ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಣ್ಣದ ಲೋಕದಲ್ಲಿ ಕಿಚ್ಚನ ಜರ್ನಿಗೆ 30 ವರ್ಷ; ಸುದೀಪ್‌ಗೆ ಮನಸಾರೆ ಶುಭಕೋರಿದ ಸಲ್ಮಾನ್‌ ಖಾನ್, ಗಂಗೂಲಿ, ಮೋಹನ್‌ಲಾಲ್, ರಿಷಬ್‌ ಶೆಟ್ಟಿ!

Kichcha Sudeep 30 Years: ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 30 ವರ್ಷಗಳನ್ನು ಪೂರೈಸಿದ್ದು, ಈ ಸಾಧನೆಯನ್ನು ಬಿಗ್‌ ಬಾಸ್‌ ವೇದಿಕೆಯಲ್ಲಿ ಸಂಭ್ರಮಿಸಲಾಯಿತು. ಬಾಲಿವುಡ್ ನಟ ಸಲ್ಮಾನ್ ಖಾನ್, ಸೊಹೈಲ್ ಖಾನ್, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ, ಮೋಹನ್‌ಲಾಲ್, ರಿಷಬ್ ಶೆಟ್ಟಿ ಹಾಗೂ ದೇವಿ ಶ್ರೀ ಪ್ರಸಾದ್ ಕಿಚ್ಚನ ಸಾಧನೆಯನ್ನು ಹೃತ್ಪೂರ್ವಕವಾಗಿ ಕೊಂಡಾಡಿದ್ದಾರೆ.

ಸುದೀಪ್‌ ಸಿನಿಜರ್ನಿಗೆ 30ರ ಹರೆಯ; ‌ಪ್ರೀತಿಯಿಂದ ಹಾರೈಸಿದ ಸಲ್ಮಾನ್, ಗಂಗೂಲಿ

-

Avinash GR
Avinash GR Sep 27, 2026 7:04 PM

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 30 ವರ್ಷಗಳನ್ನು ಪೂರೈಸಿದ್ದಾರೆ. ಈ ರೋಚಕ ಸಿನಿ ಪಯಣದ ಮೈಲಿಗಲ್ಲನ್ನು 'ಬಿಗ್‌ ಬಾಸ್' ವೇದಿಕೆಯಲ್ಲಿ ಅದ್ಧೂರಿಯಾಗಿ ಸಂಭ್ರಮಿಸಲಾಯಿತು. ಈ ವಿಶೇಷ ಕ್ಷಣದಲ್ಲಿ ದೇಶದ ವಿವಿಧ ಚಿತ್ರರಂಗದ ಗಣ್ಯರು ಸುದೀಪ್ ಅವರಿಗೆ ವಿಡಿಯೋ ಸಂದೇಶಗಳ ಮೂಲಕ ಪ್ರೀತಿಯ ಶುಭಾಶಯಗಳನ್ನು ಕೋರಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಸಲ್ಮಾನ್‌ ಸಹೋದರರ ಪ್ರೀತಿಯ ಹಾರೈಕೆ

ಹಿಂದಿ ಬಿಗ್‌ ಬಾಸ್ ನಿರೂಪಕ, ಬಾಲಿವುಡ್ ನಟ ಸಲ್ಮಾನ್ ಖಾನ್ ವಿಶೇಷ ಸಂದೇಶ ಕಳುಹಿಸಿ, "ಕನ್ನಡ ಚಿತ್ರರಂಗದಲ್ಲಿ 30 ಅದ್ಭುತ ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆಗಳು ಕಿಚ್ಚ. ಪ್ರತಿಯೊಬ್ಬ ಕನ್ನಡಿಗ ಹಾಗೂ ಭಾರತೀಯನ ಪರವಾಗಿ ಜನರನ್ನು ರಂಜಿಸಿದ್ದಕ್ಕಾಗಿ ಧನ್ಯವಾದಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ, ಲವ್ ಯು" ಎಂದು ಪ್ರೀತಿ ವ್ಯಕ್ತಪಡಿಸಿದರು.

Kichcha Sudeep : ‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!

