ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆʼ ಹಾಡು ಭಾರಿ ವಿವಾದವನ್ನು ಸೃಷ್ಟಿಸುತ್ತಿದೆ. ಇದರ ಹಿಂದಿ ವರ್ಷನ್ ಅನ್ನು ಆಗಲೇ ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕೆಡಿ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾಧ್ಯಮಗಳಿಗೆ ಈ ಹಾಡಿನ ಪ್ರತಿಕ್ರಿಯೆ ನೀಡಿದ್ದಾರೆ.
ಸೆನ್ಸಾರ್ ಮಂಡಳಿಗೆ ಪತ್ರ ಬರೆಯಲಾಗಿದೆ
"ಈ ವಿವಾದದ ಕುರಿತು ನಾನು ಕೂಡ ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿನಿಮಾ ಎಂಬ ದೃಶ್ಯ ಮಾಧ್ಯಮದಲ್ಲೇ ಹೀಗೆ ಆಗಿಬಿಟ್ಟರೆ, ಹೆಣ್ಣು ಮಕ್ಕಳ ಬಗ್ಗೆ ಇನ್ನೂ ಹಗುರವಾಗಿ ಎಲ್ಲರೂ ಮಾತನಾಡೋಕೆ ಶುರು ಮಾಡಿಬಿಡ್ತಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ. ಜಯಮಾಲಾ ಅವರಿಗೆ ಪತ್ರವನ್ನು ಬರೆದಿದ್ದೇವೆ. ಸೆನ್ಸಾರ್ ಮಂಡಳಿಗೂ ಪತ್ರವನ್ನು ಬರೆದಿದ್ದೇವೆ. ಇದರ ಬಗ್ಗೆ ಕ್ರಮವನ್ನು ತೆಗೆದುಕೊಂಡು ನಮಗೆ ವರದಿಯನ್ನು ಕೊಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದೇವೆ. ನಮ್ಮ ಕಡೆಯಿಂದ ಏನು ಮಾಡಬೇಕೋ, ಅದನ್ನು ಮಾಡಿದ್ದೇವೆ" ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
KD The Devil: ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್ ರಿಲೀಸ್! ನೋರಾ ಫತೇಹಿ ಭರ್ಜರಿ ಡ್ಯಾನ್ಸ್
ಹಾಡು ಕೇಳುವುದಕ್ಕೂ ಮುಜುಗರ ಎನಿಸುತ್ತದೆ
"ನಾನು ಹಾಡನ್ನು ಕೇಳಿದ್ದೇನೆ, ನನಗೆ ಅದು ಇಷ್ಟವಾಗಿಲ್ಲ. ಅದನ್ನು ಪೂರ್ತಿ ಕೇಳುವುದಕ್ಕೂ ನನ್ನಿಂದ ಸಾಧ್ಯವಾಗಲಿಲ್ಲ. ಎಲ್ಲರ ಜೊತೆಗೆ ಕೇಳುವುದಕ್ಕೂ ಮುಜುಗರ ಎನಿಸುತ್ತದೆ. ಆ ರೀತಿ ಪದಬಳಕೆಯನ್ನು ಯಾರೂ ಕೂಡ ಮಾಡಬಾರದು" ಎಂದು ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಏನಿದು ವಿವಾದ?
ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿರುವ ಕೆಡಿ ಚಿತ್ರದ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆʼ ಹಾಡು ಈಚೆಗೆ ರಿಲೀಸ್ ಆಗಿದ್ದು, ಸ್ವತಃ ಪ್ರೇಮ್ ಅದಕ್ಕೆ ಲಿರಿಕ್ಸ್ ಬರೆದಿದ್ದಾರೆ. ಇದೊಂದು ಐಟಂ ಸಾಂಗ್ ಆಗಿದ್ದು, ಸಂಜಯ್ ದತ್ ಮತ್ತು ನೋರಾ ಫತೇಹಿ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಹಾಡಿನಲ್ಲಿರುವ ಸಾಹಿತ್ಯ ಕೀಳುದರ್ಜೆಯಿಂದ ಕೂಡಿದ್ದು, ಅಶ್ಲೀಲತೆಯಿಂದ ಕೂಡಿದೆ ಎಂಬ ಆರೋಪಗಳು ಕೇಳಿಬಂದಿವೆ.
Kiccha Sudeep: ಧ್ರುವ ಸರ್ಜಾ ನಟನೆಯ ಕೆಡಿ ಸೆಟ್‌ಗೆ ಸುದೀಪ್ ಎಂಟ್ರಿ; ಅತಿಥಿ ಪಾತ್ರದಲ್ಲಿ ಕಿಚ್ಚ ನಟನೆ?
ಅದರಲ್ಲೂ ಹಿಂದಿ ವರ್ಷನ್ ಹಾಡು ಇದಕ್ಕಿಂತಲೂ ಹೆಚ್ಚು ಕಳಪೆ ಸಾಹಿತ್ಯ ಹೊಂದಿದ್ದು, ಈಗಾಗಲೇ ಸಂಪೂರ್ಣವಾಗಿ ಅದನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಕನ್ನಡ ಇನ್ನಿತರ ಭಾಷೆಗಳ ವರ್ಷನ್ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಗೊತ್ತಾಗಬೇಕಿದೆ.