ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಆಪ್ತ ಸ್ನೇಹಿತ ವೈಶಾಖ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ತನಿಖೆ ಚುರುಕುಗೊಂಡಿದ್ದು, ವೈಶಾಖ್ ಸಾವಿಗೆ ಆರ್ಥಿಕ ಬಿಕ್ಕಟ್ಟೇ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.
ನಟಿ ಮನೆಯಲ್ಲೇ ನೇಣಿಗೆ ಶರಣಾಗಿದ್ದ ಗೆಳೆಯ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟಿ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನಲ್ಲಿಯೇ ವೈಶಾಖ್ ಕೂಡ ನೆಲೆಸಿದ್ದರು. ಜೂನ್ 24ರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ದಿನ ಕೃಷಿ ತಾಪಂಡ ಮನೆಯಲ್ಲಿ ಇರಲಿಲ್ಲ. ರಾತ್ರಿ ವೇಳೆ ಕೃಷಿಗೆ ಕರೆ ಮಾಡಿದ್ದ ವೈಶಾಖ್, ತಾವು ಸಾಯುತ್ತಿರುವುದಾಗಿ ತಿಳಿಸಿದ್ದರು. ತಕ್ಷಣವೇ ವೈಶಾಖ್ ಕುಟುಂಬದವರಿಗೆ ಕೃಷಿ ಮಾಹಿತಿ ನೀಡಿದರಾದರೂ, ಅಷ್ಟರಲ್ಲೇ (ರಾತ್ರಿ 8:30ರ ಸುಮಾರಿಗೆ) ವೈಶಾಖ್ ಪ್ರಾಣ ಬಿಟ್ಟಿದ್ದರು. ಈ ಸಂಬಂಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದೇನು?
ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ನಟಿ ಕೃಷಿ ತಾಪಂಡ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿರದ ಕಾರಣ ಸಾವಿನ ಹಿಂದಿನ ರಹಸ್ಯ ಹುಡುಕಲು ಪೊಲೀಸರು ಮುಂದಾಗಿದ್ದರು. ಪೊಲೀಸರ ತನಿಖೆಯ ವೇಳೆ ವೈಶಾಖ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಹಾಗೂ ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂಬ ವಿಷಯ ತಿಳಿದುಬಂದಿದೆ.
Krishi Thapanda: ಇದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ! ಕೃಷಿ ತಾಪಂಡ ಪೋಸ್ಟ್
ಆಗಾಗ ಹಣ ನೀಡುತ್ತಿದ್ದ ಕೃಷಿ
ಆರ್ಥಿಕವಾಗಿ ಜರ್ಜರಿತರಾಗಿದ್ದ ಸ್ನೇಹಿತ ವೈಶಾಖ್‌ಗೆ ನಟಿ ಕೃಷಿ ತಾಪಂಡ ಅವರು ಆಗಾಗ ಹಣದ ಸಹಾಯ ಮಾಡುತ್ತಿದ್ದರು. ಹಲವು ಬಾರಿ 40 ರಿಂದ 50 ಸಾವಿರ ರೂಪಾಯಿಗಳನ್ನು ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲಾ ಬ್ಯಾಂಕ್ ದಾಖಲೆಗಳನ್ನು ನಟಿ ಕೃಷಿ ತಾಪಂಡ ಅವರು ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ ಎಂಬ ಗೊತ್ತಾಗಿದೆ.
Krishi Thapanda: ನನ್ನ ಪಾಡಿಗೆ ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ
"ಬೇರೆ ದಾರಿಯೇ ಇಲ್ಲ..." ಕೃಷಿ ಭಾವುಕ ಪೋಸ್ಟ್:
ಗೆಳೆಯನ ಅಗಲಿಕೆಯ ದುಃಖದಲ್ಲಿರುವ ನಟಿ ಕೃಷಿ ತಾಪಂಡ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ''ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ… ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಇದು ನಾನು ಆಯ್ಕೆ ಮಾಡಿಕೊಂಡಿದ್ದಲ್ಲ, ಬೇರೆ ದಾರಿಯೇ ಇಲ್ಲದ ಕಾರಣ'' ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಆಪ್ತರು ಪ್ರತಿಕ್ರಿಯಿಸಿದ್ದು, "ನೀವು ಸ್ಟ್ರಾಂಗ್ ಆಗಿದ್ದೀರಿ, ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ, ಸಮಯ ಎಲ್ಲವನ್ನೂ ವಾಸಿ ಮಾಡುತ್ತದೆ" ಎಂದು ಧೈರ್ಯ ತುಂಬುತ್ತಿದ್ದಾರೆ.