ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ದಂಪತಿ ತಮ್ಮ ದಾಂಪತ್ಯ ಜೀವನದ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಅಕ್ಟೋಬರ್ 18ರಂದು ಈ ಜೋಡಿ ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಭಾವನಾತ್ಮಕವಾಗಿ ಆಚರಿಸಿಕೊಂಡಿದ್ದವು. ಸುದೀಪ್ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು, ಆಪ್ತರು ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ಹಾಗೂ ಮದುವೆಯ ಸಾಂಪ್ರದಾಯಿಕ ಶಾಸ್ತ್ರಗಳು ವಿಧ್ಯುಕ್ತವಾಗಿ ನೆರವೇರಿದವು.
ವಿಡಿಯೋದಲ್ಲಿ ವಿಶೇಷ ಮಾಹಿತಿ ಹಂಚಿಕೊಂಡ ಪ್ರಿಯಾ
ಈ ವಿಶೇಷ ದಿನದ ಸ್ಪೆಷಲ್ ವಿಡಿಯೋವನ್ನು ಸುದೀಪ್ ದಂಪತಿ ಹಂಚಿಕೊಂಡಿದ್ದಾರೆ. ಪ್ರಿಯಾ ಸುದೀಪ್ ಅವರು ಧರಿಸಿದ್ದ ಉಡುಪು ಎಲ್ಲರ ಗಮನ ಸೆಳೆದಿದೆ. ತಮ್ಮ ಮದುವೆಯ ರಜತ ಮಹೋತ್ಸವದಂದು ಪ್ರಿಯಾ ಅವರು ದಿವಂಗತ ಅತ್ತೆ ಸರೋಜಾ ಸಂಜೀವ್ ಅವರ ಮದುವೆ ಸೀರೆಯನ್ನು ಧರಿಸಿ ಕಂಗೊಳಿಸಿದರು. ಈ ಸೀರೆ 62 ವರ್ಷ ಹಿಂದಿನದ್ದು ಎಂಬುದು ವಿಶೇಷ. ಅಷ್ಟೇ ಅಲ್ಲದೆ, ತಮ್ಮ ತಂದೆ ಪ್ರೀತಿಯಿಂದ ತಾಯಿಗೆ ಮಾಡಿಸಿಕೊಟ್ಟಿದ್ದ ಚಿನ್ನದ ಬಳೆಗಳನ್ನು ತೊಟ್ಟು ಹಿರಿಯರ ಮೇಲಿನ ಗೌರವವನ್ನು ಮೆರೆದಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ಸ್ಮರಿಸಿಕೊಂಡಿದ್ದಾರೆ.
Kiccha Sudeep: 'ಬಿಗ್ ಬಾಸ್ ಕನ್ನಡ' ಶೋಗೆ ಗುಡ್ಬೈ ಹೇಳಿದ Kiccha Sudeep; ಅಭಿಮಾನಿಗಳಿಗೆ ತೀವ್ರ ಬೇಸರ!
ನಮ್ಮ ಹಿರಿಯರು ನಮ್ಮೊಂದಿಗೆ ಜೀವಂತವಾಗಿದ್ದಾರೆ
"ಕಳೆದ 25 ವರ್ಷಗಳಿಂದ ಕೈ-ಕೈ ಹಿಡಿದು ಈ ಸುಂದರ ಪಯಣವನ್ನು ಸಾಗಿಸಿಕೊಂಡು ಬಂದಿದ್ದೇವೆ. ಈ ಸೀರೆಯ ಪ್ರತಿಯೊಂದು ಮಡಿಕೆಯಲ್ಲಿ ಹಾಗೂ ಬಳೆಯ ಪ್ರತಿಯೊಂದು ಹೊಳಪಿನಲ್ಲಿ ನಮ್ಮ ಹಿರಿಯರು ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಹಿರಿಯರನ್ನು ಗೌರವಿಸುವುದು ಎಂದರೆ ಕೇವಲ ನೆನಪಿಸಿಕೊಳ್ಳುವುದಷ್ಟೇ ಅಲ್ಲ, ನಾವು ಪ್ರೀತಿಸುವ ರೀತಿಯಲ್ಲಿ ಮತ್ತು ಪಾಲಿಸುವ ಸಂಪ್ರದಾಯಗಳ ಮೂಲಕ ಅವರ ನೆನಪನ್ನು ಮುಂದುವರಿಸಿಕೊಂಡು ಹೋಗುವುದು. ಸಂಪ್ರದಾಯವೆಂಬುದು ಒಂದು ಸಮೂಹ ಗಾಯನವಿದ್ದಂತೆ, ಅದರಲ್ಲಿ ಪೂರ್ವಜರು ಹಾಡುತ್ತಿರುತ್ತಾರೆ, ಆ ಸ್ವರಗಳನ್ನು ಮುಂದುವರಿಸಿಕೊಂಡು ಹೋಗುವವರು ನಾವು" ಎಂದು ಪ್ರಿಯಾ ಸುದೀಪ್ ಹೇಳಿದ್ದಾರೆ.
ʻಕಿಚ್ಚʼ ಸುದೀಪ್ - ಪ್ರಿಯಾ 25ನೇ ಮದುವೆ ವಾರ್ಷಿಕೋತ್ಸವದ ವಿಡಿಯೋ
ಎಲ್ಲವೂ ನಿನ್ನ ಪ್ರೀತಿ ಮತ್ತು ತ್ಯಾಗದ ಫಲ
ಇದೇ ಸಂದರ್ಭದಲ್ಲಿ ಪತ್ನಿ ಪ್ರಿಯಾ ಅವರಿಗೆ ಧನ್ಯವಾದ ಅರ್ಪಿಸಿರುವ ಕಿಚ್ಚ ಸುದೀಪ್, ಈ ಯಶಸ್ವಿ ದಾಂಪತ್ಯದ ಸಂಪೂರ್ಣ ಶ್ರೇಯಸ್ಸನ್ನು ಪತ್ನಿಗೆ ಸಲ್ಲಿಸಿದ್ದಾರೆ. "ನಮ್ಮ ಈ 25 ವರ್ಷಗಳ ಸುಂದರ ಪಯಣ ನಿನ್ನಿಂದಲೇ ಸಾಧ್ಯವಾಗಿದೆ. ಇದರಲ್ಲಿ ನನ್ನ ಪಾಲು ಹೆಚ್ಚೇನೂ ಇಲ್ಲ, ಎಲ್ಲವೂ ನಿನ್ನ ಪ್ರೀತಿ ಮತ್ತು ತ್ಯಾಗದ ಫಲ. ಇಷ್ಟು ಅದ್ಭುತವಾದ ಜೀವನದ ಜರ್ನಿ ನೀಡಿದ್ದಕ್ಕೆ ಧನ್ಯವಾದಗಳು ಪ್ರಿಯಾ" ಎಂದು ಪತ್ನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸುದೀಪ್ ಅವರ ಈ ನುಡಿಗಳು ಅಭಿಮಾನಿಗಳ ಮನ ಮುಟ್ಟಿವೆ.
ಕಿಚ್ಚನ ಮನೆಯಲ್ಲಿ ನಡೆದ ಈ ಸಂಭ್ರಮದ ಕ್ಷಣಗಳ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚಿತ್ರರಂಗದ ಗಣ್ಯರು, ಆಪ್ತರು ಹಾಗೂ ಕೋಟ್ಯಂತರ ಅಭಿಮಾನಿಗಳು ಸುದೀಪ್-ಪ್ರಿಯಾ ದಂಪತಿಗೆ 25ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.