ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻವಾರ್ನಿಂಗ್‌ ಕೊಡ್ತಾರೆ, ಟಾರ್ಚರ್‌ ಮಾಡ್ತಾರೆ, ಪ್ಲೀಸ್‌ ಹೀಗೆಲ್ಲಾ ಮಾಡಬೇಡಿʼ; ಅಭಿಮಾನಿಯ ಅತಿರೇಕದ ವರ್ತನೆ ಬಗ್ಗೆ ಭವ್ಯಾ ಗೌಡ ಬೇಸರ

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ‘ಕರ್ಣ’ ಧಾರಾವಾಹಿಯ ನಟಿ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಅಭಿಮಾನಿಯೊಬ್ಬಳ ಅತಿರೇಕದ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಭವ್ಯಾ ಸಹೋದರಿ ದಿವ್ಯಾ ಗೌಡ ಅವರ ಹೂವಿನ ಅಂಗಡಿಗೆ ಯುವತಿಯೊಬ್ಬಳು ಬಟ್ಟೆಬರೆ ಸಮೇತ ಬಂದು ಕಿರಿಕ್ ಮಾಡಿದ್ದಾಳೆ.

ನಟಿ ಭವ್ಯಾ ಗೌಡ ಅಕ್ಕನ ಹೂವಿನ ಅಂಗಡಿಗೆ ನುಗ್ಗಿ ಕಿರಿಕ್‌ ಮಾಡಿದ ಯುವತಿ!

-

Avinash GR
Avinash GR Jul 8, 2026 8:16 PM

ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಹಾಗೂ ಪ್ರಸ್ತುತ ಜನಪ್ರಿಯ ‘ಕರ್ಣ’ ಧಾರಾವಾಹಿಯ ನಟಿ ಭವ್ಯಾ ಗೌಡ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಭಿಮಾನಿಯೊಬ್ಬರ ಅತಿರೇಕದ ವರ್ತನೆಯಿಂದ ತಮಗಾದ ಕಹಿ ಅನುಭವ ಮತ್ತು ಮಾನಸಿಕ ಕಿರಿಕಿರಿಯನ್ನು ಅವರು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.

ಹೂವಿನ ಅಂಗಡಿಗೆ ಕಾಲ್ಸ್‌ ಬರುತ್ತಿದೆ

ನಟಿ ಭವ್ಯಾ ಗೌಡ ಅವರು ತಮ್ಮ ಸಹೋದರಿ ದಿವ್ಯಾ ಗೌಡ ಅವರೊಂದಿಗೆ ಜೊತೆಗೂಡಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಹೌಸ್ ಆಫ್ ಫ್ಲವರ್ಸ್’ ಎಂಬ ಹೂವಿನ ವ್ಯಾಪಾರದ ಮಳಿಗೆಯನ್ನು ನಡೆಸುತ್ತಿದ್ದಾರೆ. ಆದರೆ, ಭವ್ಯಾ ಗೌಡ ಅವರ ವೈಯಕ್ತಿಕ ದೂರವಾಣಿ ಸಂಖ್ಯೆ ಬೇಕು ಹಾಗೂ ಅವರನ್ನೇ ಭೇಟಿ ಮಾಡಬೇಕು ಎಂದು ಹಠ ಹಿಡಿದು ಅನೇಕರು ಈ ಅಂಗಡಿಯ ಅಧಿಕೃತ ಸಂಖ್ಯೆಗೆ ನಿರಂತರವಾಗಿ ಕರೆ ಮಾಡುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಸಿಬ್ಬಂದಿ ವರ್ಗದವರ ದೈನಂದಿನ ಕೆಲಸ ಕಾರ್ಯಗಳಿಗೆ ಭಾರಿ ಅಡಚಣೆಯಾಗುತ್ತಿದೆ, ಅವರಿಗೆ ವಾರ್ನಿಂಗ್‌ ಕೋಡೋದು, ಟಾರ್ಚರ್‌ ಕೋಡೋದು ಆಗ್ತಿದೆ. ದಯವಿಟ್ಟು ಹೀಗೆಲ್ಲಾ ಮಾಡಬೇಡಿ ಎಂದು ಭವ್ಯಾ ಗೌಡ ಹೇಳಿದ್ದಾರೆ.

