‘ಕಿಚ್ಚ’ ಸುದೀಪ್ ಸಾರಥ್ಯದ ಬಿಗ್ ಬಾಸ್ ಕನ್ನಡ ಸೀಸನ್ 13 ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ಸೂಚನೆ ಸಿಕ್ಕಿತ್ತು. ಕಾರಣ, ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 13ರ ಪ್ರೋಮೋ ಬಿಡುಗಡೆಯಾಗಿತ್ತು. ಹಾಗಾಗಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಆದರೆ, ಖಚಿತವಾಗಿ ಯಾವ ದಿನಾಂಕದಂದು ಬಿಗ್ ಬಾಸ್ ಆರಂಭವಾಗಲಿದೆ ಎಂಬುದು ಗೊತ್ತಾಗಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 13 ಅನ್ನು ಸೆಪ್ಟೆಂಬರ್ 6ರಿಂದ ಪ್ರಾರಂಭಿಸುವ ಸಾಧ್ಯತೆ ದಟ್ಟವಾಗಿದೆ.
ಅಷ್ಟಕ್ಕೂ ಈ ದಿನಾಂಕದಂದೇ ಕನ್ನಡ ಬಿಗ್ ಬಾಸ್ ಶುರುವಾಗಲಿದೆಯೇ? ಹೌದು ಎನ್ನುತ್ತವೆ ಮೂಲಗಳು. ಅಲ್ಲದೆ, ಈ ದಿನಾಂಕಕ್ಕೆ ಪುಷ್ಟಿ ನೀಡುವಂತೆ ಹಿಂದಿ ಬಿಗ್ ಬಾಸ್ 20 ಶೋವನ್ನು ಸೆ.6ರಿಂದ ಆರಂಭ ಮಾಡಲಾಗುವುದು ಎಂದು ಹೊಸ ಪ್ರೋಮೋ ತಿಳಿಸಿದೆ. ಹಾಗಾಗಿ, ಅದೇ ದಿನ ಕನ್ನಡ ಬಿಗ್ ಬಾಸ್ ಕೂಡ ಆರಂಭವಾಗಲಿದೆ ಎಂಬ ಮಾತು ಕೇಳಿಬಂದಿದೆ.
ಆರು ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ
ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳ ‘ಬಿಗ್ ಬಾಸ್’ ಆವೃತ್ತಿಗಳು ಸೆಪ್ಟೆಂಬರ್ ತಿಂಗಳಿನಿಂದ ಏಕಕಾಲದಲ್ಲಿ ಪ್ರಸಾರವಾಗಲಿವೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಭಾಷೆಯ ‘ಬಿಗ್ ಬಾಸ್’ ಹೊಸ ಸೀಸನ್‌ಗಳು ಸೆಪ್ಟೆಂಬರ್‌ನಲ್ಲಿಯೇ ಜಿಯೋಸ್ಟಾರ್ ಟೆಲಿವಿಷನ್ ನೆಟ್‌ವರ್ಕ್ ಹಾಗೂ ಜಿಯೋ ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲಕ್ಕೆ ಲೈವ್ ಬರಲಿವೆ ಎಂಬ ಅಧಿಕೃತ ಮಾಹಿತಿಯನ್ನು ಬಿಗ್ ಬಾಸ್ ನೀಡಿತ್ತು.
ಸೆ.6ರಿಂದ ಏಕಕಾಲಕ್ಕೆ ಶುರು?
ಇದೀಗ ಬಿಗ್ ಬಾಸ್ ಹಿಂದಿ 20 ಶೋ ಸೆ.6ರಿಂದ ಬರಲಿದೆ ಎಂದರೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಆವೃತ್ತಿಯ ಬಿಗ್ ಬಾಸ್ ಸಂಚಿಕೆಗಳು ಕೂಡ ಸೆ.6ರಿಂದಲೇ ಶುರುವಾಗಬಹುದು ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.
Bigg Boss Kannada 13: ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ ಗಿಲ್ಲಿ, ಸಂಗೀತಾ? ಏನಿದು ಹೊಸ ಟ್ವಿಸ್ಟ್?
ಕನ್ನಡ ಬಿಗ್ ಬಾಸ್‌ನಲ್ಲಿ ಅಗ್ನಿಪರೀಕ್ಷೆ
‘ಬಿಗ್ ಬಾಸ್’ ಕನ್ನಡದ ಪ್ರತಿ ಸೀಸನ್‌ನಲ್ಲೂ ಹೊಸತನ ತರುವ ‘ಕಲರ್ಸ್ ಕನ್ನಡ’ ತಂಡ, ಈ ಬಾರಿ ‘ಅಗ್ನಿಪರೀಕ್ಷೆ’ ಎಂಬ ವಿಶಿಷ್ಟ ಕಾನ್ಸೆಪ್ಟ್ ಅನ್ನು ಪರಿಚಯಿಸುತ್ತಿದೆ. ಈ ಮೊದಲು ಆಯ್ಕೆಯಾದ ಸ್ಪರ್ಧಿಗಳಿಗೆ ನೇರ ಪ್ರವೇಶ ಸಿಗುತ್ತಿತ್ತು, ವೇದಿಕೆಯ ಮೇಲೆ ವೀಕ್ಷಕರ ವೋಟಿಂಗ್ ಮೂಲಕವೂ ನಿರ್ಧರಿಸಲಾಗುತ್ತಿತ್ತು. ಆದರೆ, ಈ ಬಾರಿ ‘ಬಿಗ್ ಬಾಸ್’ ಮನೆ ಪ್ರವೇಶಿಸಲು ಬಯಸುವ ಸ್ಪರ್ಧಿಗಳು, ವಿಶೇಷವಾಗಿ ಜನಸಾಮಾನ್ಯ ಸ್ಪರ್ಧಿಗಳು, ಈ ಕಠಿಣ ‘ಅಗ್ನಿಪರೀಕ್ಷೆ’ಯನ್ನು ಎದುರಿಸಿ ಗೆದ್ದು ಬರಬೇಕಾಗಿದೆ. ಹೀಗಾಗಿ ಈ ವಿಶೇಷ ಸೆಟ್‌ನಲ್ಲಿ ಸ್ಪರ್ಧಿಗಳಿಗೆ ಎಂತಹ ಸವಾಲುಗಳು ಎದುರಾಗಲಿವೆ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ, ಭಾರಿ ವಿಭಿನ್ನವಾಗಿ ಮೂಡಿಬರುವ ಸಾಧ್ಯತೆ ಇದೆ.