ದೇಶದ ಅತ್ಯಂತ ಜನಪ್ರಿಯ ಹಾಗೂ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್', 2026ರ ಸಾಲಿನಲ್ಲಿ ಅಭೂತಪೂರ್ವ ವಿಸ್ತರಣೆಯೊಂದಿಗೆ ಮನರಂಜನಾ ಲೋಕಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಾಣದ ಈ ಮೆಗಾ ಫ್ರಾಂಚೈಸಿ, JioStar Network ಮತ್ತು JioHotstar ವೇದಿಕೆಗಳ ಮೂಲಕ ಏಕಕಾಲದಲ್ಲಿ 6 ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ದಾಖಲೆಯ 95ಕ್ಕೂ ಹೆಚ್ಚು ಪ್ರಮುಖ ಪ್ರಾಯೋಜಕ ಬ್ರ್ಯಾಂಡ್‌ಗಳು ಈ ಬಾರಿ ಕೈಜೋಡಿಸಿವೆ.
ಗ್ರಾಹಕ ಉತ್ಪನ್ನಗಳು (FMCG), ಆಟೋಮೊಬೈಲ್, ಆಭರಣ, ಫಿನ್‌ಟೆಕ್, ಪರ್ಸನಲ್ ಕೇರ್, ಇ-ಕಾಮರ್ಸ್, ಆಹಾರ ಮತ್ತು ಪಾನೀಯ ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳ ದಿಗ್ಗಜ ಕಂಪನಿಗಳು ಹಬ್ಬದ ಋತುವಿನಲ್ಲಿ ʻಬಿಗ್ ಬಾಸ್ʼ ಜೊತೆ ಪಾಲುದಾರಿಕೆ ಮಾಡಿಕೊಂಡಿವೆ.
ಸೆಪ್ಟೆಂಬರ್ 6ರಂದು ಏಕಕಾಲಕ್ಕೆ ಪ್ರೀಮಿಯರ್ ಆರಂಭ
ಭಾರತೀಯ ಮನರಂಜನಾ ಇತಿಹಾಸದಲ್ಲೇ ಮೊದಲ ಬಾರಿಗೆ 6 ಆವೃತ್ತಿಗಳು ಏಕಕಾಲದಲ್ಲಿ ಅಬ್ಬರಿಸುತ್ತಿದ್ದು, ಭಾರತೀಯ ಚಿತ್ರರಂಗದ ಪ್ರಮುಖ ಸೂಪರ್‌ಸ್ಟಾರ್‌ಗಳು ಈ ಶೋಗಳನ್ನು ಮುನ್ನಡೆಸುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ವಿಜಯ್ ಸೇತುಪತಿ, ಮಲಯಾಳಂನಲ್ಲಿ ಮೋಹನ್‌ಲಾಲ್ ಹಾಗೂ ಬಾಂಗ್ಲಾ ಆವೃತ್ತಿಯಲ್ಲಿ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈಗಾಗಲೇ ಆಗಸ್ಟ್ 30ರಂದು ಬಾಂಗ್ಲಾ ಆವೃತ್ತಿ ಆರಂಭಗೊಂಡಿದ್ದರೆ, ಬಹುನಿರೀಕ್ಷಿತ 'ಬಿಗ್ ಬಾಸ್ ಹಿಂದಿ ಸೀಸನ್ 20' ಹಾಗೂ ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಆವೃತ್ತಿಗಳು ಸೆಪ್ಟೆಂಬರ್ 6ರಂದು ಏಕಕಾಲಕ್ಕೆ ಅದ್ಧೂರಿಯಾಗಿ ಪ್ರೀಮಿಯರ್ ಆಗಲಿವೆ.
ಜಾಹೀರಾತುದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ರಾಷ್ಟ್ರೀಯ ವ್ಯಾಪ್ತಿಯೊಂದಿಗೆ ಸ್ಥಳೀಯ ಮಾರುಕಟ್ಟೆಯ ಸಾಂಸ್ಕೃತಿಕ ಪ್ರಸ್ತುತತೆಯನ್ನು ತಲುಪುವ ಈ ಅಪರೂಪದ ವೇದಿಕೆಯನ್ನು ಬ್ರ್ಯಾಂಡ್‌ಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಹಿಂದೂಸ್ತಾನ್ ಯೂನಿಲಿವರ್ (HUL), ಬ್ರಿಟಾನಿಯಾ, ಏಷ್ಯನ್ ಪೇಂಟ್ಸ್, ಮಾರುತಿ ಸುಜುಕಿ, ಗೋದ್ರೆಜ್, ಹೀರೋ ಮೋಟೋಕಾರ್ಪ್ ಮತ್ತು ಮಾಂಡೆಲೆಜ್‌ನಂತಹ ರಾಷ್ಟ್ರೀಯ ದೈತ್ಯ ಕಂಪನಿಗಳ ಜೊತೆಗೆ ಐ ಪ್ಲಸ್ ನೋವಾ ಸ್ಮಾರ್ಟ್‌ಫೋನ್, ಸ್ಟಾರ್ ಹೆಲ್ತ್, ಡ್ಯಾನ್ಯೂಬ್ ಪ್ರಾಪರ್ಟೀಸ್, ಹೈಯರ್ ಸೇರಿದಂತೆ ಹತ್ತಾರು ಪ್ರಮುಖ ಬ್ರ್ಯಾಂಡ್‌ಗಳು ಪ್ರಾಯೋಜಕತ್ವ ವಹಿಸಿವೆ.
Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!
ವಿಶೇಷವೆಂದರೆ, ಈ ಬಾರಿ ಹೊಸ ಜಾಹೀರಾತುದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಹಿಂದಿ ಆವೃತ್ತಿಯಲ್ಲಿ ಶೇ. 70ರಷ್ಟು ಹಾಗೂ ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಶೇ. 50ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್‌ಗಳು ಮೊದಲ ಬಾರಿಗೆ ಬಿಗ್ ಬಾಸ್ ತೆಕ್ಕೆಗೆ ಬಂದಿವೆ.
800 ಮಿಲಿಯನ್‌ಗೂ ಹೆಚ್ಚು ವೀಕ್ಷಕರನ್ನು ತಲುಪುವ ಸಾಮರ್ಥ್ಯ
ಕಳೆದ 2025ರ ಸಾಲಿನಲ್ಲಿ ಬಿಗ್ ಬಾಸ್ ಬರೋಬ್ಬರಿ 500 ಮಿಲಿಯನ್‌ಗೂ ಅಧಿಕ ವೀಕ್ಷಕರನ್ನು ತಲುಪಿದ್ದು, 438 ಬಿಲಿಯನ್ ನಿಮಿಷಗಳ ವೀಕ್ಷಣಾ ಅವಧಿಯೊಂದಿಗೆ ಶೇ. 47ರಷ್ಟು ಎಂಗೇಜ್‌ಮೆಂಟ್ ಬೆಳವಣಿಗೆ ದಾಖಲಿಸಿತ್ತು. ಇದೀಗ 2026ರಲ್ಲಿ ಮುಖ್ಯ ಶೋ ಆರಂಭಕ್ಕೂ ಮುನ್ನವೇ ಕನ್ನಡದಲ್ಲಿ 'ಅಗ್ನಿಪರೀಕ್ಷೆ' ಸೇರಿದಂತೆ ಪ್ರಾದೇಶಿಕ ಪ್ರೀ-ಶೋಗಳ ಮೂಲಕ ಬ್ರ್ಯಾಂಡ್‌ಗಳು ಸಕ್ರಿಯವಾಗಿ ಪ್ರಚಾರ ಆರಂಭಿಸಿವೆ.
ವಾರಕ್ಕೆ 800 ಮಿಲಿಯನ್‌ಗೂ ಹೆಚ್ಚು ವೀಕ್ಷಕರನ್ನು ತಲುಪುವ ಸಾಮರ್ಥ್ಯವಿರುವ ಜಿಯೋಸ್ಟಾರ್ ನೆಟ್‌ವರ್ಕ್ ಮತ್ತು ಜಿಯೋಹಾಟ್‌ಸ್ಟಾರ್ ಒಟ್ಟಾಗಿ, ಹಬ್ಬದ ಸಂಭ್ರಮದಲ್ಲಿರುವ ದೇಶದ ಪ್ರೇಕ್ಷಕರನ್ನು ಸೆಳೆಯಲು ಮತ್ತು ಕಾರ್ಪೊರೇಟ್ ಜಗತ್ತಿಗೆ ಅತಿದೊಡ್ಡ ಮಾರುಕಟ್ಟೆ ಒದಗಿಸಲು ಈ ಆರು ಆವೃತ್ತಿಗಳ ಮೂಲಕ ಸಜ್ಜಾಗಿವೆ.