್ಟ್‌ನಲ್ಲಿ ಏನಿದೆ?

ಇತ್ತೀಚಿನ ದಿನಗಳಲ್ಲಿ 'ಕರಾವಳಿ' ಚಿತ್ರದ ನಿರ್ಮಾಣ ಸಂಸ್ಥೆ ಗುರುದತ್ ಗಾಣಿಗ ಫಿಲ್ಮ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರಿಂದ ಸಾರ್ವಜನಿಕವಾಗಿ ನೀಡಲಾಗುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳ ಮುಂದೆ ಕೆಲವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ.

‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ, ಯಾವುದೇ ಪೂರ್ವ ಮಾಹಿತಿ, ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ನನಗೆ ತಿಳಿಯಿತು. ಅದೇ ಸಮಯದಲ್ಲಿ, ನನಗೆ ಒಪ್ಪಿಗೆಯಾದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ನಾನು ಟ್ರೈಲ‌ರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

ಇದರ ನಂತರ, ಗುರುದತ್ ಗಾಣಿಗ ಫಿಲ್ಮ್ಸ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರು ಈ ವಿವಾದಕ್ಕೆ ನನ್ನ ದೈಹಿಕ ರೂಪಾಂತರ ಅಥವಾ ಸಿಕ್ಸ್-ಪ್ಯಾಕ್ ಲುಕ್ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ನನ್ನ ಗಮನಕ್ಕೆ ಬಂದಿವೆ. ಈ ಕುರಿತು ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ಈ ವಿಷಯಕ್ಕೆ ನನ್ನ ದೈಹಿಕ ರೂಪಾಂತರದೊಂದಿಗೆ ಯಾವುದೇ ಸಂಬಂಧವಿಲ್ಲ. ನನ್ನ ಯಾವುದೇ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿರುವುದು ಹಾಗೂ ಆ ಸಂದರ್ಭದಲ್ಲಿ ನನ್ನ ಸಂಭಾವನೆ ಸಂಪೂರ್ಣವಾಗಿ ಪಾವತಿಯಾಗಿರದಿರುವುದೇ ಈ ವಿಷಯದ ಮೂಲ ಕಾರಣಗಳಾಗಿವೆ.

ಮೊದಲ ದಿನದಿಂದಲೂ ನನ್ನ ನಿಲುವು ಒಂದೇ ಆಗಿತ್ತು. ನನಗೆ ಬಾಕಿ ಇರುವ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಲು ಹಾಗೂ ಚಿತ್ರದ ಪ್ರಚಾರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನಾನು ಸಿದ್ಧನಿದ್ದೇನೆ ಎಂದು ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ.

ಟ್ರೈಲ‌ರ್ ಬಿಡುಗಡೆಯಾದ ಮರುದಿನ, ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು. ಅದರ ನಂತರ, ಗುರುದತ್ ಗಾಣಿಗ ಫಿಲ್ಮ್ ವತಿಯಿಂದ ನನ್ನ ವ್ಯವಸ್ಥಾಪಕರಿಗೆ ನನ್ನ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ನನ್ನ ಭಾಗವಹಿಸುವಿಕೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಹೀಗಾಗಿ, ಚಿತ್ರದ ಡಬ್ಬಿಂಗ್ ಹಾಗೂ ಪ್ರಚಾರದಲ್ಲಿ ನಾನು ಭಾಗವಹಿಸದಿರುವುದು ನನ್ನ ನಿರ್ಧಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

ಇದರ ಜತೆಗೆ ನನ್ನ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ರೀತಿಯ ಸಾರ್ವಜನಿಕ ಹೇಳಿಕೆಗಳೂ ನನ್ನ ಗಮನಕ್ಕೆ ಬಂದಿವೆ. ಆದರೆ, ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಅವಕಾಶವನ್ನು ನನಗೆ ನೀಡದೇ, ಅಂತಹ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವುದು ನನಗೆ ಸಹಜವಾಗಿಯೇ ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ, ವಿಶ್ವಾಸ ಮತ್ತು ಪ್ರೇಕ್ಷಕರ ಪ್ರೀತಿಯನ್ನು ನಾನು ಅತ್ಯಂತ ಅಮೂಲ್ಯವಾಗಿ ಪರಿಗಣಿಸುತ್ತೇನೆ. ಆದ್ದರಿಂದ ಈ ಬೆಳವಣಿಗೆಗಳು ನನಗೆ ವೈಯಕ್ತಿಕವಾಗಿಯೂ ಹಾಗೂ ವೃತ್ತಿಪರವಾಗಿಯೂ ಬೇಸರವನ್ನುಂಟು ಮಾಡಿವೆ.

ಅದ್ದೂರಿಯಾಗಿ ಬಿಡುಗಡೆಯಾಯ್ತು ‘ಕರಾವಳಿ’ ಟ್ರೈಲರ್: ಕಂಬಳದ ಕ್ರೀಡೆ, ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ

ಈ ಹೇಳಿಕೆಯ ಮೂಲಕ ನನ್ನ ನಿಲುವನ್ನು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸುವ ಉದ್ದೇಶ ಮಾತ್ರ ನನ್ನದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನಿಂದ ಸಾರ್ವಜನಿಕವಾಗಿ ನಡೆಯುವ ಯಾವುದೇ ಚರ್ಚೆ, ಪ್ರತಿಕ್ರಿಯೆ ಅಥವಾ ವಾಗ್ವಾದಕ್ಕೆ ಇಲ್ಲಿಯೇ ಪೂರ್ಣ ವಿರಾಮ ಹಾಕುತ್ತಿದ್ದೇನೆ. ಇನ್ನು ಮುಂದೆ ಈ ವಿಷಯದ ಕುರಿತು ನಾನು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡುವುದಿಲ್ಲ.

ಒಬ್ಬ ಕಲಾವಿದನಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂಬುದು ನನ್ನ ದೃಢ ನಂಬಿಕೆ.

ಆದ್ದರಿಂದ, ‘ಕರಾವಳಿ’ ಚಿತ್ರದ ಸಂಪೂರ್ಣ ತಂಡಕ್ಕೆ ನನ್ನ ಹೃತೂರ್ವಕ ಶುಭಹಾರೈಕೆಗಳನ್ನು ತಿಳಿಸುತ್ತೇನೆ. ನನ್ನ ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸಿ. ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿಯನ್ನು ಪ್ರೋತ್ಸಾಹಿಸುವಂತೆ ಹೃತ್ಪೂರ್ವಕವಾಗಿ ವಿನಂತಿಸುತ್ತೇನೆ.

ಈ ಕಷ್ಟದ ಸಮಯದಲ್ಲೂ ನನ್ನೊಂದಿಗೆ ನಿಂತು ಪ್ರೀತಿ. ವಿಶ್ವಾಸ ಮತ್ತು ಬೆಂಬಲ ವ್ಯಕ್ತಪಡಿಸಿದ ನನ್ನ ಅಭಿಮಾನಿಗಳು ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನ್ನ ದೊಡ್ಡ ಶಕ್ತಿ ಎಂದು ಪ್ರಜ್ವಲ್ ದೇವರಾಜ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.