ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ಅನುಷಾ ರೈ ಅವರು ಇದೀಗ ಹೊಸದೊಂದು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಮಹಾಕವಿ ಎಂದು ಹೆಸರಿಡಲಾಗಿದ್ದು, ಕಿಶೋರ್ ಅವರು ನಾಯಕರಾಗಿದ್ದು, ಅನುಷಾ ರೈ ಇಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಗಾವಿಯ ಶ್ರೀ ಪ್ರಭು ಯತ್ನಟ್ಟಿ ಅವರು ಪಿ ಆರ್ ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ಈ ಚಿತ್ರವನ್ನು ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿದ್ದಾರೆ. ಇದು ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ವಿಶೇಷ.
"ಈಗಾಗಲೇ ಈ ಸಿನಿಮಾದ ಚಿತ್ರೀಕರಣವು ಮುಕ್ತಾಯಗೊಂಡಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
Anusha Rai-Trivikram: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಅನುಷಾ ರೈ-ತ್ರಿವಿಕ್ರಮ್: ಹಗ್ ಮಾಡುತ್ತಿರುವ ವಿಡಿಯೋ ವೈರಲ್
"ಪಂಪ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದೂ ಸೃಜನಶೀಲ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ಬರೆದ ಕವಿ. ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಕುರಿತ ಪಂಪನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಅಂತೆಯೇ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊಟ್ಟಮೊದಲ ಕವಿ ಪಂಪ. ‘ಆದಿಪುರಾಣ’ದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪ್ರತಿಪಾದಿಸಿದ ಪಂಪ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾನೆ. ‘ಆದಿಪುರಾಣ’ದಲ್ಲಿ ಅಧಿಕಾರದ ಅಹಂಕಾರಕ್ಕೆ ವಿರೋಧ ಒಡ್ಡಿ ಯುದ್ಧದ ಬದಲು ಶಾಂತಿ ಸಂದೇಶ ನೀಡಿದ್ದಾನೆ. ಭೋಗದ ನಶ್ವರತೆಯನ್ನು ಪ್ರತಿಪಾದಿಸಿದ್ದಾನೆ. ಈ ಎಲ್ಲಾ ಪರಿಕಲ್ಪನೆಗಳಿಗೆ ಪ್ರತೀಕವಾಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
Star Fashion 2025: ಬಂಗಾರದ ಬೊಂಬೆಯಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಅನುಷಾ ರೈ
ಪಂಪ ಮಹಾಕವಿಯ ಕೆಲವು ಪದ್ಯಗಳನ್ನು ಚಿತ್ರದಲ್ಲಿ ಬಳಸಿದ್ದು, ಒಂದು ಗೀತೆಯನ್ನು ಬರಗೂರು ರಾಮಚಂದ್ರಪ್ಪ ಅವರು ರಚಿಸಿದ್ದಾರೆ. ಜೊತೆಗೆ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಪಂಪನ ಪಾತ್ರದಲ್ಲಿ ಪ್ರಸಿದ್ಧ ಕಲಾವಿದ ಕಿಶೋರ್ ಅವರು ಅಭಿನಯಿಸಿದ್ದಾರೆ. ‘ಬಿಗ್‍ಬಾಸ್’ ಖ್ಯಾತಿಯ ಅನುಷಾ ರೈ ನಾಯಕಿಯ ಪಾತ್ರದಲ್ಲಿದ್ದಾರೆ. ಬಾಲಕ ಪಂಪನ ಪಾತ್ರವನ್ನು ಆಕಾಂಕ್ಷ್ ಬರಗೂರು ನಿಭಾಯಿಸಿದ್ದು, ಹಿರಿಯ ನಟರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೋವಿಂದ್, ಸುಂದರರಾಜ ಅರಸು, ವತ್ಸಲಾ ಮೋಹನ್, ರಾಘವ್, ಹನುಮಂತೇಗೌಡ, ಶಾಂತರಾಜು, ಚಲಪತಿ ಸಿರಾ, ಬಾಲಕೃಷ್ಣ ಬರಗೂರು, ನಟರಾಜ್, ಪ್ರವೀಣ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಸಂಕಲನವನ್ನು ಸುರೇಶ್ ಅರಸು ಮಾಡಿದ್ದು, ಛಾಯಾಗ್ರಹಣದ ಹೊಣೆ ನಾಗರಾಜ ಆದವಾನಿ ಅವರದ್ದು. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದು, ನಟ್ರಾಜ್ ಶಿವು ಮತ್ತು ಪ್ರವೀಣ್ ಅವರ ಸಹನಿರ್ದೇಶನವಿದೆ.