ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ನೂತನ ರಕ್ಷಾಬಂಧನ ಜಾಹೀರಾತು ತೀವ್ರ ವಿವಾದಕ್ಕೆ ಗುರಿಯಾಗಿದ್ದು, ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರಸಿದ್ಧ ಆಭರಣ ಸಂಸ್ಥೆ 'ಜಿವಾ' (GIVA) ತನ್ನ ಪ್ರಚಾರ ಅಭಿಯಾನವನ್ನು ಹಿಂಪಡೆದಿದೆ. ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಆಧುನಿಕ ಉಡುಪಿನ ಶೈಲಿಯನ್ನು ನೆಟ್ಟಿಗರು ಪ್ರಶ್ನಿಸಿದ್ದರು.
ಇದರ ಬೆನ್ನಲ್ಲೇ ನಟಿ ಕಂಗನಾ ರಣಾವತ್, "ಬಿಕಿನಿ ಅಥವಾ ಒಳಉಡುಪು ಧರಿಸಿ ರಾಖಿ ಕಟ್ಟುವ ಅಗತ್ಯವೇನಿದೆ?" ಎಂದು ತೀಕ್ಷ್ಣವಾಗಿ ಟೀಕಿಸಿ, ಇದೊಂದು "ಉದ್ದೇಶಪೂರ್ವಕ ಅಸಹ್ಯಕರ ಕೃತ್ಯ" ಎಂದು ಆಕ್ರೋಶ ಹೊರಹಾಕಿದ್ದರು. ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ನಂತರ ಸಂಸ್ಥೆಯು ಜಾಹೀರಾತನ್ನು ಹಿಂಪಡೆದು ಅಧಿಕೃತ ಸ್ಪಷ್ಟನೆ ನೀಡಿದೆ.
ಭಾವನೆಗಳಿಗೆ ಧಕ್ಕೆ ತಂದಿದ್ದರೆ ಕ್ಷಮೆಯಿರಲಿ
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಜಿವಾ ಸಂಸ್ಥೆ, "ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಬಗ್ಗೆ ತಮಗೆ ಅಪಾರ ಗೌರವವಿದೆ. ಕುಟುಂಬದ ಪ್ರೀತಿ ಮತ್ತು ಸಂಭ್ರಮವನ್ನು ಮುದ್ದಿನ ಸಾಕುಪ್ರಾಣಿಗಳಿಗೂ ವಿಸ್ತರಿಸುವ ಸದುದ್ದೇಶದಿಂದ ಈ ಜಾಹೀರಾತು ರೂಪಿಸಲಾಗಿತ್ತು. ಆದರೆ ಅರಿವಿಲ್ಲದೆ ಇದು ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದ್ದರೆ ಕ್ಷಮೆಯಿರಲಿ. ಜನರ ಭಾವನೆಗಳಿಗೆ ಗೌರವ ನೀಡಿ ಜಾಹೀರಾತನ್ನು ಎಲ್ಲಾ ಡಿಜಿಟಲ್ ಹಾಗೂ ಮಾಧ್ಯಮ ವೇದಿಕೆಗಳಿಂದ ಸಂಪೂರ್ಣವಾಗಿ ಹಿಂಪಡೆಯುತ್ತಿದ್ದೇವೆ" ಎಂದು ಹೇಳಿಕೊಂಡಿದೆ.
5 ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿದ ನಟಿ ಕೃತಿ ಸನೋನ್; ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?
ಹಬ್ಬಗಳ ಪಾವಿತ್ರ್ಯತೆ ಧರಿಸುವ ಉಡುಪಿನಲ್ಲಿಲ್ಲ
ತಮ್ಮ ಉಡುಪಿನ ಆಯ್ಕೆಯ ಬಗ್ಗೆ ಕೇಳಿಬಂದ ಟೀಕೆಗಳಿಗೆ ಕೃತಿ ಸನೋನ್ ಕೂಡ ದೀರ್ಘ ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. "ಮಹಿಳೆಯೊಬ್ಬಳು ಧರಿಸುವ ಬಟ್ಟೆಯ ಬಗ್ಗೆ ಇಷ್ಟೊಂದು ಕೀಳಾಗಿ ಯೋಚಿಸುವುದನ್ನು ಬಿಟ್ಟು ಜನರು ಮಾನಸಿಕವಾಗಿ ಬದಲಾಗಬೇಕು. ಹಬ್ಬಗಳ ಪಾವಿತ್ರ್ಯತೆ ಧರಿಸುವ ಉಡುಪಿನಲ್ಲಿಲ್ಲ, ಬದಲಾಗಿ ವ್ಯಕ್ತಿಯ ಭಾವನೆ ಮತ್ತು ನೀಡುವ ಗೌರವದಲ್ಲಿದೆ ಎಂಂದು ಹೇಳಿರುವ ಅವರು, ಮಹಿಳೆಯರ ಸಂಸ್ಕೃತಿಯನ್ನು ಅವರ ಉಡುಪಿನ ಆಧಾರದ ಮೇಲೆ ಅಳೆಯುವ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ರಕ್ಷಾಬಂಧನ ಎಂಬುದು ಕೇವಲ ಸಹೋದರ-ಸಹೋದರಿಯರ ನಡುವಿನ ರಕ್ಷಣೆಯ ಬಂಧ ಮಾತ್ರವಲ್ಲದೆ, ಕುಟುಂಬದ ಭಾಗವಾಗಿರುವ ಸಾಕುಪ್ರಾಣಿಗಳ ಮೇಲಿನ ಪ್ರೀತಿಯ ಸಂಕೇತವೂ ಹೌದು" ಎಂದು ಕೃತಿ ಸನೋನ್ ತಿಳಿಸಿದ್ದಾರೆ.