ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅದ್ದೂರಿಯಾಗಿ ನೆರವೇರಿದ ‘ಕರ್ಣ’ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ ಅಕ್ಕನ ಮದುವೆ; ʻಬಿಗ್ ಬಾಸ್ʼ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕೈಹಿಡಿದ ದಿವ್ಯಾ ಗೌಡ!

ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ಅವರ ಮದುವೆ ʻಬಿಗ್ ಬಾಸ್ʼ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಜತೆ ಅದ್ಧೂರಿಯಾಗಿ ನೆರವೇರಿದೆ. ಉಭಯ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದ್ದಾರೆ.

‘ಬಿಗ್ ಬಾಸ್ ಕನ್ನಡ 11’ ಖ್ಯಾತಿಯ, ʻಕರ್ಣʼ ಸೀರಿಯಲ್‌ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಇಂದು (ಸೆಪ್ಟೆಂಬರ್ 21) ಕುಟುಂಬಸ್ಥರು, ಆತ್ಮೀಯರು ಹಾಗೂ ಕಿರುತೆರೆ ಗಣ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ವಧು ದಿವ್ಯಾ ಗೌಡ ಅವರ ಕೈಹಿಡಿದ ವರ ಹೇಮಂತ್ ಕುಮಾರ್ ಬೇರಾರೂ ಅಲ್ಲ, ಬಿಗ್ ಬಾಸ್ ಕಾರ್ಯಕ್ರಮಗಳನ್ನು ಒಳಗೊಂಡಂತೆ ಹಲವು ಪ್ರಮುಖ ರಿಯಾಲಿಟಿ ಶೋಗಳ ಕಾಸ್ಟಿಂಗ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವವರು.

ಹಿರಿಯರ ಒಪ್ಪಿಗೆ ಮೇರೆಗೆ ನಡೆದ ಮದುವೆ

ಎಂಡೆಮೋಲ್ ಶೈನ್ ಇಂಡಿಯಾ ಸಂಸ್ಥೆಯಲ್ಲಿ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಕುಮಾರ್, ಭವ್ಯಾ ಗೌಡ ಸ್ಪರ್ಧಿಯಾಗಿದ್ದ ಬಿಗ್ ಬಾಸ್ ಸೀಸನ್‌ಗೂ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ವಧು ದಿವ್ಯಾ ಗೌಡ ಅವರು ವೃತ್ತಿಯಲ್ಲಿ ಯಶಸ್ವಿ ಮೇಕಪ್ ಕಲಾವಿದೆಯಾಗಿದ್ದು, ಹೂವಿನ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಗುರುಹಿರಿಯರ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ದಿವ್ಯಾ ಗೌಡ ಮದುವೆಗೆ ಬಂದ ಸೆಲೆಬ್ರಿಟಿಗಳು

ಮದುವೆಗೆ ಮುನ್ನ ಸೆಪ್ಟೆಂಬರ್ 20ರ ಭಾನುವಾರ ಸಂಜೆ ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ಕಿರುತೆರೆ ಹಾಗೂ ಚಂದನವನದ ತಾರಾ ದಂಡೇ ಹಾಜರಾಗಿತ್ತು. ಸ್ಯಾಂಡಲ್‌ವುಡ್ ನಟಿ ಅಮೂಲ್ಯ ನವದಂಪತಿಗೆ ಶುಭ ಹಾರೈಸಿದರೆ, ನಿರೂಪಕಿ ಅನುಪಮಾ ಗೌಡ, ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ನಮ್ರತಾ ಗೌಡ, ಸ್ಪಂದನಾ ಸೋಮಣ್ಣ, ಪ್ರಶಾಂತ್ ಸಂಬರಗಿ, ರಂಜಿತ್, ರೂಪೇಶ್ ರಾಜಣ್ಣ, ಡಾಗ್ ಸತೀಶ್, ರಜತ್ ಬುಜ್ಜಿ, ಶಿಶಿರ್ ಶಾಸ್ತ್ರಿ, ಧನುಷ್, ಐಶ್ವರ್ಯಾ ಸಿಂಧೋಗಿ ಹಾಗೂ ಹಿರಿಯ ನಟ ಅಭಿಜೀತ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಮದುವೆ ಸಂಭ್ರಮಕ್ಕೆ ಮೆರುಗು ನೀಡಿದರು.

ʻವಾರ್ನಿಂಗ್‌ ಕೊಡ್ತಾರೆ, ಟಾರ್ಚರ್‌ ಮಾಡ್ತಾರೆ, ಪ್ಲೀಸ್‌ ಹೀಗೆಲ್ಲಾ ಮಾಡಬೇಡಿʼ; ಅಭಿಮಾನಿಯ ಅತಿರೇಕದ ವರ್ತನೆ ಬಗ್ಗೆ ಭವ್ಯಾ ಗೌಡ ಬೇಸರ

ಅಕ್ಕನ ಮದುವೆಯನ್ನು ಯಶಸ್ವಿಯಾಗಿ ಮಾಡಿದ ಭವ್ಯಾ

‘ಗೀತಾ’ ಧಾರಾವಾಹಿಯ ಮೂಲಕ ಮನೆಮಾತಾಗಿ, ಪ್ರಸ್ತುತ ಜೀ ಕನ್ನಡದ ಜನಪ್ರಿಯ ‘ಕರ್ಣ’ ಸೀರಿಯಲ್‌ನಲ್ಲಿ ನಟಿಸುತ್ತಿರುವ ಭವ್ಯಾ ಗೌಡ, ಅಕ್ಕನ ಮದುವೆಯ ಪ್ರತಿಯೊಂದು ಜವಾಬ್ದಾರಿಯನ್ನು ತಾವೇ ಮುಂದೆ ನಿಂತು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮೂವರು ಸಹೋದರಿಯರ ಈ ಬಾಂಧವ್ಯ ಮದುವೆ ಸಮಾರಂಭದಲ್ಲಿ ಎಲ್ಲರ ಗಮನಸೆಳೆಯಿತು. ಮೆಹಂದಿ ಶಾಸ್ತ್ರದ ವೇಳೆ ಭವ್ಯಾ ಗೌಡ ತಮ್ಮ ಕೈಗೆ ‘ಸಿಸ್ಟರ್ಸ್ ಫಾರೆವರ್’ ಎಂಬ ವಿಶೇಷ ಥೀಮ್‌ನಲ್ಲಿ ಮೆಹಂದಿ ಹಾಕಿಸಿಕೊಂಡು ಸಹೋದರಿಯರ ಪ್ರೀತಿಯನ್ನು ಮೆರೆದಿದ್ದಾರೆ.

ಹಳದಿ, ಮೆಹಂದಿ ಹಾಗೂ ರಿಸೆಪ್ಷನ್‌ನಲ್ಲಿ ವಿಶೇಷ ಡಿಸೈನರ್ ಉಡುಪುಗಳಲ್ಲಿ ಕಂಗೊಳಿಸಿದರು ಭವ್ಯಾ ಗೌಡ. ಸದ್ಯ ಈ ಮದುವೆ ಸಮಾರಂಭದ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.