ಕಿರಣ್ ಆದಿತ್ಯ, ಲೇಖಾ ಚಂದ್ರ ನಟನೆಯ ʻಲೈಫ್ ಟುಡೇʼ ಸಿನಿಮಾದ ನೀನೇ ನೀನೇ ಎಂಬ ಹಾಡನ್ನು ರಿಲೀಸ್ ಮಾಡಲಾಗಿದೆ. ವಿಶೇಷವೆಂದರೆ, ಈ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡಿಗೆ ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಕಾಂತ ಕನ್ನಲ್ಲಿ ಅವರ ನಿರ್ದೇಶದನದಲ್ಲಿ ʻಲೈಫ್ ಟುಡೇʼ ಸಿನಿಮಾ ಮೂಡಿಬಂದಿದೆ.
ಹೀರೋ ಏನ್ ಹೇಳಿದರು?
"ಹೊಸಬರ ಸಿನಿಮಾಗಳು ತೆಲುಗು, ತಮಿಳು ಭಾಷೆಯ ಮಟ್ಟಕ್ಕೆ ಬರುವಂತೆ ಒತ್ತಡ ಹೇರಿ ಹಾಡು ಮಾಡಿಕೊಂಡಿದ್ದೇವೆ. ನಟಿ ಲೇಖಾ ಚಂದ್ರ ಉತ್ತಮವಾಗಿ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ಇಡೀ ಚಿತ್ರದಲ್ಲಿ ನಾಯಕಿ ಆವರಿಸಿಕೊಂಡಿದ್ದಾರೆ. ಪರಭಾಷೆಯವರು ನಮ್ಮಲ್ಲಿ ದುಡ್ಡು ಮಾಡ್ತಾರೆ. ನಾವು ಈಗ ಪರಭಾಷೆಯಲ್ಲಿ ದುಡ್ಡು ಮಾಡೋಣ" ಎಂದು ಹೀರೋ ಕಿರಣ್ ಆದಿತ್ಯ ಹೇಳಿದ್ದಾರೆ.
ಸಂದೇಶ ಕೊಡುವ ಪಾತ್ರ ಎಂದ ಲೇಖಾ ಚಂದ್ರ
"ನಾನು ತುಂಬಾ ಸಮಯದ ನಂತರ ನನ್ನ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಡಿನ ಬಗ್ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ನಿರ್ದೇಶಕರು ನೀಡಿದ ಸಹಕಾರ. ಮಹಿಳಾಪ್ರಧಾನ ಚಿತ್ರಗಳು ಕಡಿಮೆಯಾಗಿವೆ. ಆ ಕೊರತೆಯನ್ನು ಈ ಸಿನಿಮಾ ನೀಗಿಸಲಿದೆ. ಈ ಚಿತ್ರದಲ್ಲಿ ನನ್ನದು ಸಮಾಜಕ್ಕೆ ಸಂದೇಶ ಕೊಡುವಂತಹ ಪಾತ್ರ. ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕನ್ನಡಿಗರು ಸಹಕಾರ ನೀಡಬೇಕು" ಎಂದರು ಲೇಖಾ ಚಂದ್ರ.
"ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಟ್ಯೂನ್ ಕಳುಹಿಸಿ ಏನಾದರೂ ಹೊಳೆಯುತ್ತಾ ನೋಡಿ ಎಂದರು. ಚಿತ್ರದುರ್ಗದಿಂದ ದಾವಣಗೆರೆ ಹೋಗುವ ಮಾರ್ಗ ಮದ್ಯೆ ಹಾಡು ಹುಟ್ಟಿತ್ತು. ನನ್ನ 6 ವರ್ಷದ ಮಗಳು ಈ ನೀನೇ ನೀನೇ ಹಾಡನ್ನು ಗುನುಗುತ್ತಿದ್ದಾಳೆ. ಹಾಡು ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಶ್ರೀಧರ್ ಉತ್ತಮ ಸಾಹಿತ್ಯ ರಚನೆಕಾರರು. ಅವರಿಗೆ ಹಾಡು ಬರೆಯುವಾಗ ಎಚ್ಚರಿಕೆ ವಹಿಸಿ ಗೀತೆ ಬರೆಯುತ್ತೇನೆ" ಎನ್ನುತ್ತಾರೆ ಗೀತರಚನೆ ಮಾಡಿರುವ ಕವಿರಾಜ್.
ಲೈಫ್ ಟುಡೇ ಸಿನಿಮಾದ ಪ್ರೆಸ್ ಮೀಟ್ ವಿಡಿಯೋ
"ಈ ಚಿತ್ರದಲ್ಲಿ ಐದು ಹಾಡುಗಳಿವೆ. ಬಿಡುಗಡೆಯಾದ ಎರಡು ಹಾಡುಗಳು ಯಶಸ್ವಿಯಾಗಿವೆ. ನಮ್ಮ ಸಂಸ್ಥೆಯಿಂದ ಎ ಆರ್ ರೆಹಮಾನ್, ಹಂಸಲೇಖ ಅವರ ಮೊದಲ ಹಾಡು ನಾವೇ ಬಿಡುಗಡೆ ಮಾಡಿದ್ದೆವು. ಜೊತೆಗೆ ಶ್ರೀಧರ್ ಸಂಭಮ್ ಅವರ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ. ಇಂದು ಉತ್ತಮ ಕಂಟೆಂಟ್ ಕೊಟ್ಟರೆ ಜನ ಖಂಡಿತಾ ನೋಡ್ತಾರೆ. ಎಐ ಬಂದಿದ್ದರೂ ಚಿತ್ರರಂಗ ಭಯ ಪಡಯವ ಅಗತ್ಯವಿಲ್ಲ. ತುಸು ಸಮಯ ತೆಗೆದುಕೊಳ್ಳಲಿದೆ" ಎಂದು ಲಹರಿ ವೇಲು ಹೇಳಿದರು.