ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವೇದಿಕೆಯಲ್ಲೇ ನಟ ಕಿಚ್ಚ ಸುದೀಪ್ ಅವರು ವಿನ್ನರ್ ಗಿಲ್ಲಿ ನಟನಿಗೆ 10 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದರು. ಇದೀಗ ಫಿನಾಲೆ ಮುಗಿದ 2-3 ದಿನಗಳಲ್ಲೇ ಆ ಹಣವನ್ನು ಗಿಲ್ಲಿ ನಟನ ಕೈಗೆ ತಲುಪಿಸಿದ್ದಾರೆ. ಗಿಲ್ಲಿಯನ್ನು ತಮ್ಮ ಮನೆಗೆ ಆಹ್ವಾನಿಸಿ, ಈ ಬಹುಮಾನದ ಹಣವನ್ನು ನೀಡಿದ್ದಾರೆ ನಟ ಕಿಚ್ಚ ಸುದೀಪ್. ಈ ಬಗ್ಗೆ ಗಿಲ್ಲಿ ನಟ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗೆಲುವನ್ನು ತಲೆಗೆ ತೆಗೆದುಕೊಳ್ಳಬೇಡಿ
"ಸುದೀಪಣ್ಣ ಮನೆಗೆ ಕರೆಸಿ ದುಡ್ಡು ಕೊಟ್ರು. ಅವತ್ತು ಫಿನಾಲೆ ದಿನ ಸ್ಟೇಜ್ ಮೇಲೆ ನಾನು ರಕ್ಷಿತಾ ಒಂದು ಕಡೆ ನಿಂತಿದ್ವಿ. ಆಗ ಸುದೀಪಣ್ಣ ಬಂದು ಮಾತನಾಡಿದ್ದರು. ʻನಿಮ್ಮಿಬ್ರಲ್ಲಿ ಯಾರು ಬೇಕಾದರೂ ಗೆಲ್ಲಬಹುದು. ಆದರೆ ಗೆದ್ದಮೇಲೆ ಅದನ್ನು ತಲೆಗೆ ತೆಗೆದುಕೊಳ್ಳಬೇಡಿ. ತಗ್ಗಿಬಗ್ಗಿ ನಡೆಯಿರಿ. ಮುಂದೆ ಸವಾಲುಗಳು ಬರ್ತಾವೆ. ಒಂದೊಂದು ಹೆಜ್ಜೆ ಇಡುವಾಗಲು ನೋಡ್ಕೊಂಡು ಹೆಜ್ಜೆ ಇಡಿʼ ಎಂದು ಹೇಳಿದ್ದರು. ಅದು ಅವರ ಅನುಭವದ ಮಾತುಗಳು" ಎಂದು ಗಿಲ್ಲಿ ನಟ ಹೇಳಿದ್ದಾರೆ.
ತಂದೆಯ ಸ್ಥಾನದಲ್ಲಿ ನಿಂತು ಬುದ್ದಿಮಾತು ಹೇಳಿದರು
"ನಾವು ಸುದೀಪಣ್ಣನ ಮನೆಗೆ ಹೋದಾಗಲೂ ಕೂಡ, ʻನೋಡಿಕೊಂಡು ಹೆಜ್ಜೆ ಇಡ್ರಿ, ಯಾವುದನ್ನೂ ತಲೆಗೆ ತೆಗೆದುಕೊಳ್ಳಬೇಡಿ ಗಿಲ್ಲಿ, ಎಲ್ಲವನ್ನೂ ಬ್ಯಾಲೆನ್ಸ್ ಮಾಡಿʼ ಎಂದಿದ್ದರು. ಅದೇ ನಮಗೆ ಒಬ್ಬ ತಂದೆ ಯಾವ ರೀತಿ ಮಾರ್ಗದರ್ಶನ ಮಾಡುತ್ತಾರೋ, ಹಾಗೇ ಸುದೀಪ್ ತಂದೆಯ ಸ್ಥಾನದಲ್ಲಿ ನಿಂತು ಬುದ್ದಿಮಾತು ಹೇಳಿದ್ದಾರೆ" ಎಂದು ಗಿಲ್ಲಿ ನಟ ತಿಳಿಸಿದ್ದಾರೆ.
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಸಂದರ್ಶನ
ಇನ್ನು, ಬಿಗ್ ಬಾಸ್‌ನಿಂದ ಗಿಲ್ಲಿ ನಟನಿಗೆ 50 ಲಕ್ಷ ರೂ. ನಗದು ಬಹುಮಾನ ಬರಬೇಕಿದೆ. ಜೊತೆಗೆ ಕಾರು ಕೂಡ ಸಿಗಬೇಕಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಕೂಡ ಗಿಲ್ಲಿ ನಟನಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.