BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಡೇಟ್ ಫಿಕ್ಸ್; ದಿನಾಂಕ ಪ್ರಕಟಿಸಿದ ಕಿಚ್ಚ ಸುದೀಪ್
Kichcha Sudeepa: ಕಿರುತೆರೆ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಆರಂಭಕ್ಕೆ ದಿನಗಣನೆ ನಡೆಯುತ್ತಿದೆ. ಇದೀಗ ನಿರೂಪಕ, ನಟ ಕಿಚ್ಚ ಸುದೀಪ್ ಆರಂಭದ ದಿನಾಂಕವನ್ನು ಅದಿಕೃತವಾಗಿ ಘೋಷಿಸಿದ್ದಾರೆ. ಅಂದುಕೊಂಡಂತೆ ಸೆಪ್ಟೆಂಬರ್‌ನಲ್ಲೇ ಶೋ ಆರಂಭವಾಗಲಿದೆ.

-

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (BBK 12) ಆರಂಭಕ್ಕೆ ಕಾದು ಕುಳಿತವರಿಗೆ ನಟ, ನಿರೂಪಕ ಕಿಚ್ಚ ಸುದೀಪ್ (Kichcha Sudeepa) ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸೀಸನ್ 11ರ ವೇಳೆಗೆ ಇನ್ನುಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಫ್ಯಾನ್ಸ್‌ಗೆ ಶಾಕ್ ನೀಡಿದ್ದ ಸುದೀಪ್ ಬಳಿಕ ಮನಸ್ಸು ಬದಲಾಯಿಸಿದ್ದರು. ಕಲರ್ಸ್ ಕನ್ನಡ ವಾಹಿನಿ, ಬಿಗ್ ಬಾಸ್ ಆಯೋಜಕರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು. ಇತ್ತೀಚೆಗೆ ಲೋಗೊ ಕೂಡ ರಿಲೀಸ್ ಆಗಿತ್ತು. ಇದೀಗ ಸುದೀಪ್ ಶೋ ಯಾವಾಗ ಆರಂಭವಾಗಲಿದೆ ಎನ್ನುವ ಪ್ರಶ್ನೆಗೆ, ಕುತೂಹಲಕ್ಕೆ ಉತ್ತರ ನೀಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗುತ್ತದೆ ಎನ್ನುವ ವದಂತಿ ಹರಡಿತ್ತು. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿರಲಿಲ್ಲ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುದೀಪ್ ಇದೀಗ ಬಿಗ್ ಬಾಸ್ ಆರಂಭದ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಅಂದುಕೊಂಡಂತೆ ಸೆಪ್ಟೆಂಬರ್‌ನಲ್ಲೇ ಶೋ ಆರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ: BBK 12: ಬಿಗ್ ಬಾಸ್ ಕನ್ನಡ ಆರಂಭಕ್ಕೆ ಡೇಟ್ ಫಿಕ್ಸ್: ಈ ದಿನಾಂಕದಂದು ಪ್ರೋಮೋ ರಿಲೀಸ್
ಯಾವಾಗ ಆರಂಭ?
ಆಗಸ್ಟ್ 31ರಂದು ಮೈಸೂರಿಲ್ಲಿ ಆಯೋಜಿಸಿದ್ದ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುದೀಪ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ʼ‘ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ. ಆಶೀರ್ವಾದ ಮಾಡಿʼ’ ಎಂದರು. ಆ ಮೂಲಕ ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಆರಂಭವಾಗುವ ಸೂಚನೆ ನೀಡಿದರು. ಜತೆಗೆ ತಮ್ಮ ಮುಂಬರುವ ಚಿತ್ರ ಈ ವರ್ಷವೇ ತೆರೆಗೆ ಬರಲಿದೆ ಎನ್ನುವ ಗುಟ್ಟನ್ನೂ ಬಿಟ್ಟು ಕೊಟ್ಟರು. ಈ ಸುದ್ದಿ ತಿಳಿದು ಅವರ ಫ್ಯಾನ್ಸ್ ಸಂತಸಗೊಂಡಿದ್ದು ಮತ್ತೆ ಸುದೀಪ್ ಅವರನ್ನು ಕಿರುತೆರೆ, ಹಿರಿತೆರೆಯಲ್ಲಿ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿ ದೊಡ್ಮನೆಗೆ ಸ್ಪರ್ಧಿಗಳಾಗಿ ಯಾರೆಲ್ಲ ಕಾಲಿಡಲಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಮುಂದಿನ 4 ಸೀಸನ್‌ಗೂ ಸುದೀಪ್ ನಿರೂಪಕ
ಸಿನಿಮಾಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ ಸುದೀಪ್ ಇನ್ನುಮುಂದೆ ಬುಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸೀಸನ್ 11ರ ಕೊನೆಗೆ ಪ್ರಕಟಿಸಿದ್ದರು. ಇದರಿಂದ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿತ್ತು. ಅವರನ್ನು ಮರಳಿ ಕರೆತರಬೇಕು ಎನ್ನುವ ಆಗ್ರಹ ಜೋರಾಗಿತ್ತು. ಅವರಿಲ್ಲದೆ ಶೋ ನೋಡುವುದಿಲ್ಲ ಎಂದು ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.
ಬಳಿಕ ಆಯೋಜಕರು ಸುದೀಪ್ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಮರಳಿ ಕರೆ ತಂದಿದ್ದರು. ಜೂನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸುದೀಪ್ ಸೀಸನ್ 12 ಮಾತ್ರವಲ್ಲ ಮುಂದಿನ ಮುಂದಿನ 4 ಸೀಸನ್‌ನ ನಿರೂಪಣೆಯ ಜವಾಬ್ದಾರಿ ಹೊರುವುದಾಗಿ ಘೋಷಿಸಿದ್ದರು. ಸೀಸನ್ 12 ಮಾತ್ರವಲ್ಲ ಸೀಸನ್ 15ರವರೆಗೂ ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದರು. ಮುಂದಿನ 4 ಬಿಗ್ ಬಾಸ್ ಸೀಸನ್‌ಗಳನ್ನು ಹೋಸ್ಟ್ ಮಾಡುವ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ.