ʻಕಿಚ್ಚʼ ಸುದೀಪ್ ಸಾರಥ್ಯದಲ್ಲಿ ‘ಬಿಗ್ ಬಾಸ್ ಕನ್ನಡ 13’ ಆರಂಭ; ಈ ಸಲದ ದೊಡ್ಮನೆಯ ವಿನ್ಯಾಸ ಹೇಗಿದೆ? ಏನೇನ್ ಸ್ಪೆಷಾಲಿಟಿ ಇದೆ?
Bigg Boss Kannada 13: ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ 13 ಅದ್ಧೂರಿಯಾಗಿ ಚಾಲನೆ ಪಡೆದಿದೆ. ಈ ಬಾರಿ ಇಡೀ ಮನೆಯನ್ನು ಜಾಗತಿಕ ಪ್ರವಾಸಿ ತಾಣಗಳು ಮತ್ತು ಏವಿಯೇಷನ್ ಶೈಲಿಯಲ್ಲಿ ವಿನೂತನವಾಗಿ ಸಿಂಗರಿಸಲಾಗಿದೆ. ವಿಮಾನದ ಕಾಕ್‌ಪಿಟ್ ಪ್ರವೇಶದ್ವಾರ, ಕನ್ನಡದ ಸೊಗಡಿನ ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮಾದರಿಯ ಜೈಲು ಇನ್ನಿತರ ಸ್ಪೆಷಾಲಿಟಿಗಳು ಮನೆಯೊಳಗೆ ಇವೆ.
-
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13, ʻಕಿಚ್ಚʼ ಸುದೀಪ್ ಅವರ ಸಾರಥ್ಯದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರತಿ ಬಾರಿಯಂತೆ ಈ ಸಲವೂ ಬಿಗ್ ಬಾಸ್ ಮನೆ ಪ್ರೇಕ್ಷಕರನ್ನು ಹಾಗೂ ಸ್ಪರ್ಧಿಗಳನ್ನು ಬೆರಗುಗೊಳಿಸುವಂತೆ ಸಿದ್ಧಗೊಂಡಿದ್ದು, ಸಂಪೂರ್ಣವಾಗಿ ಏವಿಯೇಷನ್ ಹಾಗೂ ಜಗತ್ಪ್ರಸಿದ್ಧ ಪ್ರವಾಸಿ ತಾಣಗಳ ಥೀಮ್‌ನಲ್ಲಿ ಮೂಡಿಬಂದಿದೆ.
ಮನೆಯೊಳಗೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳಿಗೆ ಇಡೀ ವಿಶ್ವವನ್ನು ಪರ್ಯಟನೆ ಮಾಡಿದ ಅನುಭವ ನೀಡುವ ರೀತಿಯಲ್ಲಿ ಪ್ರತಿಯೊಂದು ಮೂಲೆಯನ್ನೂ ಅತಿ ಸೂಕ್ಷ್ಮವಾಗಿ, ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.
ಮುಖ್ಯದ್ವಾರದಲ್ಲಿ ವಿಮಾನದ ಕಾಕ್‌ಪಿಟ್
ಕಳೆದ ಬಾರಿಯ ಮೈಸೂರು ಅರಮನೆಯ ವಿನ್ಯಾಸದ ಬದಲು ಈ ಬಾರಿ ಪ್ರವೇಶ ದ್ವಾರಕ್ಕೆ ‘ನ್ಯೂಯಾರ್ಕ್ ಸಿಟಿ’ಯ ಅತ್ಯಾಧುನಿಕ ರೂಪ ನೀಡಲಾಗಿದೆ. ಮುಖ್ಯದ್ವಾರದ ಮೇಲ್ಭಾಗದಲ್ಲೇ ವಿಮಾನದ ಕಾಕ್‌ಪಿಟ್ ರೂಪಿಸಲಾಗಿದ್ದು, ಅಲ್ಲಿಂದ ಒಳಗೆ ಇಳಿದುಬರಲು ಮೆಟ್ಟಿಲುಗಳನ್ನು ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ. ಇದರ ಜೊತೆಗೆ, ಸ್ಪರ್ಧಿಗಳ ಆರೋಗ್ಯ ರಕ್ಷಣೆ ಮತ್ತು ತುರ್ತು ಚಿಕಿತ್ಸೆಗಾಗಿ 24 ಗಂಟೆಯೂ ಕಾರ್ಯನಿರ್ವಹಿಸುವ ವೈದ್ಯಕೀಯ ತಂಡದೊಂದಿಗೆ ಸುಸಜ್ಜಿತ ‘ಪ್ರಥಮ ಚಿಕಿತ್ಸಾ ಕೇಂದ್ರ’ವನ್ನು ಪ್ರವೇಶ ದ್ವಾರದ ಬಳಿಯೇ ಸ್ಥಾಪಿಸಲಾಗಿದೆ. ಇನ್ನು ಇಡೀ ಮನೆಯ ಸಂಚಾರಕ್ಕೆ ಸಾಂಕೇತಿಕವಾಗಿ ದಾರಿ ತೋರಲು ಒಳಗೊಂದು ದೊಡ್ಡ ದಿಕ್ಸೂಚಿಯನ್ನು ಅಳವಡಿಸಲಾಗಿದೆ.
