ACP Daya Nayak: ಸಹಾಯಕ ಪೊಲೀಸ್ ಆಯುಕ್ತರಾಗಿ ಬಡ್ತಿ ಪಡೆದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್
ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದವರಾದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಬಡ್ತಿ ನೀಡಲಾಗಿದೆ. ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಹಿರಿಯ ಇನ್ಸ್‌ಪೆಕ್ಟರ್‌ಗಳಾದ ಜೀವನ್ ಖರತ್, ದೀಪಕ್ ದಳವಿ ಮತ್ತು ಪಾಂಡುರಂಗ ಪವಾರ್ ಅವರಿಗೂ ಎಸಿಪಿಯನ್ನಾಗಿ ಮಾಡಲಾಗಿದೆ.


ಮುಂಬೈ: ಎನ್‌ಕೌಂಟರ್ ಸ್ಪೆಷಲಿಸ್ಟ್ (Encounter specialist) ಎಂದೇ ಖ್ಯಾತಿ ಪಡೆದಿರುವ ಮುಂಬೈಯ ಪೊಲೀಸ್ ಅಧಿಕಾರಿ (Mumbai encounter specialist) ದಯಾ ನಾಯಕ್ (Daya Nayak) ಅವರಿಗೆ ಎಸಿಪಿ (Assistant Commissioner of Police)ಯನ್ನಾಗಿ ಭಡ್ತಿ ನೀಡಲಾಗಿದೆ. 1995ರಲ್ಲಿ ಬಾಂಬೆ ಪೊಲೀಸ್ ಇಲಾಖೆಯಲ್ಲಿ ತರಬೇತುದಾರರಾಗಿ ಸಬ್-ಇನ್ಸ್‌ಪೆಕ್ಟರ್ ಹುದ್ದೆಯನ್ನು ಅಲಂಕರಿಸಿದ ಅವರು ತರಬೇತಿ ಬಳಿಕ 1996ರಲ್ಲಿ ಜುಹು ಪೊಲೀಸ್ ಠಾಣೆಗೆ ನಿಯೋಜಿಸಲ್ಪಟ್ಟರು. ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಅಂದರೆ 1996ರ ಡಿಸೆಂಬರ್ 31ರಂದು ರಾತ್ರಿ ದರೋಡೆಕೋರರ ಮೇಲೆ ಗುಂಡು ಹಾರಿಸಿ ಮೊದಲ ಎನ್‌ಕೌಂಟರ್ ಮಾಡಿದ್ದರು. ಈ ಬಳಿಕ ಅವರಿಗೆ ಎನ್‌ಕೌಂಟರ್ ದಯಾ ನಾಯಕ್ ಎನ್ನುವ ಹೆಸರು ಬಂದಿತ್ತು.
ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಮಂಗಳವಾರ ಬಡ್ತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಹಿರಿಯ ಇನ್ಸ್‌ಪೆಕ್ಟರ್‌ಗಳಾದ ಜೀವನ್ ಖರತ್, ದೀಪಕ್ ದಳವಿ ಮತ್ತು ಪಾಂಡುರಂಗ ಪವಾರ್ ಅವರನ್ನು ಸಹ ಎಸಿಪಿಯನ್ನಾಗಿ ಮಾಡಲಾಗಿದೆ.
ದಯಾ ನಾಯಕ್ 1995ರಲ್ಲಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಬಾಂದ್ರಾ ಘಟಕದ ಅಪರಾಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಯಾ ನಾಯಕ್ ಅವರ ಬಗ್ಗೆ ಚಲನಚಿತ್ರವನ್ನು ಕೂಡ ನಿರ್ಮಿಸಲಾಗಿದೆ. 2006ರಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣವನ್ನು ದಾಖಲಿಸಿದ್ದು, ಬಳಿಕ ಅವರಿಗೆ ಕ್ಲೀನ್ ಚಿಟ್ ದೊರೆತಿತ್ತು. ದಯಾ ನಾಯಕ್ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ (ATS) ಕೂಡ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ಅಂಬಾನಿ ನಿವಾಸಕ್ಕೆ ಬಂದಿರುವ ಭದ್ರತಾ ಬೆದರಿಕೆ ಮತ್ತು ಥಾಣೆ ಉದ್ಯಮಿ ಮನ್ಸುಖ್ ಹಿರೇನ್ ಅವರ ಕೊಲೆ ಪ್ರಕರಣವನ್ನು ಕೂಡ ಭೇದಿಸಿದ್ದ ತಂಡದಲ್ಲಿದ್ದರು.
ಇದನ್ನೂ ಓದಿ: Maharani Trophy 2025: 15 ಆಟಗಾರ್ತಿಯರ ಮೈಸೂರು ವಾರಿಯರ್ಸ್ ತಂಡ ಪ್ರಕಟ!
ಕರ್ನಾಟಕ ಮೂಲದವರು
ಮೂಲತಃ ಉಡುಪಿ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದಲ್ಲಿ ಜನಿಸಿದ ದಯಾ ನಾಯಕ್ ತಮ್ಮ ಅಜ್ಜ ನಿರ್ಮಿಸಿದ ಕನ್ನಡ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿವರೆಗೆ ಅಧ್ಯಯನ ಮಾಡಿದರು. ಬಳಿಕ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದ ಅವರು ಕ್ಯಾಂಟೀನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊಟೇಲ್ ವರಾಂಡಾದಲ್ಲೇ ನಿದ್ದೆ ಮಾಡುತ್ತಿದ್ದರು. ಕೆಲಸ ಮಾಡುತ್ತಲೇ ಓದು ಮುಂದುವರಿಸಿ 8 ವರ್ಷಗಳ ಅನಂತರ ಡಿಎನ್ ನಗರದ ಸಿಇಎಸ್ ಕಾಲೇಜಿನಿಂದ ಪದವಿ ಪಡೆದರು. ಬಳಿಕ ಅವರು ಪ್ಲಂಬರ್‌ನೊಂದಿಗೆ ಮೇಲ್ವಿಚಾರಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಅವರ ಮಾಸಿಕ ಸಂಬಳ 3,000 ರೂ. ಅವರು ಪೊಲೀಸ್ ಕೆಲಸ ಪಡೆಯುವವರೆಗೂ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು.