ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ಹುಟ್ಟುಹಬ್ಬದ ದಿನವೇ ʻಬಿಗ್‌ ಬಾಸ್‌ʼ ಮನೆಯಿಂದ ಕಾಮನ್‌ಮ್ಯಾನ್‌ ಎಲಿಮಿನೇಟ್‌; ಮಂಜನಿಗೆ ಸುದೀಪ್‌ ಹೇಳಿಕಳುಹಿಸಿದ್ದೇನು?

Bigg Boss Kannada 13: ಬಿಗ್‌ ಬಾಸ್‌ ವೇದಿಕೆಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಪ್ರವೇಶಿಸಿ ಜನಮನ್ನಣೆ ಗಳಿಸಿದ್ದ ಮಂಜ, ಅಸಭ್ಯ ನಡವಳಿಕೆಯಿಂದಾಗಿ ತಮ್ಮ ಹುಟ್ಟುಹಬ್ಬದಂದೇ ರೆಡ್ ಕಾರ್ಡ್ ಪಡೆದು ಹೊರಬಿದ್ದಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದರೂ ಸಹಸ್ಪರ್ಧಿಗಳ ವ್ಯಕ್ತಿತ್ವ ನಿಂದನೆ ಮುಂದುವರಿಸಿದ್ದೇ ಈ ಕಠಿಣ ಶಿಕ್ಷೆಗೆ ಕಾರಣವಾಯಿತು.

‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಶೋನಲ್ಲಿ ಕಾಮನ್‌ಮ್ಯಾನ್ ಆಗಿ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದ ಮಹಾಕವಿ ಮಂಜ, ತಮ್ಮ ಹುಟ್ಟುಹಬ್ಬದ (ಅಕ್ಟೋಬರ್ 11) ದಿನದಂದೇ ದೊಡ್ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ಸಿಕ್ಕ ಉತ್ತಮ ಅವಕಾಶವನ್ನು ನಾಲಗೆಯ ಮೇಲಿನ ಹಿಡಿತ ತಪ್ಪಿ ಕಳೆದುಕೊಂಡಿರುವ ಅವರು, ತಾವೇ ಮಾಡಿದ ತಪ್ಪಿನಿಂದಾಗಿ ಕೇವಲ ಐದನೇ ವಾರಕ್ಕೆ 'ರೆಡ್ ಕಾರ್ಡ್' ಪಡೆದು ಶೋನಿಂದ ಹೊರಬಿದ್ದಿದ್ದಾರೆ.

ಆಡುವ ಮಾತುಗಳ ಮೇಲೆ ನಿಯಂತ್ರಣವಿಲ್ಲದೆ ಪದೇ ಪದೇ ಎಡವಿದರು. ಕಿಚ್ಚ ಸುದೀಪ್ ಸೇರಿದಂತೆ ಬಿಗ್ ಬಾಸ್ ಎಷ್ಟೇ ಎಚ್ಚರಿಕೆ ನೀಡಿದರೂ ಅವರು ತಮ್ಮ ಅಸಭ್ಯ ವರ್ತನೆಯನ್ನು ಮುಂದುವರಿಸಿದ್ದರು. ಆಟ ಹಾಗೂ ಮಾತಿನ ಮೇಲೆ ಕೊಂಚ ಸಂಯಮ ಇಟ್ಟುಕೊಂಡಿದ್ದರೆ ಫಿನಾಲೆ ತಲುಪುವ ಅವಕಾಶವಿದ್ದರೂ, ಬಾಯಿತಪ್ಪಿನಿಂದ ಆ ಎಲ್ಲಾ ಸಾಧ್ಯತೆಗಳನ್ನು ಸ್ವತಃ ಹಾಳುಮಾಡಿಕೊಂಡರು.

ಸಿಹಿತಿಂದು ಸಂಭ್ರಮಿಸಿದ ಯಶಸ್‌

ಆಟದ ಭರದಲ್ಲಿ ಮಂಜ ಆಡಿದ ಅಸಭ್ಯ ಮತ್ತು ಅವಹೇಳನಕಾರಿ ಮಾತುಗಳನ್ನು ಬಿಗ್ ಬಾಸ್ ಆಡಿಯೋ ಮೂಲಕ ಮನೆಯ ಸದಸ್ಯರೆದುರು ಕೇಳಿಸಿದರು. ಈ ನಡುವೆ ತಾಯಿಯ ಧ್ವನಿ ಸಂದೇಶ ಕೇಳಿ ಮಂಜುನಾಥ್ ಪಶ್ಚಾತ್ತಾಪದಿಂದ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಆದರೆ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಗ್ ಬಾಸ್, “ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹಸ್ಪರ್ಧಿಗಳ ವ್ಯಕ್ತಿತ್ವ ನಿಂದನೆ ಮಾಡುವುದನ್ನು ನಿಲ್ಲಿಸಿಲ್ಲ. ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿರುವ ಕಾರಣ ನಿಮ್ಮನ್ನು ಮನೆಯಿಂದ ಹೊರಕಳುಹಿಸಲಾಗುತ್ತಿದೆ” ಎಂದು ಆದೇಶಿಸಿ ರೆಡ್ ಕಾರ್ಡ್ ನೀಡಿದರು. ಇವರ ನಿರ್ಗಮನದ ಬೆನ್ನಲ್ಲೇ ಸಹಸ್ಪರ್ಧಿ ಯಶಸ್‌ ಕೃಷ್ಣ ಸಿಹಿ ತಿಂದು ಸಂಭ್ರಮಿಸಿದ್ದು ವಿಶೇಷವಾಗಿತ್ತು.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ದೊಡ್ಡ ತಪ್ಪು ಮಾಡಿಕೊಂಡುಬಿಟ್ಟೆ ಸರ್‌..

ಮನೆಯಿಂದ ನೇರವಾಗಿ ‘ಸೂಪರ್ ಸಂಡೆ ವಿತ್ ಬಾದ್‌ಷಾ’ ವೇದಿಕೆಗೆ ಆಗಮಿಸಿದ ಮಂಜುನಾಥ್, ನಿರೂಪಕ ಕಿಚ್ಚ ಸುದೀಪ್ ಎದುರು “ತಪ್ಪಾಯ್ತು ಸರ್, ದೊಡ್ಡ ತಪ್ಪು ಮಾಡಿಕೊಂಡುಬಿಟ್ಟೆ” ಎಂದು ಕಣ್ಣೀರು ಹಾಕಿದರು. ಈ ವೇಳೆ ಮಂಜನ ಹೆಗಲ ಮೇಲೆ ಕೈಹಾಕಿ ಸಮಾಧಾನಪಡಿಸಿದ ಸುದೀಪ್, “ತಪ್ಪಾಗಿದೆ, ತಿದ್ದಿಕೊಳ್ಳಿ. ನಿಮ್ಮಲ್ಲಿ ಒಳ್ಳೆಯ ಪ್ರತಿಭೆಯಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಈ ಬಿಗ್ ಬಾಸ್ ವೇದಿಕೆ ನಿಮಗೆ ಎಷ್ಟು ವರ್ಷಗಳ ಕನಸಾಗಿತ್ತು?” ಎಂದು ಪ್ರಶ್ನಿಸಿದರು. ಇದಕ್ಕೆ ಭಾವುಕರಾಗಿ, "ಇದು ನನ್ನ 10 ವರ್ಷಗಳ ಕನಸು ಸರ್” ಎಂದು ಮಂಜ ಉತ್ತರಿಸಿದಾಗ, "10 ವರ್ಷಗಳ ಕನಸಾಗಿದ್ದರೂ ಇದನ್ನು ಹೀಗೆ ಹಾಳು ಮಾಡಿಕೊಳ್ಳಬೇಕಿತ್ತಾ? ನಾನೇ ನಿಮ್ಮನ್ನು ತಿದ್ದಲು ಎಷ್ಟು ಪ್ರಯತ್ನಪಟ್ಟೆ ಹೇಳಿ...?" ಎಂದು ಸುದೀಪ್ ಮರುಪ್ರಶ್ನಿಸಿದರು.

ಅತ್ತು ಅತ್ತು ನನ್ ಬಟ್ಟೆ ಹಾಳು ಮಾಡಬೇಡಿ

“ನನಗೆ ಸಾಕಷ್ಟು ಅವಕಾಶ ಕೊಟ್ಟಿದ್ದೀರಿ ಸರ್. ನಾನು ಜೀವನದಲ್ಲಿ ನಗು ಮತ್ತು ಅಳು ಎರಡನ್ನೇ ಹೆಚ್ಚು ನಂಬುತ್ತೇನೆ. ನಿನ್ನೆ ನಿಮ್ಮ ಕಣ್ಣಲ್ಲೂ ನೀರು ನೋಡಿದೆ, ಅದಕ್ಕೆ ನಾನೇ ಕಾರಣವಾಗಿದ್ದಕ್ಕೆ ತುಂಬಾ ಬೇಸರವಾಗುತ್ತಿದೆ. ನಿಮ್ಮನ್ನು ನೋಡುವುದೇ ನನ್ನ ಕನಸಾಗಿತ್ತು, ಆದರೆ ನನ್ನಿಂದಾಗಿ ನಿಮ್ಮ ಕಣ್ಣಲ್ಲೇ ನೀರು ಬಂತಲ್ಲ” ಎಂದು ಮಂಜ ಪಶ್ಚಾತ್ತಾಪಪಟ್ಟರು. ಈ ವೇಳೆ ಸುದೀಪ್ ಅವರನ್ನು ತಬ್ಬಿ ಸಾಂತ್ವನ ಹೇಳುತ್ತಾ, “ಅತ್ತು ಅತ್ತು ನನ್ ಬಟ್ಟೆ ಹಾಳು ಮಾಡಬೇಡಿ” ಎಂದು ತಮಾಷೆ ಮಾಡುತ್ತಲೇ ಮಂಜನಿಗೆ ಸಮಾಧಾನ ಮಾಡಿದರು.