ಬಿಗ್ ಬಾಸ್ ಕನ್ನಡ ಸೀಸನ್ 13ರ ಈ ವಾರದ ವೀಕೆಂಡ್ ಪಂಚಾಯಿತಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ವಾರದ ಟಾಸ್ಕ್ಗಳು ಹಾಗೂ ಸ್ಪರ್ಧಿಗಳ ನಡವಳಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದ ಕಿಚ್ಚ ಸುದೀಪ್, ಈ ಬಾರಿ ಮನೆಯೊಳಗೆ (Jageesh) ನಡೆದ ಪತ್ರದ ಪ್ರಸಂಗವನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದ್ದಾರೆ. ಕುಟುಂಬದವರಿಂದ ಬಂದ ಪತ್ರಗಳು ಸ್ಪರ್ಧಿಗಳನ್ನು ಭಾವುಕರನ್ನಾಗಿಸಿದ್ದರೆ, ಅನಾಮಧೇಯ ಪತ್ರಗಳು (Letter) ಮನೆಯ ವಾತಾವರಣವನ್ನೇ ಬದಲಿಸಿವೆ.
ಅನಾಮಧೇಯ ಪತ್ರದಿಂದ ಮನೆಯೊಳಗೆ ಶುರುವಾದ ಸಂಘರ್ಷ!
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರಿಂದ ಪತ್ರಗಳನ್ನು ಸ್ವೀಕರಿಸುವ ಅವಕಾಶ ಸಿಕ್ಕಿತ್ತು. ಬಹಳ ದಿನಗಳ ನಂತರ ಮನೆಯವರಿಂದ ಬಂದ ಸಂದೇಶಗಳನ್ನು ಓದಿದ ಸ್ಪರ್ಧಿಗಳು ಭಾವುಕರಾಗಿದ್ದರು. ಇದರ ಜೊತೆಗೆ ಮತ್ತೊಂದು ವಿಶೇಷ ಅವಕಾಶವಾಗಿ ಅನಾಮಧೇಯ ಪತ್ರ ಬರೆಯುವ ಅವಕಾಶವನ್ನೂ ನೀಡಲಾಗಿತ್ತು.
ಮನಸ್ಸಿನಲ್ಲಿದ್ದ ಅಸಮಾಧಾನ, ಬೇಸರ ಹಾಗೂ ಹೇಳಲಾಗದ ಮಾತುಗಳನ್ನು ಪತ್ರದ ಮೂಲಕ ವ್ಯಕ್ತಪಡಿಸಲು ಸ್ಪರ್ಧಿಗಳು ಮುಂದಾದರು. ಆದರೆ ಈ ಪ್ರಯತ್ನ ಮನೆಯೊಳಗೆ ಹೊಸ ವಿವಾದಕ್ಕೆ ಕಾರಣವಾಯಿತು. ಅದರಲ್ಲೂ ಜಗದೀಶ್ ಮತ್ತು ಯಶಸ್ ಕೃಷ್ಣ ನಡುವಿನ ಘಟನೆ ಇದೀಗ ವೀಕೆಂಡ್ ಪಂಚಾಯಿತಿಯ ಪ್ರಮುಖ ಚರ್ಚೆಯ ವಿಷಯವಾಗಿದೆ.
ಜಗದೀಶ್ ವರ್ತನೆಗೆ ಸುದೀಪ್ ಏನು ಹೇಳಲಿದ್ದಾರೆ?
ಜಗದೀಶ್ ಅವರಿಗೆ ಬಂದ ಅನಾಮಧೇಯ ಪತ್ರದಲ್ಲಿ ಮನೆಯ ಇತರ ಸದಸ್ಯರ ಬಗ್ಗೆ ಹಿಂದಿನಿಂದ ಮಾತನಾಡುವುದು ಹಾಗೂ ಅವರ ಮನಸ್ಸಿಗೆ ನೋವುಂಟುಮಾಡುವ ವರ್ತನೆಯ ಕುರಿತು ಉಲ್ಲೇಖಿಸಲಾಗಿತ್ತು. ಇದರಿಂದ ಕೋಪಗೊಂಡ ಜಗದೀಶ್ ಪತ್ರವನ್ನು ಹರಿದು ಯಶಸ್ ಕಡೆಗೆ ಎಸೆಯಲು ಮುಂದಾದರು. ಈ ವೇಳೆ ಯಶಸ್ ಕಾಲು ಅಡ್ಡ ಇಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ಇದೇ ಸಂದರ್ಭದಲ್ಲಿ ಸೌಂದರ್ಯ ಶೆಟ್ಟಿ ಅವರು ಜಗದೀಶ್ ಅವರನ್ನು ಉದ್ದೇಶಿಸಿ 'ಫೇಕ್ ಫೇಕ್' ಎಂದು ಕೂಗಿದ್ದು ಕೂಡ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯಲ್ಲಿ ಯಾರು ಎಷ್ಟು ತಪ್ಪು ಮಾಡಿದ್ದಾರೆ ಎಂಬುದನ್ನು ಕಿಚ್ಚ ಸುದೀಪ್ ಪಂಚಾಯಿತಿಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಈ ವಾರದ ಪಂಚಾಯಿತಿಯಲ್ಲಿ ಗಾನವಿ ಗೌಡ ಅವರ ಭಾವುಕ ಕ್ಷಣಗಳೂ ಪ್ರಮುಖವಾಗಲಿವೆ. ಕುಟುಂಬದ ಪತ್ರಕ್ಕಾಗಿ ಅವರು ಕಾಯುತ್ತಿದ್ದ ರೀತಿ ಮತ್ತು ಪತ್ರ ಸಿಕ್ಕಾಗ ವ್ಯಕ್ತಪಡಿಸಿದ ಭಾವನೆಗಳು ವೀಕ್ಷಕರ ಗಮನ ಸೆಳೆದಿವೆ. ಮನೆಯವರ ಬೆಂಬಲದ ವಿಚಾರವೂ ಚರ್ಚೆಯಾಗುವ ನಿರೀಕ್ಷೆಯಿದೆ.