ಮನೆ ಬಿಟ್ಟು ಬಂದು ಹಠ ಮಾಡಿದ ಯುವತಿ

ವಿಡಿಯೋದಲ್ಲಿ ಯುವತಿಯೊಬ್ಬಳ ವರ್ತನೆಯನ್ನು ಪ್ರಸ್ತಾಪಿಸಿರುವ ಭವ್ಯಾ, "ಕೆಲ ದಿನಗಳ ಹಿಂದೆ ಹುಡುಗಿಯೊಬ್ಬಳು ಮನೆ ಬಿಟ್ಟು ಬಂದು ನನ್ನನ್ನು ಭೇಟಿ ಮಾಡಲೇಬೇಕೆಂದು ಹಠ ಹಿಡಿದಿದ್ದಳು. ಆಗ ನನ್ನ ಅಕ್ಕ ಅವಳಿಗೆ ತಿಳಿಹೇಳಿ ವಾಪಸ್ ಕಳಿಸಿದ್ದರು. ಆದರೆ, ಮೂರ್ನಾಲ್ಕು ದಿನಗಳ ಹಿಂದೆ ಅದೇ ಹುಡುಗಿ ಮತ್ತೊಮ್ಮೆ ತನ್ನ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಂಡು ನಮ್ಮ ಹೂವಿನ ಅಂಗಡಿಗೆ ಬಂದಿದ್ದಾಳೆ. ತನಗೆ ನಟನೆಯನ್ನು ಕಲಿಯಬೇಕು, ಭವ್ಯಾ ಗೌಡ ಅವರ ಜೊತೆಯಲ್ಲೇ ಇರಬೇಕು ಎಂದು ಹಠ ಹಿಡಿದು ಕುಳಿತಿದ್ದಾಳೆ. ಅಕ್ಕ ಶೂಟಿಂಗ್ ನೆಪ ಹೇಳಿ ಕನ್ವಿನ್ಸ್ ಮಾಡಿ ಕಳಿಸಿದರೂ ಆಕೆ ಕೇಳುತ್ತಿಲ್ಲ" ಎಂದು ಘಟನೆಯನ್ನು ವಿವರಿಸಿದ್ದಾರೆ.

Bhavya Gowda: ಅನುಪಮಾ ಗೌಡ ನಿರೂಪಣೆಯ Boys Vs Girls ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ?: ಅಸಲಿ ಕಾರಣ ಏನು?

ಮಾಲೀಕರ ಮನೆ ಬಾಗಿಲು ತಟ್ಟಿದ ಫ್ಯಾನ್

ಆ ಹುಡುಗಿಯ ಅತಿರೇಕದ ವರ್ತನೆ ಅಷ್ಟಕ್ಕೇ ನಿಂತಿಲ್ಲ. ಆ ಹೂವಿನ ಅಂಗಡಿಯ ಬಿಲ್ಡಿಂಗ್ ಮಾಲೀಕರ ಮನೆಗೇ ನೇರವಾಗಿ ತೆರಳಿ, ಅವರ ಮನೆ ಬಾಗಿಲನ್ನು ಬಡಿದು ಭವ್ಯಾ ಗೌಡ ಅವರ ನಂಬರ್ ನೀಡುವಂತೆ ಪೀಡಿಸಿದ್ದಾಳೆ. ಇದರಿಂದಾಗಿ ಮನೆ ಮಾಲೀಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ಭವ್ಯಾ ಗೌಡ, "ದಯವಿಟ್ಟು ಯಾರೂ ವೈಯಕ್ತಿಕ ವಿಚಾರಗಳಿಗಾಗಿ ಬಿಸಿನೆಸ್ ನಂಬರ್ ಬಳಸಿ ಸ್ಟಾಫ್‌ಗೆ ಟಾರ್ಚರ್ ಕೊಡಬೇಡಿ. ಮನೆ ಮಾಲೀಕರು ಈಗಾಗಲೇ ಈ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಮುಂದಿನ ಬಾರಿ ಇದೇ ರೀತಿ ಅತಿರೇಕ ಮುಂದುವರಿದರೆ ನಾವು ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕಾಗುತ್ತದೆ ಎಂದಿದ್ದಾರೆ. ಇದು ದೊಡ್ಡ ಸಮಸ್ಯೆಯಾಗಿ ರೂಪಗೊಳ್ಳುವ ಮುನ್ನ ಎಲ್ಲರೂ ಯೋಚಿಸಲಿ" ಎಂದು ಹೇಳಿದ್ದಾರೆ.

ಭವ್ಯಾ ಗೌಡ ಹಂಚಿಕೊಂಡ ವಿಡಿಯೋ

ನನ್ನ ಇನ್‌ಸ್ಟಾಗ್ರಾಮ್‌ಗೆ ಸಂದೇಶ ಕಳುಹಿಸಿ

"ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನವಿರುತ್ತದೆ. ವ್ಯಾಪಾರ-ವ್ಯವಹಾರ ಮಾಡುವ ಸಮಯದಲ್ಲಿ ನಾವು ಅದಕ್ಕೆ ಆದ್ಯತೆ ನೀಡಬೇಕಾಗುತ್ತದೆ. ನಿಮಗೇನಾದರೂ ಹೂವಿನ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಮಾತ್ರ 'ಹೌಸ್ ಆಫ್ ಫ್ಲವರ್ಸ್' ಸಂಪರ್ಕಿಸಿ. ನನ್ನನ್ನು ಸಂಪರ್ಕಿಸಬೇಕಾದರೆ ದಯವಿಟ್ಟು ನನ್ನ ಇನ್‌ಸ್ಟಾಗ್ರಾಮ್ ಐಡಿಗೆ ನೇರವಾಗಿ ಮೇಸೆಜ್‌ ಕಳುಹಿಸಿ, ನಾನು ಖಂಡಿತ ಪರಿಶೀಲಿಸುತ್ತೇನೆ. ಆ ಹುಡುಗಿ ಸುರಕ್ಷಿತವಾಗಿ ಮನೆ ತಲುಪಿದ್ದಾಳೆ ಎಂದು ಭಾವಿಸುತ್ತೇನೆ, ದಯವಿಟ್ಟು ಮುಂದಿನ ದಿನಗಳಲ್ಲಿ ಯಾರೂ ಇಂತಹ ವರ್ತನೆಗೆ ಕೈಹಾಕಬೇಡಿ" ಎಂದು ಭವ್ಯಾ ಗೌಡ ವಿನಂತಿಸಿಕೊಂಡಿದ್ದಾರೆ.