ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಜೈಲರ್‌ʼ ನಟ ವಿನಾಯಕನ್ ವಿರುದ್ಧ ಮತ್ತೊಂದು ಕೇಸ್‌ ದಾಖಲು; 8 ವರ್ಷದ ಮಗುವಿನ ಫೋಟೋ ಬಳಸಿ ಅಶ್ಲೀಲ ಕಾಮೆಂಟ್‌ ಮಾಡಿದ ಆರೋಪ!

ʻಜೈಲರ್ʼ ಸಿನಿಮಾ ಖ್ಯಾತಿಯ ನಟ ವಿನಾಯಕನ್ ವಿರುದ್ಧ ಕೇಸ್‌ ದಾಖಲಾಗಿದೆ. 8 ವರ್ಷದ ಹೆಣ್ಣುಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಅಶ್ಲೀಲ ಕಾಮೆಂಟ್ ಮಾಡಿದ ಹಾಗೂ ಐಟಿ ಕಾಯ್ದೆ ಉಲ್ಲಂಘಿಸಿದ ಗಂಭೀರ ಆರೋಪದಡಿ ಕೇರಳದ ಮಾವೇಲಿಕ್ಕರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

'ಜೈಲರ್', 'ಕಮ್ಮಾಟಿ ಪಾಡಂ' ಖ್ಯಾತಿಯ ಜನಪ್ರಿಯ ನಟ ವಿನಾಯಕನ್ ವಿರುದ್ಧ ಮಹಿಳೆಯ ಘನತೆಗೆ ಕುಂದು ಉಂಟುಮಾಡಿದ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಡಿ ಕೇರಳದ ಮಾವೇಲಿಕ್ಕರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೇರಳ ರಾಜ್ಯ ಬಾಲಹಕ್ಕುಗಳ ಸಂರಕ್ಷಣಾ ಆಯೋಗದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಈ ಎಫ್‌ಐಆರ್ ದಾಖಲಾಗಿದೆ.

ಏನಿದು ಘಟನೆ?

ವರದಿಗಳ ಪ್ರಕಾರ, ಈ ಪ್ರಕರಣವು ಕಳೆದ ವರ್ಷ ಜುಲೈನಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಆಲಪ್ಪುಳ ಜಿಲ್ಲೆಯ ತಾಳಕ್ಕರ ಮೂಲದ ಮಹಿಳೆಯೊಬ್ಬರು, ವಿನಾಯಕನ್ ಅವರ ವಿರುದ್ಧ ಟೀಕಾತ್ಮಕವಾಗಿದ್ದ ಫೇಸ್‌ಬುಕ್ ಪೋಸ್ಟ್ ಒಂದನ್ನು ವಾಟ್ಸಾಪ್ ಮೂಲಕ ಅವರಿಗೆ ಕಳುಹಿಸಿದ್ದರು.

ಇದರಿಂದ ಕೆರಳಿದ ನಟ ವಿನಾಯಕನ್, ದೂರುದಾರ ಮಹಿಳೆಯ ವಾಟ್ಸಾಪ್ ಪ್ರೊಫೈಲ್ ಚಿತ್ರದಲ್ಲಿದ್ದ ಅವರ ಎಂಟು ವರ್ಷದ ಮಗಳ ಫೋಟೋವನ್ನು ದೂರುದಾರರ ಫೋನ್ ನಂಬರ್ ಮತ್ತು ಅಶ್ಲೀಲವೆನಿಸುವ ಕೆಲವು ಕಾಮೆಂಟ್‌ಗಳೊಂದಿಗೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Actor Vinayakan: ಜೈಲರ್’ ಖ್ಯಾತಿಯ ವಿನಾಯಕನ್ ಮತ್ತೆ ಬಂಧನ; ಕಾರಣವೇನು?

ನಿಂದನಾತ್ಮಕ ಭಾಷೆಯನ್ನು ಬಳಸಿದ್ದರು

ನಟ ವಿನಾಯಕನ್ ಫೋನ್ ನಂಬರ್ ಬಹಿರಂಗಪಡಿಸಿದ ಕಾರಣ, ಅಪರಿಚಿತರಿಂದ ತಮಗೆ ನಿರಂತರವಾಗಿ ಫೋನ್ ಕರೆಗಳು ಬಂದು ನಿಂದನಾತ್ಮಕ ಭಾಷೆಯನ್ನು ಬಳಸಲಾಗುತ್ತಿತ್ತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ದೌರ್ಜನ್ಯದ ವಿರುದ್ಧ ಅವರು ಬಾಲಹಕ್ಕುಗಳ ಆಯೋಗದ ಮೊರೆ ಹೋಗಿದ್ದರು. ಆಲಪ್ಪುಳದಲ್ಲಿ ನಡೆದ ಆಯೋಗದ ಸಭೆಯಲ್ಲಿ ಈ ಗಂಭೀರ ವಿಷಯವನ್ನು ಪರಿಗಣಿಸಿ, ನಟ ವಿನಾಯಕನ್‌ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಯಿತು. ಈ ಶಿಫಾರಸಿನ ಅನ್ವಯ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಮುಂದಿನ ವಾರ ನಟ ವಿನಾಯಕನ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ.

ಪದೇಪದೇ ಕಾಂಟ್ರವರ್ಸಿಯಲ್ಲಿ ಸಿಲುಕುವ ವಿನಾಯಕನ್

ನಟ ವಿನಾಯಕನ್ ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಸದ್ಯ ಸಾಲು-ಸಾಲು ವಿವಾದಗಳಲ್ಲಿ ಅವರು ಹೆಸರು ಪದೇಪದೇ ಕೇಳಿಬರುತ್ತಲೇ ಇರುತ್ತದೆ. ಅಂದಹಾಗೆ, ಇಷ್ಟೆಲ್ಲಾ ಕಾಂಟ್ರವರ್ಸಿಗಳ ನಡುವೆಯೂ ಅವರು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದು, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ, ರಜನಿಕಾಂತ್ ನಟನೆಯ ಬಹುನಿರೀಕ್ಷಿತ 'ಜೈಲರ್ 2' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇದೇ ಅಕ್ಟೋಬರ್ 15ರಂದು ತೆರೆಕಾಣಲಿದೆ.