ಸ್ಟ್ಯಾಚ್ಯೂ ಆಫ್ ಲಿಬರ್ಟಿಗೆ ಕನ್ನಡದ ಸೊಗಡು
ಮನೆಯ ಲಿವಿಂಗ್ ಏರಿಯಾವು ಜಾಗತಿಕ ಸಂಸ್ಕೃತಿಗಳ ಅದ್ಭುತ ಸಂಗಮದಂತಿದೆ. ಇಲ್ಲಿನ ಬೃಹತ್ ಟಿವಿ ಸುತ್ತ ಲಂಡನ್ ಬ್ರಿಡ್ಜ್ ಹಾಗೂ ಬಿಗ್ ಬೆನ್ ಗೋಪುರದ ಮಾದರಿಗಳಿದ್ದರೆ, ಕಳೆದ ಬಾರಿಯ ಹಂಪಿ ರಥದ ಜಾಗದಲ್ಲಿ ರೋಮ್‌ನ ಐತಿಹಾಸಿಕ ‘ಕೊಲೋಸಿಯಮ್’ ತಲೆಎತ್ತಿದೆ.
ವಿಶೇಷವಾಗಿ, ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಪ್ರತಿಮೆಗೆ ಕನ್ನಡದ ಸೊಗಡು ನೀಡಲಾಗಿದ್ದು, ಮೂಗುತಿ, ಹಣೆಗೆ ಬೊಟ್ಟು ಇರಿಸಿ, ಕೈಯಲ್ಲಿ ‘ಕಿಚ್ಚನ ಚಪ್ಪಾಳೆ’ ಫ್ರೇಮ್ ನೀಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇದರ ಪಕ್ಕದಲ್ಲೇ ಜಪಾನಿ ಶೈಲಿಯ ವಾಸ್ತುಶಿಲ್ಪ, ಡ್ರ್ಯಾಗನ್ ಕಲಾಕೃತಿಗಳು ಹಾಗೂ ಸಾಧಕರ ನೆನಪಿನ ‘ವಾಲ್ ಆಫ್ ಫೇಮ್’ ಅನ್ನು ರೂಪಿಸಲಾಗಿದೆ.
ಈ ಬಾರಿಯ ಬಿಗ್ ಬಾಸ್ ಮನೆ ಹೇಗಿದೆ ನೋಡಿ!
ಏಕಾಂತ ಕಳೆಯಲು ಪ್ರತ್ಯೇಕ ಜಾಗ
ಮನೆಯ ಉಳಿದ ವಿಭಾಗಗಳೂ ಕೂಡ ಒಂದಕ್ಕಿಂತ ಒಂದು ಭಿನ್ನವಾದ ಥೀಮ್‌ಗಳನ್ನು ಹೊಂದಿವೆ. ಸವಾಲಿನ ಟಾಸ್ಕ್‌ಗಳನ್ನು ಗೆದ್ದು ಬರುವ ಮನೆ ಒಡೆಯನಿಗಾಗಿ ಕ್ಯಾಪ್ಟನ್ ಕೊಠಡಿಯನ್ನು ಗ್ಲಾಡಿಯೇಟರ್ ಶೈಲಿಯಲ್ಲಿ ರಾಜಗಾಂಭೀರ್ಯದಿಂದ ರೂಪಿಸಲಾಗಿದೆ. ಕಳಪೆ ಪಟ್ಟ ಪಡೆದು ಜೈಲು ಶಿಕ್ಷೆ ಪಡೆಯುವ ಸ್ಪರ್ಧಿಗಳಿಗಾಗಿ, ಜೈಲನ್ನು ‘ಐಫೆಲ್ ಟವರ್’ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಟವರ್‌ನ ಕಂಬಿಗಳನ್ನೇ ಜೈಲಿನ ಸರಳುಗಳಾಗಿ ಮಾರ್ಪಡಿಸಲಾಗಿದೆ.
ಲವಲವಿಕೆಯ ಸರ್ಕಸ್ ಶೈಲಿಯ ಅಡುಗೆ ಮನೆ, ರೋಮ್ ಸಂಸ್ಕೃತಿಯ ಪೌಡರ್ ರೂಮ್ ಹಾಗೂ ಫೇರೋ ಕಲಾಕೃತಿಗಳುಳ್ಳ ಈಜಿಪ್ಟ್ ಶೈಲಿಯ ಬೆಡ್‌ರೂಮ್ ಈ ಬಾರಿಯ ಬಿಗ್ ಬಾಸ್ ಮನೆಯ ಅಂದವನ್ನು ಹೆಚ್ಚಿಸಿವೆ. ಅಲ್ಲದೆ, ಸ್ಪರ್ಧಿಗಳು ಏಕಾಂತ ಕಳೆಯಲು ಪ್ರತ್ಯೇಕ ಕ್ಲೋಸ್ಡ್ ಸ್ಪೇಸ್ ಅನ್ನು ಸಹ ಕಲ್ಪಿಸಲಾಗಿದೆ.