ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ಸುದೀಪ್‌ ವೃತ್ತಿ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಇದೇ ದಿನ! ಜುಲೈ 6ರಂದು ಕಿಚ್ಚನ ಜೀವನದಲ್ಲಿ ಆಗಿದ್ದೇನು?

ʻಅಭಿನಯ ಚಕ್ರವರ್ತಿʼ ನಟ ಸುದೀಪ್ ಅವರ ವೃತ್ತಿಬದುಕಿನಲ್ಲಿ ಜುಲೈ 6 ಅತ್ಯಂತ ಮರೆಯಲಾಗದ ದಿನವಾಗಿದೆ. ಅವರಿಗೆ 'ಕಿಚ್ಚ' ಎಂಬ ಶಾಶ್ವತ ಬಿರುದು ತಂದುಕೊಟ್ಟ 'ಹುಚ್ಚ' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಭರ್ತಿ 25 ವರ್ಷ ತುಂಬಿದ್ದರೆ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದ 'ಈಗ' ಚಿತ್ರಕ್ಕೆ 14 ವರ್ಷ ಪೂರೈಸಿದೆ.

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ, 'ಕಿಚ್ಚ' ಸುದೀಪ್ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 2ರಂದು ಎಂಬುದು ಅವರ ಕೋಟ್ಯಂತರ ಅಭಿಮಾನಿಗಳಿಗೆ ಗೊತ್ತು. ಹಾಗಾಗಿ, ಆ ದಿನ ಸದಾ ಅವರಿಗೆ ವಿಶೇಷ. ಆದರೆ, ಸುದೀಪ್ ಅವರಿಗೆ ಜುಲೈ 6 ಕೂಡ ಅತ್ಯಂತ ವಿಶೇಷ ಹಾಗೂ ಮರೆಯಲಾಗದ ದಿನ ಎಂಬುದು ನಿಮಗೆ ಗೊತ್ತಾ? ಹೌದು, ಜುಲೈ 6ರ ದಿನದಂದು ಸುದೀಪ್‌ ಸಿನಿಮಾ ಬದುಕಿನ ದಿಕ್ಕೇ ಬದಲಾಯಿತು, ಅವರಿಗೆ ಸ್ಟಾರ್ ಪಟ್ಟ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಗ್ಗಳಿಕೆ ತಂದುಕೊಟ್ಟ ಅವರ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳು ಇದೇ ಜುಲೈ 6ರಂದು ಬಿಡುಗಡೆಯಾಗಿದ್ದವು ಎಂಬುದು ವಿಶೇಷ.

‘ಕಿಚ್ಚ’ನಿಗೆ ಮಾಸ್ ಇಮೇಜ್ ನೀಡಿದ 'ಹುಚ್ಚ'

2000ನೇ ಇಸವಿಯಲ್ಲಿ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರದ ಮೂಲಕ ಸುದೀಪ್ ಪೂರ್ಣ ಪ್ರಮಾಣದ ನಾಯಕನಾಗಿ ಗಮನಸೆಳೆದಿದ್ದರು. ಆದರೆ, ಅವರಿಗೆ 'ಮಾಸ್ ಇಮೇಜ್' ತಂದುಕೊಟ್ಟಿದ್ದು ಮಾತ್ರ 2001ರ ಜುಲೈ 6ರಂದು ತೆರೆಕಂಡ 'ಹುಚ್ಚ' ಸಿನಿಮಾ. ಈ ಸಿನಿಮಾ (ಜುಲೈ 6, 2001) ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 25 ವರ್ಷಗಳು ಪೂರೈಸಿವೆ.

Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್

ತಮಿಳಿನ 'ಸೇತು' ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಕೆ. ಮುಸ್ತಾಫಾ ಹಾಗೂ ಮೆಹರುನ್ನೀಸಾ ರೆಹಮಾನ್ ಬಂಡವಾಳ ಹೂಡಿದ್ದರು. ಚಿತ್ರದಲ್ಲಿ ಆ್ಯಂಗ್ರಿ ಯಂಗ್‌ಮ್ಯಾನ್ ಹಾಗೂ ಮಾನಸಿಕ ಅಸ್ವಸ್ಥನಾಗಿ ಎರಡು ಭಿನ್ನ ಶೇಡ್‌ಗಳಲ್ಲಿ ಸುದೀಪ್ ನೀಡಿದ ಅದ್ಭುತ ನಟನೆ ಅವರಿಗೆ ಮೊದಲ ಬಾರಿಗೆ 'ಫಿಲ್ಮ್‌ಫೇರ್ ಪ್ರಶಸ್ತಿ' ತಂದುಕೊಟ್ಟಿತ್ತಲ್ಲದೆ, ಅವರ ಹೆಸರಿನ ಮುಂದೆ 'ಕಿಚ್ಚ' ಎಂಬ ಬಿರುದು ಶಾಶ್ವತವಾಗಿ ಉಳಿಯುವಂತೆ ಮಾಡಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದ 'ಈಗ'

ಸುದೀಪ್ ಅವರಿಗೆ ಪರಭಾಷೆಯಲ್ಲಿ ಕೀರ್ತಿ ತಂದುಕೊಟ್ಟಿದ್ದು ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ 2012ರ ಜುಲೈ 6ರಂದು ಬಿಡುಗಡೆಯಾಗಿತ್ತು. ಈ ಚಿತ್ರ ತೆರೆಕಂಡು ಇಂದಿಗೆ ಭರ್ತಿ 14 ವರ್ಷಗಳು ಸಂದಿವೆ.‌

ಹೊಸಬರ ಕಥೆಗಳಿಗೆ ವೇದಿಕೆ ಕಲ್ಪಿಸಿದ ಪ್ರಿಯಾ ಸುದೀಪ್‌: 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಮೂಲಕ ಪ್ರತಿಭೆಗಳಿಗೆ ಬಂಪರ್ ಆಫರ್!

ಈ ಚಿತ್ರದಲ್ಲಿ ನೋಣ ಮತ್ತು ಸುದೀಪ್ ನಡುವಿನ ಜುಗಲ್‌ಬಂಧಿ ಹಾಗೂ ಸುದೀಪ್ ಅವರ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದರು. ಅವರ ಅತ್ಯದ್ಭುತ ನಟನೆಗಾಗಿ ಫಿಲ್ಮ್‌ಫೇರ್, ಸೈಮಾ, ಸಿನಿಮಾ ಅವಾರ್ಡ್ ಹಾಗೂ ಪ್ರತಿಷ್ಠಿತ 'ನಂದಿ ಪ್ರಶಸ್ತಿ' ಸೇರಿದಂತೆ ಹತ್ತಾರು ಪ್ರಶಸ್ತಿಗಳು ಒಲಿದುಬಂದಿದ್ದವು.

ಸುದೀಪ್‌ ಅವರ ಟ್ವೀಟ್



ಕೃತಜ್ಞತೆ ಸಲ್ಲಿಸಿದ ಕಿಚ್ಚ ಸುದೀಪ್

ತಮ್ಮ ವೃತ್ತಿಜೀವನದ ಈ ಎರಡು ಮಹತ್ವದ ಸಿನಿಮಾಗಳು ಒಂದೇ ದಿನಾಂಕದಂದು (ಜುಲೈ 6) ಮೈಲಿಗಲ್ಲು ತಲುಪಿರುವುದಕ್ಕೆ ನಟ ಸುದೀಪ್ ಭಾವುಕರಾಗಿದ್ದಾರೆ. "ನನ್ನ ಬದುಕಿಗೆ ಈ ಎರಡು ಮರೆಯಲಾಗದ ರತ್ನಗಳನ್ನು ಉಡುಗೊರೆಯಾಗಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇವು ನನ್ನ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆ" ಎಂದು ಸುದೀಪ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.