Kichcha Sudeepa: ಮುದ್ದು ಮಗುವಿನ ಚಿಕಿತ್ಸೆಗೆ ಸುದೀಪ್ ಸಹಾಯಹಸ್ತ; ನೆರವು ನೀಡಲು ಅಭಿಮಾನಿಗಳಲ್ಲೂ ಮನವಿ
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ವಿಡಿಯೊವೊಂದನ್ನು ಮಾಡಿದ್ದು, ಮಗಿವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಅಬಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 1 ವರ್ಷ 10 ತಿಂಗಳ ಪುಟ್ಟ ಮಗು ಕೀರ್ತನಾ ಚಿಕಿತ್ಸೆಗೆ 16 ಕೋಟಿ ರೂ. ಅಗತ್ಯವಿದ್ದು, ಧನ ಸಹಾಯ ಮಾಡುವಂತೆ ಸುದೀಪ್ ಕೇಳಿಕೊಂಡಿದ್ದಾರೆ.

ಸುದೀಪ್ ಮತ್ತು ಒಳಚಿತ್ರದಲ್ಲಿ ಕೀರ್ತನಾ.

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಸಿನಿಮಾ, ರಿಯಾಲಿಟಿ ಶೋ, ಜಾಹೀರಾತು ಜತೆಗೆ ಸಮಾಜಮುಖಿ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವವರ ನೆರವಿಗೆ ಸುದೀಪ್ ಧಾವಿಸುತ್ತಾರೆ. ಇದೀಗ ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೊ ಮೂಲಕ ಸುದೀಪ್ ಮನವಿ ಮಾಡಿದ್ದಾರೆ. ʼʼಕೀರ್ತನಾ ಎಂಬ ಪುಟ್ಟ ಹೆಣ್ಣು ಮಗುವಿಗೆ ಇರುವ ಅಪರೂಪದ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಅದನ್ನು ಗುಣಪಡಿಸಲು ಕೋಟ್ಯಂತರ ರೂಪಾಯಿ ಅಗತ್ಯವಿದ್ದರಿಂದ ನಾನು ನನ್ನ ಕೈಲಾದ ಸಹಾಯ ಮಾಡಿದ್ದೀನಿ. ನೀವು ನೆರವು ನೀಡಿʼʼ ಎಂದು ಮನವಿ ಮಾಡಿದ್ದಾರೆ.
1 ವರ್ಷ 10 ತಿಂಗಳ ಪುಟ್ಟ ಮಗು ಕೀರ್ತನಾ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ (SMA2) ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬರೋಬ್ಬರಿ 16 ಕೋಟಿ ರೂ. ಅಗತ್ಯವಿದೆ. ಹೀಗಾಗಿ ಕೈಲಾದ ಸಹಾಯ ಮಾಡುವಂತೆ ಸುದೀಪ್ ಕೇಳಿಕೊಂಡಿದ್ದಾರೆ.
ಸುದೀಪ್ ಅವರ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Kiccha Sudeep: ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಅಧಿಕೃತ ವಿದಾಯ; ಈ ಬಾರಿಯ ಫಿನಾಲೆಯೇ ಕೊನೆಯ ನಿರೂಪಣೆ
ಸುದೀಪ್ ಹೇಳಿದ್ದೇನು?
"ಈ ವಿಡಿಯೊ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಿಚ್ಚನ ನಮಸ್ತೆ. ವಿಡಿಯೊ ಮಾಡಲು ಬಹಳ ಮುಖ್ಯವಾದ ಕಾರಣವಿದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಿಶೋರ್ ಹಾಗೂ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಪುಟ್ಟ ಮಗಳು ಇದ್ದಾಳೆ. ಆಕೆಯ ಹೆಸರು ಕೀರ್ತನಾ. ಆ ಮುದ್ದು ಕಂದಮ್ಮನಿಗೆ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ (Spinal muscular atrophy-SMA2) ಎಂಬ ಆರೋಗ್ಯ ಸಮಸ್ಯೆ ಇದೆ. ಇದು ಬಹಳ ಅಪರೂಪದ ಆನುವಂಶಿಕ ಕಾಯಿಲೆ" ಎಂದು ಸುದೀಪ್ ಹೇಳಿದ್ದಾರೆ.
"ಈ ಕಾಯಿಲೆಗೆ ಔಷಧಿ ಇದೆ. ಗುಣ ಆಗುವ ಸಾಧ್ಯತೆಯಿದೆ. ಆದರೆ ಆ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಹಣ ಎಷ್ಟು ಎಂದು ಕೇಳಿದಂತೆ ಮೈ ಜುಮ್ ಎನಿಸುತ್ತದೆ. ಈ ಚಿಕಿತ್ಸೆಗೆ ಬೇಕಾಗಿರುವುದು 16 ಕೋಟಿ ರೂ. ಪೋಷಕರು ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನ ಚಿಕಿತ್ಸೆಗೆ ಹನ ಹೊಂದಿಸಲು ಕೈ ಜೋಡಿಸಿದ್ದಾರೆ. ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದ ಸಹಾಯ ನಾನು ಮಾಡಿದ್ದೀನಿ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ" ಎಂದು ಸುದೀಪ್ ಮನವಿ ಮಾಡಿದ್ದಾರೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸದ್ಯ ಸುದೀಪ್ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸುದೀಪ್ ಬ್ಯುಸಿ
ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಸುದೀಪ್ ಸದ್ಯ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಏಪ್ರಿಲ್‌ನಲ್ಲೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. 2022ರಲ್ಲಿ ತೆರೆಕಂಡ ʼವಿಕ್ರಾಂತ್ ರೋಣʼ ಚಿತ್ರದಲ್ಲಿ ಅನೂಪ್ ಭಂಡಾರಿ ಮತ್ತು ಸುದೀಪ್ ಮೊದಲ ಬಾರಿ ಜತೆಯಾಗಿ ಕೆಲಸ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಕ್ಲಬ್ ಸೇರಿತ್ತು. ಹೀಗಾಗಿ 'ಬಿಲ್ಲ ರಂಗ ಬಾಷ' ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ.