ಈಚೆಗಷ್ಟೇ ಪೋಷಕರ ವಿರೋಧದ ನಡುವೆಯೂ ಮುಸ್ಲಿಂ ಯುವಕ ಫರ್ಮಾನ್ ಖಾನ್ ಜೊತೆ ಮದುವೆಯಾಗಿ ಸುದ್ದಿಯಾಗಿದ್ದ ʻಕುಂಭಮೇಳ ಗರ್ಲ್ʼ ಮೊನಾಲಿಸಾ ಭೋಂಸ್ಲೆ, ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಬಾರಿ ಅವರು ಬಾಲಿವುಡ್ ಸಿನಿಮಾ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪತಿ, ನಟ ಫರ್ಮಾನ್ ಖಾನ್ ಜೊತೆಗೆ ಭಾಗಿಯಾಗಿದ್ದ 18 ವರ್ಷದ ಮೊನಾಲಿಸಾ, ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ತಾವು ಅಪ್ರಾಪ್ತೆಯಾಗಿದ್ದಾಗ ಈ ಘಟನೆಗಳು ನಡೆದಿವೆ" ಎಂದು ಅವರು ಹೇಳಿಕೊಂಡಿದ್ದಾರೆ.
ಮೊನಾಲಿಸಾ ಮಾಡಿರುವ ಆರೋಪಗಳೇನು?
"ನನಗೆ 18 ವರ್ಷ ತುಂಬುವ ಮೊದಲೇ 'ದಿ ಡೈರಿ ಆಫ್ ಮಣಿಪುರ' ಎಂಬ ಚಿತ್ರಕ್ಕೆ ಆಯ್ಕೆಯಾದೆ. ಆ ಸಿನಿಮಾದ ಚಿತ್ರೀಕರಣದ ವೇಳೆ ನೇಪಾಳ ಮತ್ತು ಡೆಹ್ರಾಡೂನ್‌ನಲ್ಲಿ ನನಗೆ ಕಿರುಕುಳ ನೀಡಲಾಯಿತು. ನಿರ್ದೇಶಕ ಸನೋಜ್ ಮಿಶ್ರಾ ಪದೇ ಪದೇ ಸೆಟ್‌ನಲ್ಲಿ ಅಸಭ್ಯವಾಗಿ ವರ್ತನೆ ತೋರುತ್ತಿದ್ದರು. ನನ್ನ ದೇಹವನ್ನು ಅನುಚಿತವಾಗಿ ಮುಟ್ಟುತ್ತಿದ್ದರು. ಆ ಸಮಯದಲ್ಲಿ ನನ್ನ ಕುಟುಂಬದವರಿಗೆ ನಾನು ಈ ವಿಷಯವನ್ನು ತಿಳಿಸಿದೆ. ಆದರೂ, ಏನೂ ಉಪಯೋಗವಾಗಲಿಲ್ಲ. ಇದು ನನ್ನ ಮೊದಲ ಸಿನಿಮಾವಾಗಿದ್ದರಿಂದ ಮತ್ತು ಆರ್ಥಿಕ ಸ್ಥಿತಿಯ ಕಾರಣದಿಂದ ಇದನ್ನು ಕುಟುಂಬದವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈ ಘಟನೆ ನಡೆದಾಗ ನಾನು ಅಪ್ರಾಪ್ತೆ ಆಗಿದ್ದರಿಂದ, ಇದು 'ಪೋಕ್ಸೋ' ಕಾಯಿದೆಯಡಿ ಬರುತ್ತದೆ" ಎಂದು ಮೊನಾಲಿಸಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಯೇ ಕಣ್ಣೀರಿಟ್ಟ ಮೊನಾಲಿಸಾ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಭಾವುಕರಾದ ಮೊನಾಲಿಸಾ, "ನಿರ್ದೇಶಕ ಸನೋಜ್ ಮಿಶ್ರಾ ಒಳ್ಳೆಯ ಮನುಷ್ಯನಲ್ಲ. ಅವರು ಹತ್ತಕ್ಕೂ ಹೆಚ್ಚು ಬಾರಿ ನನ್ನ ದೇಹದ ಖಾಸಗಿ ಭಾಗಗಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಈ ಬಗ್ಗೆ ನನ್ನ ಕುಟುಂಬದವರಿಗೆ ಹೇಳಿದರೂ, ಅವರು ನನ್ನ ಪರ ನಿಲ್ಲಲಿಲ್ಲ. ನನ್ನ ಮೇಲೆ ಎಂಥ ದೌರ್ಜನ್ಯವಾಗಿದೆ ಎಂಬುದು ನನಗಷ್ಟೇ ಗೊತ್ತು. ನನಗೆ ಅನ್ಯಾಯವಾಗಿದೆ ಹಾಗೂ ನನಗೆ ನ್ಯಾಯ ಬೇಕು" ಎಂದು ಕಣ್ಣೀರಿಟ್ಟಿದ್ದಾರೆ.
ಮೊನಾಲಿಸಾ ಖಾಸಗಿ ಬದುಕಿನ ಮೇಲೆ ಸನೋಜ್ ಹಸ್ತಕ್ಷೇಪ?
ಈ ಮಧ್ಯೆ ಮೊನಾಲಿಸಾ ಅವರ ವೈಯಕ್ತಿಕ ಜೀವನದಲ್ಲಿ ಸನೋಜ್ ಮಿಶ್ರಾ ಹಸ್ತಕ್ಷೇಪ ಮಾಡುತ್ತಿದ್ದಾರಂತೆ! "ಫರ್ಮಾನ್ ಖಾನ್ ಜೊತೆ ನಾನು ಮದುವೆಯಾಗಿದ್ದು, ಆ ಮದುವೆಯನ್ನು ಲವ್ ಜಿಹಾದ್ ಎಂದು ಸನೋಜ್ ಮಿಶ್ರಾ ಬಿಂಬಿಸುತ್ತಿದ್ದಾರೆ. ನಮ್ಮ ಬಗ್ಗೆ ನಕಾರಾತ್ಮಕವಾಗಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಪತಿ ಫರ್ಮಾನ್ ಖಾನ್‌ಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ. ನಾವು ಕೇರಳದಿಂದ ಹೊರಗೆ ಹೋಗಲು ಭಯವಾಗುತ್ತಿದೆ" ಎಂದು ಮೋನಾಲಿಸಾ ಆರೋಪ ಮಾಡಿದ್ದಾರೆ.
ಸನೋಜ್ ಮಿಶ್ರಾ ವಿರುದ್ಧ ಮೊನಾಲಿಸಾ ಇನ್ನೂ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿಲ್ಲ. ಆದರೆ, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಪೋಕ್ಸೋ ಕಾಯಿದೆಯಡಿ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.