ಇದರ ಜೊತೆಗೆ ಕಿರಣ್ ಶಾಸ್ತ್ರಿ ಅವರ ಮಾತಿನ ಶೈಲಿ ಹಾಗೂ ಕೆಲವು ಸಂದರ್ಭಗಳಲ್ಲಿ ಬಳಸಿದ ಪದಗಳ ಬಗ್ಗೆಯೂ ಸುದೀಪ್ ಪ್ರಶ್ನೆ ಎತ್ತುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ವಾರದ ಪಂಚಾಯಿತಿ ಕೇವಲ ಪತ್ರದ ಜಗಳಕ್ಕೆ ಸೀಮಿತವಾಗದೆ, ಸ್ಪರ್ಧಿಗಳ ವರ್ತನೆಯ ಬಗ್ಗೆಯೂ ಕಠಿಣ ಚರ್ಚೆಗೆ ವೇದಿಕೆಯಾಗಲಿದೆ.
ಜಗದೀಶ್ ನೀಡಿದ ರ್ಯಾಂಕಿಂಗ್ಗೆ ಕಿಚ್ಚನ ವ್ಯಂಗ್ಯ!
ಕ್ಯಾಪ್ಟನ್ ಆಗಿದ್ದ ಜಗದೀಶ್ ಸ್ಪರ್ಧಿಗಳಿಗೆ 1ರಿಂದ 10ರವರೆಗೆ ರ್ಯಾಂಕಿಂಗ್ ನೀಡುವ ಜವಾಬ್ದಾರಿ ಪಡೆದಿದ್ದರು. ಆದರೆ ಸ್ಪರ್ಧಿಗಳ ಆಟದ ಸಾಮರ್ಥ್ಯವನ್ನು ಪರಿಗಣಿಸುವ ಬದಲು, ಮನೆಯ ಕೆಲಸಗಳನ್ನು ಆಧಾರವಾಗಿಟ್ಟುಕೊಂಡು ಸ್ಥಾನಗಳನ್ನು ನೀಡಿದಂತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ರ್ಯಾಂಕಿಂಗ್ ನೇರ ನಾಮಿನೇಷನ್ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಿರುವುದರಿಂದ ವಿಚಾರ ಮತ್ತಷ್ಟು ಗಂಭೀರವಾಗಿದೆ. ಇದೇ ವಿಷಯವನ್ನು ಪ್ರಸ್ತಾಪಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ಆಟದ ಮೌಲ್ಯಮಾಪನಕ್ಕೂ ಮನೆಯ ಕೆಲಸಗಳಿಗೂ ಇರುವ ವ್ಯತ್ಯಾಸವನ್ನು ಹಾಸ್ಯಮಿಶ್ರಿತ ವ್ಯಂಗ್ಯದ ಮೂಲಕ ವಿವರಿಸಿದ್ದಾರೆ.
ಅಡುಗೆ ಮಾಡಲು ಬರುವುದಿಲ್ಲ, ಪಾತ್ರೆ ತೊಳೆಯುವುದಿಲ್ಲ, ತರಕಾರಿ ಹೆಚ್ಚಲು ಸಾಧ್ಯವಿಲ್ಲ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ರ್ಯಾಂಕಿಂಗ್ ನೀಡಿದರೆ ಅದು ಆಟದ ಮೌಲ್ಯಮಾಪನವಾಗುವುದಿಲ್ಲ ಎಂಬರ್ಥದಲ್ಲಿ ಜಗದೀಶ್ಗೆ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಈ ವಾರದ ಕ್ಯಾಪ್ಟನ್ ಯಶಸ್, ಉತ್ತಮ ಪಟ್ಟ ಪಡೆದ ತಾಂಡವ್
ಸುದೀಪ್ ಅವರ ಮಾತಿನ ಬಳಿಕ ಮನೆಯೊಳಗಿನ ವಾತಾವರಣವೇ ಬದಲಾಗಿದೆ. ಪ್ರತಿಯೊಬ್ಬ ಸ್ಪರ್ಧಿಯೂ ತಾನು ಯಾವ ಸ್ಥಾನಕ್ಕೆ ಅರ್ಹ ಎಂಬುದನ್ನು ನಿರ್ಧರಿಸಿಕೊಂಡು ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳಲು ಸಜ್ಜಾಗಿದ್ದಾರೆ.