Movie: ಮಾರ್ಕ್
Release Date: ಡಿಸೆಂಬರ್ 25, 2025
Language: ಕನ್ನಡ
Genre: ಥ್ರಿಲ್ಲರ್, ಡ್ರಾಮಾ, ಆಕ್ಷನ್
Director: ವಿಜಯ್ ಕಾರ್ತಿಕೇಯ
Cast: ಕಿಚ್ಚ ಸುದೀಪ್, ನವೀನ್ ಚಂದ್ರ, ಗುರು ಸೋಮಸುಂದರಂ, ವಿಕ್ರಾಂತ್, ಯೋಗಿ ಬಾಬು, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ದೀಪ್ಶಿಕಾ, ಅಶ್ವಿನ್ ಹಾಸನ್, ಪ್ರತಾಪ್ ನಾರಾಯಣ್, ಗೋಪಾಲ್ ದೇಶಪಾಂಡೆ, ರಘು ರಾಮನಕೊಪ್ಪ
Duration: 144 ನಿಮಿಷ
Rating: 3.5/5
ʻಮ್ಯಾಕ್ಸ್ʼ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಕಳೆದ ವರ್ಷ ಇದೇ ಸಮಯಕ್ಕೆ ತೆರೆಕಂಡಿದ್ದ ಮ್ಯಾಕ್ಸ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇದೀಗ ಅದೇ ಜೋಡಿಯ ʻಮಾರ್ಕ್ʼ ಇಂದು (ಡಿ.25) ತೆರೆಕಂಡಿದೆ. ಹಾಗಾದರೆ, ಈ ಸಿನಿಮಾ ಸಿನಿಪ್ರಿಯರ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿದೆಯಾ? ಈ ವಿಮರ್ಶೆ ಓದಿ.
ಆತ ಒಬ್ಬ ಸಸ್ಪೆಂಡ್ ಆಗಿರುವ ಎಸಿಪಿ, ಆತನ ಹೆಸರು ಅಜಯ್ ಮಾರ್ಕಂಡೇಯಾ (ಸುದೀಪ್) Aka ಮಾರ್ಕ್. ಆತನ ಮುಖ ನೋಡಿಲ್ಲದವರು ಕೂಡ ಬರೀ ಹೆಸರು ಕೇಳಿದರೆ ನಡುಗುತ್ತಾರೆ. ಮಾರ್ಕ್‌ನ ಇತಿಹಾಸವನ್ನು ಪಟಪಟನೇ ಹೇಳುತ್ತಾರೆ. ಸಿಎಂ ಕ್ಯಾಂಡಿಡೇಟ್‌ನಿಂದ ಹಿಡಿದು ಲೋಕಲ್ ಕಳ್ಳನ ತನಕ ಮಾರ್ಕ್ ಹೆಸರು ಕೇಳಿದರೆ ನಡುಗುತ್ತಾರೆ. ಅಂಥದ್ದೊಂದು ಖಡಕ್ ಹಿನ್ನೆಲೆಯುಳ್ಳ ಅಧಿಕಾರಿ ಆತ. ಇಂತಹ ಮಾರ್ಕ್‌ಗೆ ಒಂದೇ ಸಲಕ್ಕೆ ಒಂದು ದೊಡ್ಡ ಸವಾಲು ಎದುರಾಗುತ್ತದೆ. ಒಂದು ಕಡೆ ರಾಜಕೀಯ ಪಿತೂರಿ, ಮತ್ತೊಂದು ಕಡೆ ಡ್ರಗ್ಸ್ ದಂಧೆ, ಜೊತೆಗೆ ಮಕ್ಕಳ ಅಪಹರಣ.. ಇದೆಲ್ಲವನ್ನು ಒಟ್ಟೊಟ್ಟಿಗೆ ನಿಭಾಯಿಸಿಬೇಕಾದ ಅನಿವಾರ್ಯತೆ! ಅದಕ್ಕಿರುವುದು ಬರೀ 36 ಗಂಟೆಗಳ ಸಮಯ! ಅದನ್ನು ಮಾರ್ಕ್ ಹೇಗೆ ಪರಿಹರಿಸುತ್ತಾನೆ? ಎಲ್ಲದಕ್ಕೂ ಹೇಗೆ ಮುಕ್ತಿ ಹಾಡುತ್ತಾನೆ ಅನ್ನೋದೇ ಇಲ್ಲಿನ ಕಥೆ.
ಮ್ಯಾಕ್ಸ್‌ನ ಛಾಯೆ; ಆದರೂ ಇದು ಬೇರೆ ಮಾಯೆ!
ಈ ಕಥೆಯನ್ನು ಕೇಳಿದಾಗ, ಮಾರ್ಕ್ ಸಿನಿಮಾ ಕೂಡ ಮ್ಯಾಕ್ಸ್‌ನಂತೆಯೇ ಇದೆ ಅಲ್ವಾ ಅನ್ನಿಸಬಹುದು. ಆ ರೀತಿ ಫೀಲ್ ನೀಡುವುದಕ್ಕೆ ಸಿನಿಮಾದ ಮೇಕಿಂಗ್ ಕೂಡ ಕಾರಣ. ಎರಡೂ ಚಿತ್ರಗಳಿಗೆ ಕೆಲಸ ಮಾಡಿರುವ ಟೆಕ್ನಿಷಿಯನ್ಸ್ ಟೀಮ್ ಕೂಡ ಒಂದೇ ಆಗಿರುವುದು ಕೂಡ ಕಾರಣವಾಗಿರಬಹುದು. ಮ್ಯಾಕ್ಸ್‌ನಲ್ಲಿ ಇಡೀ ಕಥೆ ಒಂದು ರಾತ್ರಿಯಲ್ಲಿ ನಡೆದರೆ, ಇಲ್ಲಿ ಎರಡು ರಾತ್ರಿ, ಒಂದು ಹಗಲಿನಲ್ಲಿ ನಡೆಯುತ್ತದೆ. ಈ ಅಂಶಗಳೆಲ್ಲಾ ಮಾರ್ಕ್ ಜೊತೆಗೆ ಮ್ಯಾಕ್ಸ್ ಅನ್ನು ಹೋಲಿಕೆ ಮಾಡುವಂತೆ ಪ್ರೇರೇಪಿಸಬಹುದು. ಆದರೆ ಮಾರ್ಕ್ ಸಿನಿಮಾದ ಕಥೆಯೇ ಬೇರೆ. ಮ್ಯಾಕ್ಸ್ ಸಿನಿಮಾದಲ್ಲಿ ಬಹುತೇಕ ಒಂದು ಲೊಕೇಷನ್‌ನಲ್ಲೇ ಕಥೆ ನಡೆದರೆ, ಮಾರ್ಕ್ ಕಥೆ ಹಲವು ಕಡೆ ಅಡ್ಡಾಡುತ್ತದೆ. ಇಲ್ಲಿ ಮಾರ್ಕ್ ಚಕಚಕನೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಾನೆ. ಮಾರ್ಕ್ ಎಷ್ಟು ವೇಗವಾಗಿ ಕೆಲಸ ಮಾಡುತ್ತಾನೋ, ಸಿನಿಮಾ ಕೂಡ ಅಷ್ಟೇ ವೇಗವಾಗಿ ಸಾಗುವುದು ಇದರ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಕೆಲವು ಕಡೆ ಲಾಜಿಕ್ ಮಿಸ್ ಎನಿಸಿದರೂ, ಅದರ ಬಗ್ಗೆ ಯೋಚನೆ ಮಾಡುವುದಕ್ಕೂ ನಿರ್ದೇಶಕ ವಿಜಯ್ ಕಾರ್ತಿಕೇಯ ಆಡಿಯೆನ್ಸ್‌ಗೆ ಟೈಮ್ ಕೊಡುವುದಿಲ್ಲ. ಯಾಕೆಂದರೆ, 2x ಸ್ಪೀಡ್‌ನಲ್ಲಿರುತ್ತದೆ.
Mark Trailer : ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರ್ತಿದೆ ‘ಮಾರ್ಕ್’ ಟ್ರೈಲರ್, ಯಾವಾಗ?
ಮಾಸ್ ಅವತಾರದಲ್ಲಿ ಕಿಚ್ಚ
ಈ ಸಿನಿಮಾದಲ್ಲಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯಾಗಿ ಸುದೀಪ್ ಮಿಂಚಿದ್ದಾರೆ. ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಅವರ ಗತ್ತು, ಗಾಂಭೀರ್ಯತೆ ಪಾತ್ರದ ತೂಕವನ್ನು ಹೆಚ್ಚಿಸಿದೆ. ಅಭಿಮಾನಿಗಳಿಗೆ ಖುಷಿಪಡಿಸಲು ಮಸ್ತ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರ ಸ್ವ್ಯಾಗ್, ಆಟಿಟ್ಯೂಡ್.. ಎಲ್ಲವೂ ಫ್ಯಾನ್ಸ್‌ಗೆ ಇಷ್ಟವಾಗುತ್ತದೆ.
ಸಿನಿಮಾ ನೋಡಲು ಬಂದ ಸುದೀಪ್ ಪತ್ನಿ ಮತ್ತು ಮಗಳು
ಕಲಾವಿದರಿಂದ ತುಂಬಿದ ಮಾರ್ಕ್
ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಅವರು ಹೆಚ್ಚು ಹೈಲೈಟ್ ಆಗಿದ್ದರು. ಬಾಕಿ ಕಲಾವಿದರು ಅಷ್ಟೇನೂ ಗಮನಸೆಳೆದಿರಲಿಲ್ಲ. ಆದರೆ ಇಲ್ಲಿ ಹಾಗಲ್ಲ, ಪರಭಾಷೆಯ ಅನುಭವಿ ಕಲಾವಿದರ ಪಡೆಯೇ ಇಲ್ಲಿದೆ. ನವೀನ್ ಚಂದ್ರ, ವಿಕ್ರಾಂತ್, ಗುರು ಸೋಮಸುಂದರಂ ಖಳರಾಗಿ ಅಬ್ಬರಿಸಿದರೆ, ನವೀನ್ ಚಂದ್ರ ತೆರಮೇಲೆ ಇದ್ದಷ್ಟು ಹೊತ್ತು ಭಯ ಹುಟ್ಟಿಸುತ್ತಾರೆ. ಆದರೆ ಗುರು ಸೋಮಸುಂದರಂ ಪಾತ್ರವನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಇನ್ನು, ನಟ ಯೋಗಿ ಬಾಬು ನಗಿಸುವ ಪ್ರಯತ್ನ ಮಾಡಿದ್ದಾರೆ. ಗೋಪಾಲ್ ಕೃಷ್ಣ ದೇಶಪಾಂಡೆ, ರಘು ರಾಮನಕೊಪ್ಪ ಯಾರೂ ನಿರೀಕ್ಷಿಸಿದ ಟ್ವಿಸ್ಟ್ ಕೊಡುತ್ತಾರೆ. ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಪೊಲೀಸ್ ಅಧಿಕಾರಿಗಳಾಗಿ ಗಮನಸೆಳದರೆ, ರೋಶಿನಿ ಪ್ರಕಾಶ್ ಮತ್ತು ಅರ್ಚನಾ ಸಿಕ್ಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಟಿ ದೀಪ್ಶಿಕಾಗೆ ಖಡಕ್ ರೋಲ್ ಸಿಕ್ಕಿದೆ.
ಟೆಕ್ನಿಕಲಿ ಸಿನಿಮಾ ಹೇಗಿದೆ?
ಈ ಬಾರಿಯು ಛಾಯಾಗ್ರಾಹಕ ಶೇಖರ್ ಚಂದ್ರ ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಜೆ. ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶೇಖರ್ ಚಂದ್ರ ಅವರ ಕ್ಯಾಮೆರಾ ಕಣ್ಣು ಸಖತ್ ಆಗಿಯೇ ಕೆಲಸ ಮಾಡಿದೆ. ಜೊತೆಗೆ ಇಡೀ ಸಿನಿಮಾಕ್ಕೆ ಒಂದು ರಾ ಫೀಲ್ ನೀಡುವುದರಲ್ಲಿ ಶಿವಕುಮಾರ್ ಕಲಾ ನಿರ್ದೇಶನ ಸಹಾಯ ಮಾಡಿದೆ. ಅಜನೀಶ್ ಲೋಕನಾಥ್ ಅವರು ಹಿನ್ನೆಲೆ ಸಂಗೀತದ ಮೂಲಕ ಮತ್ತೊಮ್ಮೆ ಯಶಸ್ಸು ಸಾಧಿಸಿದ್ದಾರೆ. ದಾದಾ ಯಾರ್ ಗೊತ್ತಾ ಮತ್ತು ಮಸ್ತ್ ಮಲೈಕಾ ಹಾಡುಗಳು ಖುಷಿ ಕೊಡುತ್ತವೆ. ಇಡೀ ಸಿನಿಮಾ ಕ್ಲೈಮ್ಯಾಕ್ಸ್ ಹಂತ ತಲುಪುವ ವೇಳೆಗೆ ಎಮೋಷನಲ್ ಡ್ರಾಮಾಗೆ ತಿರುಗಿಕೊಳ್ಳುತ್ತದೆ. ಆದರೆ ಅಲ್ಲಿ ಒಂದಷ್ಟು ಭಾವತೀವ್ರತೆಯ ಕೊರತೆ ಕಾಡುತ್ತದೆ. ಆ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಬಹುದಾಗಿತ್ತು. ಸಂಭಾಷಣೆಯಲ್ಲಿ ಇನ್ನಷ್ಟು ಹರಿತ ಇರಬೇಕಿತ್ತು ಮತ್ತು ಅಭಿಮಾನಿಗಳು ಬಯಸುವ ಪಂಚಿಂಗ್ ಡೈಲಾಗ್‌ಗಳಿಗೆ ಒತ್ತು ನೀಡಬಹುದಾಗಿತ್ತು. ಮ್ಯಾಕ್ಸ್ ಚಿತ್ರದ ಗುಂಗಿನಿಂದ ಹೊರಬಂದು ಮಾರ್ಕ್ ನೋಡಿದಾಗ, ಇದು ಫುಲ್ ಮಾರ್ಕ್ಸ್‌ನ ಎಂಟರ್‌ಟೇನ್‌ಮೆಂಟ್ ನೀಡುವುದು ಖಚಿತ.