ಹಾಗೆಯೇ ಬಾಲಿವುಡ್ ನಟ-ನಿರ್ಮಾಪಕ ಸೊಹೈಲ್ ಖಾನ್ ಮಾತನಾಡಿ, "ಕಳೆದ 18-20 ವರ್ಷಗಳಿಂದ ನಾವಿಬ್ಬರೂ ಸಹೋದರರಂತೆ ಪ್ರೀತಿ ಬೆಳೆಸಿಕೊಂಡಿದ್ದೇವೆ. 30 ವರ್ಷ ಪೂರೈಸಿರುವುದು ನಂಬಲಾಗದ ಸಂಗತಿ. ಆದರೆ ಇದು ನಿಮಗೆ ಕೇವಲ ಆರಂಭವಷ್ಟೇ" ಎಂದು ಹಾರೈಸಿದರು.

ಕಿಚ್ಚನ ಬಗ್ಗೆ ಗಂಗೂಲಿ ಹೇಳಿದ್ದೇನು?

ಬೆಂಗಾಲಿ ಬಿಗ್‌ ಬಾಸ್ ನಿರೂಪಕ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸುದೀಪ್ ಸಾಧನೆಯನ್ನು ಬಣ್ಣಿಸಿ, "ನೀವು ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿರುವುದು ಕೇಳಿ ತುಂಬಾ ಖುಷಿಯಾಯಿತು. ಇದು ತಲುಪಲು ಬಹಳ ಕಷ್ಟಕರವಾದ ದೊಡ್ಡ ಮೈಲಿಗಲ್ಲು. ಶ್ರೇಷ್ಠತೆ ಎಂಬುದು ಸಾಧನೆಯ ದೀರ್ಘಕಾಲಿಕತೆಯಲ್ಲಿದೆ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇವರ ಜೊತೆಗೆ ಮಲಯಾಳಂ ಸೂಪರ್‌ಸ್ಟಾರ್ ಹಾಗೂ ಮಲಯಾಳಂ ಬಿಗ್‌ ಬಾಸ್ ನಿರೂಪಕ ಮೋಹನ್‌ಲಾಲ್ ಅವರು ಪ್ರೀತಿಯೊಂದಿಗೆ ಕಿಚ್ಚನಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಕಿಚ್ಚನ ಈ ಭವ್ಯ ಪಯಣಕ್ಕೆ ಶುಭಕೋರಿ ಅಭಿಮಾನ ವ್ಯಕ್ತಪಡಿಸಿದರು.

ಕಿಚ್ಚನಿಗೆ ಪ್ರೀತಿಯಿಂದ ರಿಷಬ್‌ ಏನ್‌ ಹೇಳಿದ್ರು?

ಇದೇ ಸಂದರ್ಭದಲ್ಲಿ 'ಕಾಂತಾರ' ಖ್ಯಾತಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕರೆ ಮಾಡಿ, "ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ನೀವು ನೀಡಿರುವ ಕೊಡುಗೆ ಅಪಾರ. ನಾವೆಲ್ಲ ಹೊಸಬರಾಗಿ ಚಿತ್ರರಂಗಕ್ಕೆ ಬಂದಾಗ ನಮ್ಮಂತಹ ಯುವ ಕಲಾವಿದರಿಗೆ ನೀವು ನೀಡಿದ ಬೆಂಬಲ ಬಹಳ ದೊಡ್ಡದು. ನಿಮ್ಮ ಈ ಕಲಾ ಸೇವೆ ಹೀಗೇ ಮುಂದುವರಿಯಲಿ" ಎಂದು ತಮ್ಮ ಅಭಿಮಾನವನ್ನು ಹಂಚಿಕೊಂಡರು. ಒಟ್ಟಾರೆಯಾಗಿ, ಚಿತ್ರರಂಗದಲ್ಲಿ ಮೂರು ದಶಕ ಪೂರೈಸಿರುವ ಕಿಚ್ಚ ಸುದೀಪ್ ಅವರ ಸಾಧನೆಗೆ ಅಪಾರ ಪ್ರಶಂಸೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.