‘ದಿ ವಿಲನ್’ ಸಿನಿಮಾದ ಬಳಿಕ ಹಾಗೂ ‘ಕೆಡಿ’ ಚಿತ್ರದ ಅತಿಥಿ ಪಾತ್ರದ ನಂತರ, ‘ಕಿಂಗ್’ ಕಿಚ್ಚ ಸುದೀಪ್ ಮತ್ತು ‘ಜೋಗಿ’ ಪ್ರೇಮ್ ಮತ್ತೊಮ್ಮೆ ಒಂದಾಗಿದ್ದಾರೆ. ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಹೊಸ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಚಿತ್ರಕ್ಕೆ ‘ದಾದಾ ಆನ್ ಹಾಲಿಡೇ’ (DADA On Holiday) ಎಂದು ನಾಮಕರಣ ಮಾಡಲಾಗಿದೆ.
ಪಕ್ಕಾ ಫ್ಯಾಮಿಲಿ ಎಂಟರ್ಟೈನರ್
ಶೀರ್ಷಿಕೆ ಟೀಸರ್ನಲ್ಲಿ ನಿರ್ದೇಶಕ ಪ್ರೇಮ್ ತಮ್ಮದೇ ಶೈಲಿಯಲ್ಲಿ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಮೂಡಿಸಿದ್ದಾರೆ. "ಈ ಸಿನಿಮಾದಲ್ಲಿ ಲವ್ ಇರುತ್ತದೆ, ಆದರೆ ಲವ್ ಸ್ಟೋರಿ ಅಲ್ಲ; ಸೆಂಟಿಮೆಂಟ್ ಇದೆ, ಆದರೆ ಮದರ್ ಸೆಂಟಿಮೆಂಟ್ ಇರೋದಿಲ್ಲ; ರೌಡಿಗಳು ಇರ್ತಾರೆ, ಆದರೆ ರೌಡಿಸಂ ಇರೋದಿಲ್ಲ. ಎಲ್ಲರೂ ಅವರವರ ಕಥೆಯಲ್ಲಿ ಅವರೇ ಹೀರೋ.. ಆದರೆ ಬೇರೆಯವರ ಕಥೆಯಲ್ಲಿ ಹೀರೋ ಆಗ್ತಾನಲ್ಲ ಅವನೇ ಸಾರ್ ನಮ್ ಹೀರೋ" ಎಂದು ಹೇಳುವ ಮೂಲಕ ಪ್ರೇಮ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.
ಹಾಸ್ಯ, ಕೌಟುಂಬಿಕ ಮೌಲ್ಯಗಳು ಹಾಗೂ ಎಮೋಷನಲ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುವ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಇದೆ.
ನಮ್ ವಿಂಟೇಜ್ ಕಿಚ್ಚ ಮತ್ತೆ ಬಂದ್ರು
ಟೀಸರ್ನಲ್ಲಿ ಕಿಚ್ಚ ಸುದೀಪ್ ಪೊಲೀಸ್ ಸ್ಟೇಷನ್ನಲ್ಲಿ ವಿಭಿನ್ನ ಸ್ವ್ಯಾಗ್ ಹಾಗೂ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮ್ಯಾನರಿಸಂ ಮತ್ತು ಆಟಿಟ್ಯೂಡ್ ಕಂಡ ಅಭಿಮಾನಿಗಳು, ಈ ಹಿಂದಿನ ‘ವಿಷ್ಣುವರ್ಧನ’ ಹಾಗೂ ‘ಕೋಟಿಗೊಬ್ಬ 2’ ಸಿನಿಮಾಗಳನ್ನು ನೆನಪಿಸಿಕೊಂಡು "ನಮ್ ವಿಂಟೇಜ್ ಕಿಚ್ಚ ಮತ್ತೆ ಬಂದ್ರು" ಎಂದು ಸಂಭ್ರಮಿಸುತ್ತಿದ್ದಾರೆ. ಈ ಬಾರಿ ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಫಿಕ್ಸ್ ಎಂದು ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.
ಆರುದ್ರ ಸಿನಿಮಾಸ್ ಹಾಗೂ ಪ್ರೇಮ್ ಫೀನಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪೇಶ್ ಕುಮಾರ್ ಜಿ, ಶಶಿ ಕಿರಣ್ ಆರ್, ಮತ್ತು ರಕ್ಷಿತಾ ಪ್ರೇಮ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ತಂತ್ರಜ್ಞರ ದಂಡೇ ಈ ಸಿನಿಮಾಕ್ಕೆ ಕೈಜೋಡಿಸಿದ್ದು, ಅರ್ಜುನ್ ಜನ್ಯ ಅವರ ರೋಮಾಂಚಕ ಸಂಗೀತ ನಿರ್ದೇಶನ, ಶೇಖರ್ ಚಂದ್ರು ಅವರ ಛಾಯಾಗ್ರಹಣ, ಶಿವಕುಮಾರ್ ಜೆ. ಅವರ ಕಲಾ ನಿರ್ದೇಶನ, ಸಂಕೇತ್ ಆಚಾರ್ ಅವರ ಸಂಕಲನ ಹಾಗೂ ಅಭಿಜಿತ್ ಮಹೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿರಲಿದೆ.
ಒಟ್ಟಿನಲ್ಲಿ ‘ದಾದಾ ಆನ್ ಹಾಲಿಡೇ’ ಟೀಸರ್ ಮೂಲಕವೇ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಸದ್ದು ಮಾಡಲು ಶುರುಮಾಡಿದ್ದು, ಸಿನಿಮಾದ ಮುಂದಿನ ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.