ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಕೋಟಿಗೊಬ್ಬ' ಚಿತ್ರಕ್ಕೆ 25ರ ಸಂಭ್ರಮ; ‌ ವಿಷ್ಣುವರ್ಧನ್‌ ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಉಪೇಂದ್ರ, ಗಣೇಶ್‌, ದೇವರಾಜ್

Vishnuvardhan Kotigobba 25 Years: ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪ ಬಾಬು ಭವ್ಯ ಸಮಾರಂಭ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಉಪೇಂದ್ರ, ಗಣೇಶ್, ದೇವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿಷ್ಣು ಸರ್ ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟವನ್ನು ಹಂಚಿಕೊಂಡರು.

ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಅಭಿನಯದ ʻಕೋಟಿಗೊಬ್ಬʼ ಸಿನಿಮಾವು ಬಿಡುಗಡೆಯಾಗಿ 25 ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಆ ಚಿತ್ರದ ನಿರ್ಮಾಪಕ ಸೂರಪ್ಪಬಾಬು ಅವರು ಒಂದು ಸುಂದರ ಸಮಾರಂಭವನ್ನು ಆಯೋಜಿಸಿದ್ದರು. ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯ ನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ʻಗೋಲ್ಡನ್ ಸ್ಟಾರ್ʼ ಗಣೇಶ್, ಸಾಹಿತಿ ಕೆ. ಕಲ್ಯಾಣ್ ಇನ್ನಿತರರು ಆಗಮಿಸಿ, ʻಕೋಟಿಗೊಬ್ಬʼ ಚಿತ್ರದ ಬಗ್ಗೆ ಮಾತನಾಡಿದರು. ಡಾ. ವಿಷ್ಣುವರ್ಧನ್‌ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು.

ವಿಷ್ಣು ಬಗ್ಗೆ ದೇವರಾಜ್‌ ಮಾತು

"ವಿಷ್ಣುವರ್ಧನ್‌ ಅವರು ನನ್ನನ್ನು ಯಾವಾಗಲೂ ತಮ್ಮನ ಥರ ಆತ್ಮೀಯತೆಯಿಂದ ಬರಮಾಡಿಕೊಂಡು, ಅವರ ಮನೆಯ ತೂಗುಯ್ಯಾಲೆಯಲ್ಲಿ ಕೂರಿಸಿಕೊಳ್ಳುತ್ತಿದ್ದರು. ಭಾರತಿ ಅವರು ನನಗೆ ಕೈತುತ್ತು ನೀಡುತ್ತಿದ್ದರು. ವಿಷ್ಣು ಅವರ ಶಿಸ್ತು ಸಂಯಮಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್‌ಗಾಗಿ ನಾನು 30 ದಿನಗಳ‌ ಕಾಲ ಅವರ ಜತೆ ಕಳೆದದ್ದು ಮರೆಯಲಾಗದು. ಸೂರಪ್ಪ ಚಿತ್ರದಲ್ಲಿ ವಿಷ್ಣು ಅವರ ವಿಗ್ರಹ ಒಡೆದು ಹಾಕುವ ಸನ್ನಿವೇಶವಿದ್ದರಿಂದ ಆ ಥರದ ಪಾತ್ರ ಮಾಡಲು ನಾನು ಒಪ್ಪಿಕೊಳ್ಳಲಿಲ್ಲ. ಆದರೆ ಈ ಚಿತ್ರಕ್ಕೆ ಕರೆ ಬಂದಾಗ ಬ್ಯುಸಿ ಇದ್ದರೂ ತಕ್ಷಣ ಒಪ್ಪಿ ಇನ್ಸ್ ಪೆಕ್ಟರ್ ಪಾತ್ರ ಮಾಡಿದೆ" ಎಂದು ದೇವರಾಜ್‌ ಹೇಳುತ್ತಾರೆ.

ವಿಷ್ಣುವರ್ಧನ್‌ ಚಿತ್ರದ ಹಾಡಿನ ಮೂಲಕ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ ʼಕಾಂತಾರ'ದ ದೊರೆ ಮಲಯಾಳಂ ನಟ ಜಯರಾಮ್‌

ಆಧ್ಯಾತ್ಮ, ದೇವರ ಬಗ್ಗೆ ವಿಷ್ಣು ಹೇಳುತ್ತಿದ್ದರು

"ವಿಷ್ಣು ಸಾರ್ ಬಗ್ಗೆ ಹೇಳೊದು ತುಂಬಾ ಇದೆ. ಅವರನ್ನು ಮಾತಾಡಿಸಬೇಕೆಂದೇ ನಾನು ಅವರ ಮನೆಗೆ ಹೋಗ್ತಿದ್ದೆ. ಆಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳುತ್ತಿದ್ದರು. ಅಂಥ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ʻನಿಮ್ಮ ಸಿನಿಮಾಗಳು ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕ್ತಿವೆʼ ಎಂದು ನನ್ನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದರು" ಎಂದು ಉಪೇಂದ್ರ ಹೇಳಿದರು. ಅಂದಹಾಗೆ, ʻತರ್ಲೆ ನನ್ಮಗʼ ಚಿತ್ರದ ಮೂಲಕ ಉಪೇಂದ್ರ ಅವರನ್ನು ನಿರ್ದೇಶಕರನ್ನಾಗಿ ಪರಿಚಯಿಸಿದ್ದೇ ಕೋಟಿಗೊಬ್ಬ ನಿರ್ಮಾಪಕ ಸೂರಪ್ಪ ಬಾಬು.

Umashree: ಡಾ. ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌, ಡಾ. ವಿಷ್ಣುವರ್ಧನ್‌ ಪ್ರಶಸ್ತಿ ಪ್ರಕಟ; ಉಮಾಶ್ರೀಗೆ ಗೌರವ

ಈ ಸಮಾರಂಭಕ್ಕೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಆಗಮಿಸಿದ್ದರು. "ಸಾಮಾನ್ಯವಾಗಿ ನಾನು ಸಿನಿಮಾ ಸಮಾರಂಭಗಳಿಗೆ ಹೋಗುವುದಿಲ್ಲ, 25 ವರ್ಷಗಳ ನಂತರ ಅವರನ್ನು ನೀವೆಲ್ಲಾ ನೆನಪಿಸಿಕೊಳ್ಳುತ್ತಿರುವುದು ವಿಶೇಷ ಎನಿಸಿತು. ಅದಕ್ಕಾಗೇ ನಾನಿಲ್ಲಿಗೆ ಬಂದೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಅವರು ಇಡೀ ಕುಟುಂಬ ಕೂತು ನೋಡುವಂಥ ಚಿತ್ರಗಳನ್ನಷ್ಟೇ ಮಾಡುತ್ತಿದ್ದರು" ಎಂದರು ಸಂತೋಷ್‌ ಹೆಗ್ಡೆ.

ಕೋಟಿಗೊಬ್ಬ ಚಿತ್ರದಲ್ಲಿ ಪ್ರಿಯಾಂಕಾ ನಟಿಸಲು ಉಪ್ಪಿ ಕಾರಣ

"ನಾನು ತಮಿಳು ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಈ ಸಿನಿಮಾದಲ್ಲಿ ನಟಿಸಲು ಆಫರ್ ಬಂತು. ನನಗೆ ತುಂಬಾ ಭಯವಾಯ್ತು.‌ ನಂತರ ಉಪೇಂದ್ರ ಅವರೇ, ಅಂಥ ಮಹಾನ್ ಕಲಾವಿದ, ʻಹೃದಯವಂತ ವ್ಯಕ್ತಿಯ ಜತೆ ನಟಿಸುವ ಅವಕಾಶ ಬಂದಿರೋದೇ ನಿನ್ನ ಪುಣ್ಯ. ಫಸ್ಟ್ ಒಪ್ಪಿಕೋʼ ಎಂದರು. ನಾನು ಈ ಚಿತ್ರದಲ್ಲಿ ನಟಿಸಲು ಮೂಲ ಕಾರಣ ಉಪೇಂದ್ರ. ವಿಷ್ಣು ಅವರಿಂದ ನಾನು ತುಂಬಾ ಕಲಿತಿದ್ದೇನೆ" ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದರು.

ವಿಷ್ಣುವರ್ಧನ್‌ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ ಕಿಚ್ಚ ಸುದೀಪ್‌; ಅಭಿಮಾನ ಕ್ಷೇತ್ರದ ಮಾಡೆಲ್‌ ರಿಲೀಸ್‌

ನಟ ಗಣೇಶ್ ಮಾತನಾಡಿ, "ನಾನು ವಿಷ್ಣು ಸರ್‌ಗೆ ದೊಡ್ಡ ಅಭಿಮಾನಿ. ಅವರಂತೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ಅವರ ಸಿನಿಮಾಗಳನ್ನು ಬ್ಲಾಕ್ ಟಿಕೆಟ್ ತಗೊಂಡು ನೋಡುತ್ತಿದ್ದೆ. ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎಂದು ವಿಷ್ಣು ಸರ್‌ ನನಗೆ ಹೇಳುತ್ತಿದ್ದರು" ಎಂದು ಹೇಳಿದರು.

ಶಿವಣ್ಣನನ್ನು ಕಂಡರೆ ವಿಷ್ಣು ಸರ್‌ಗೆ ಪ್ರೀತಿ

ವಿಷ್ಣುವರ್ಧನ್‌ ಹಾಗೂ ವಿಷ್ಣು ಅವರ ಬಾಂಧವ್ಯದ ಬಗ್ಗೆ ಮಾತನಾಡಿದ ಚಿ. ಗುರುದತ್‌, "ನನ್ನ ಒಂದು ಚಿತ್ರದಲ್ಲಿ ಶಿವಣ್ಣ ಮತ್ತು ವಿಣ್ಣು ಸರ್‌ ಒಟ್ಟಿಗೆ ಅಭಿನಯಿಸಬೇಕಿತ್ತು. ಆದರೆ ಸ್ಕ್ರಿಪ್ಟ್ ಆಗೋದು ಲೇಟ್‌ ಆಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಶಿವಣ್ಣನ ಮೇಲೆ ವಿಷ್ಣು ಅವರು ತುಂಬಾ ಅಭಿಮಾನ, ಪ್ರೀತಿ ಇಟ್ಟುಕೊಂಡಿದ್ದರು. ಒಮ್ಮೆ ಅಶೋಕ ಹೋಟೆಟ್‌ನಲ್ಲಿ ಅವರ ಚಿತ್ರದ ಸಮಾರಂಭವಿತ್ತು. ಆಗ ನನ್ನನ್ನು ಕರೆದು, ʻಶಿವಣ್ಣನನ್ನು ಕರೆಸು, ನಾನು ಅವರ ಜತೆ ಮಾತಾಡಬೇಕುʼ ಅಂದರು. ಶಿವಣ್ಣ ಬಂದಾಗ ಆತ್ಮಿಯತೆಯಿಂದ ಬರಮಾಡಿಕೊಂಡರು. ನಂತರ ತಮ್ಮ ಕೈಗೆ ಕಟ್ಟಿಕೊಂಡಿದ್ದ ವಾಚ್‌ ಅನ್ನು ಶಿವಣ್ಣಗೆ ಗಿಫ್ಟ್‌ ನೀಡಿದರು. ಆ ವಾಚ್‌ ಅನ್ನು ಎಂಜಿಆರ್ ಅವರು ವಿಷ್ಣು ಸರ್‌ಗೆ ಗಿಫ್ಟ್ ನೀಡಿದ್ದರು. ʻನೀನು ಕರ್ನಾಟಕವೇ ಇಷ್ಟಪಡುವಂತಹ ದೊಡ್ಡ ಕಲಾವಿದ ಆಗುವೆ. ಅದನ್ನು ನಾನು ನೋಡುತ್ತೇನೆʼಎಂದು ಶಿವಣ್ಣಗೆ ವಿಷ್ಣು ಸರ್‌ ಹೇಳಿದದ್ದರು" ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು.