ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಮತ್ತು ಮಲಯಾಳಂ ಚಿತ್ರರಂಗದ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ದಾಯ್ರಾ’ (Daayra) ಇದೀಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಖ್ಯಾತ ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.
ನವೆಂಬರ್ 13ರಿಂದ ನೆಟ್ಫ್ಲಿಕ್ಸ್ನಲ್ಲಿ ‘ದಾಯ್ರಾ’ ಸ್ಟ್ರೀಮಿಂಗ್
ನೆಟ್ಫ್ಲಿಕ್ಸ್ ಇಂಡಿಯಾ ಸೌತ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊಸ ಪೋಸ್ಟ್ ಹಂಚಿಕೊಳ್ಳುವ ಮೂಲಕ ‘ದಾಯ್ರಾ’ ಚಿತ್ರದ ಒಟಿಟಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ನವೆಂಬರ್ 13ರಿಂದ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ವಿಶೇಷವೆಂದರೆ, ಈ ಚಿತ್ರ ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಕರಿಗೆ ಲಭ್ಯವಾಗಲಿದೆ.
ಏನಿದು ‘ದಾಯ್ರಾ’ ಸಿನಿಮಾದ ಕಥೆ?
‘ದಾಯ್ರಾ’ ಒಂದು ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಎನ್ಕೌಂಟರ್ ನಡೆದ ಬಳಿಕ ಇಬ್ಬರು ಪೊಲೀಸ್ ಅಧಿಕಾರಿಗಳು ನೈತಿಕ ಸಂಘರ್ಷಕ್ಕೆ ಸಿಲುಕುವ ಕಥೆಯನ್ನು ಈ ಸಿನಿಮಾ ಹೊಂದಿದೆ.
ಇದನ್ನೂ ಓದಿ: Bigg Boss Kannada 13: ಚಾಕು ತಂದ ಗಾನವಿ ಗೌಡ, ಬಗೆದುಬಿಡ್ತೀನಿ ಎಂದ ಮಂಜ! ಸವಾಲ್ಗೆ ಸವಾಲ್!
ಚಿತ್ರದಲ್ಲಿ ಕರೀನಾ ಕಪೂರ್ ಅವರು ಅಜೂನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥೆಯಾಗಿರುತ್ತಾರೆ. ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಸುಟ್ಟು ಕೊಂದ ಆರೋಪ ಎದುರಿಸುತ್ತಿದ್ದ ಹಲವು ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದಾಗ ಎನ್ಕೌಂಟರ್ ನಡೆದಿದೆ ಎಂದು ಡಿಸಿಪಿ ರಾಮನ್ ಕುಮಾರ್ (ಪೃಥ್ವಿರಾಜ್ ಸುಕುಮಾರನ್) ಮತ್ತು ಅವರ ತಂಡ ಹೇಳುತ್ತದೆ.
ಆದರೆ ಈ ಎನ್ಕೌಂಟರ್ನ ಹಿಂದಿನ ಸತ್ಯವೇನು? ತನಿಖೆಯ ವೇಳೆ ಅಜೂನಿಗೆ ಸಿಗುವ ಮಾಹಿತಿಗಳೇನು? ಪೊಲೀಸ್ ವ್ಯವಸ್ಥೆಯೊಳಗಿನ ನೈತಿಕತೆ ಮತ್ತು ಜವಾಬ್ದಾರಿಗಳ ಪ್ರಶ್ನೆಗಳಿಗೆ ಸಿನಿಮಾ ಹೇಗೆ ಉತ್ತರಿಸುತ್ತದೆ ಎಂಬುದೇ ಕಥೆಯ ಪ್ರಮುಖ ಅಂಶವಾಗಿದೆ.
ರೋಹಿತ್ ಶೆಟ್ಟಿ ಪೊಲೀಸ್ ಸಿನಿಮಾಗಳಿಗಿಂತ ಭಿನ್ನ ಎಂದ ಕರೀನಾ!
ಕರೀನಾ ಕಪೂರ್ ಅವರು ಈ ಹಿಂದೆ ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಇದೀಗ ‘ದಾಯ್ರಾ’ ಸಿನಿಮಾದಲ್ಲಿ ಅವರು ವಿಭಿನ್ನ ರೀತಿಯ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಎರಡು ರೀತಿಯ ಪಾತ್ರಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿರುವ ಕರೀನಾ, “ಪ್ರತಿಯೊಬ್ಬ ನಿರ್ದೇಶಕರು ತಮ್ಮದೇ ಆದ ವಿಭಿನ್ನ ಜಗತ್ತಿನಲ್ಲಿ ಕೆಲಸ ಮಾಡುತ್ತಾರೆ. ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್ ದೊಡ್ಡ ಮಟ್ಟದ, ಅದ್ಧೂರಿ ಮತ್ತು ಕಮರ್ಷಿಯಲ್ ಶೈಲಿಯಲ್ಲಿರುತ್ತದೆ. ಆದರೆ ಮೇಘನಾ ಗುಲ್ಜಾರ್ ಅವರ ಸಿನಿಮಾಗಳ ಜಗತ್ತು ವಾಸ್ತವಕ್ಕೆ ಹತ್ತಿರವಾಗಿದ್ದು, ಸಂಕೀರ್ಣ ಮತ್ತು ಸಹಜವಾಗಿರುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಯಶಸ್ ವಿರುದ್ಧ ಆಸಿಯಾ ಗರಂ; ಸ್ನೇಹ ಅಂತ್ಯ!
“ನಟಿಯಾಗಿ ಈ ಎರಡೂ ವಿಭಿನ್ನ ಜಗತ್ತುಗಳಲ್ಲಿ ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರುವುದು ನನ್ನ ಅದೃಷ್ಟ” ಎಂದು ಕರೀನಾ ಕಪೂರ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.