ʻಅವಳು ಹಿಂದೂವಾಗಿಯೇ ಇರುತ್ತಾಳೆ, ನಾನು ಮುಸ್ಲಿಂ ಆಗಿರುತ್ತೇನೆ, ಇಲ್ಲಿ ಲವ್ ಜಿಹಾದ್ ಪ್ರಶ್ನೆಯೇ ಇಲ್ಲʼ; ಮೊನಾಲಿಸಾ ಪತಿ ಫರ್ಮಾನ್ ಖಾನ್ ಸ್ಪಷ್ಟನೆ
Monalisa Bhosle Marriage Controversy: ಮಹಾಕುಂಭಮೇಳದಲ್ಲಿ ಗಮನಸೆಳೆದಿದ್ದ ಮೊನಾಲಿಸಾ ಭೋಂಸ್ಲೆ ಮತ್ತು ನಟ ಫರ್ಮಾನ್ ಖಾನ್ ಕೇರಳದಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದು, 'ಲವ್ ಜಿಹಾದ್' ಆರೋಪ ಕೇಳಿಬಂದಿವೆ. ಆದರೆ ಈ ಜೋಡಿ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ..
-
ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಎಲ್ಲರ ಗಮನಸೆಳೆದ ಮೊನಾಲಿಸಾ ಭೋಂಸ್ಲೆ ಇದೀಗ ನಟ ಫರ್ಮಾನ್ ಖಾನ್ ಜೊತೆಗೆ ಕೇರಳದಲ್ಲಿ ಮದುವೆಯಾಗಿದ್ದಾರೆ. ಇದೊಂದು ಅಂತರ್ಧರ್ಮೀಯ ವಿವಾಹವಾಗಿದ್ದು, ಅದನ್ನು ಈ ಜೋಡಿ ಸಮರ್ಥಿಸಿಕೊಂಡಿದೆ. ಇಂದೋರ್ ಮೂಲದವರಾದ ಮೊನಾಲಿಸಾ ಅವರು, ತಮ್ಮ ಮದುವೆಯ ಸುತ್ತ ಕೇಳಿಬರುತ್ತಿರುವ 'ಲವ್ ಜಿಹಾದ್' ಆರೋಪಗಳನ್ನು ತಳ್ಳಿಹಾಕಿದ್ದಲ್ಲದೆ, "ನಾವಿಬ್ಬರೂ ಕೂಡ ಮತಾಂತರಗೊಂಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಫರ್ಮಾನ್ ಜೊತೆ ಮದುವೆಯಾಗಲು ಹಠ ಹಿಡಿದಿದ್ದೆ
ಇಂದು (ಮಾ.12) ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮೊನಾಲಿಸಾ, "ನಾನು ಫರ್ಮಾನ್ ಅವರನ್ನು ಮದುವೆಯಾಗುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿದೆ. ಆರಂಭದಲ್ಲಿ ಫರ್ಮಾನ್ ಮದುವೆಗೆ ಹಿಂಜರಿದಿದ್ದರೂ ಸಹ, ನಾನೇ ಹಠ ಹಿಡಿದು ಅವರನ್ನು ಮದುವೆಯಾದೆ. ನನ್ನ ಅತ್ತೆಯ ಮಗನ ಜೊತೆ ನನಗೆ ಮದುವೆ ಮಾಡಲು ನನ್ನ ಪೋಷಕರು ಬಯಸಿದ್ದರು, ಆದರೆ ನನಗೆ ಆ ಮದುವೆ ಕೊಂಚವೂ ಇಷ್ಟವಿರಲಿಲ್ಲ" ಎಂದು ಮೊನಾಲಿಸಾ ಸ್ಪಷ್ಟಪಡಿಸಿದ್ದಾರೆ.
ಅಪ್ಪನಿಗೆ ನನ್ನ ಮೇಲೆ ಕೋಪ ಇದೆ
"ನನ್ನ ಜೊತೆಗೆ ತಂದೆ ಕೇರಳಕ್ಕೆ ಬಂದಿದ್ದಾರೆ. ಆದರೆ ಅವರು ನನ್ನ ಮದುವೆಯಲ್ಲಿ ಪಾಲ್ಗೊಳ್ಳಲಿಲ್ಲ. ಅವರಿಗೆ ಇನ್ನೂ ನನ್ನ ಮೇಲೆ ಕೋಪ ಇದೆ. ಮುಂದಿನ ದಿನಗಳಲ್ಲಿ ಅವರನ್ನು ಒಪ್ಪಿಸಲು ಪ್ರಯತ್ನಿಸುತ್ತೇವೆ" ಎಂದು ಇದೇ ವೇಳೆ ಮೊನಾಲಿಸಾ ತಿಳಿಸಿದ್ದಾರೆ. ಅಂದಹಾಗೆ, ಈ ಮದುವೆಯು ಹಿಂದೂ ಸಂಪ್ರದಾಯದ ಪ್ರಕಾರ ದೇವಸ್ಥಾನದಲ್ಲಿ ಮದುವೆ ನಡೆದಿದೆ. ಇದು ಮೊನಾಲಿಸಾ ಅವರ ಇಚ್ಛೆ ಆಗಿತ್ತಂತೆ.
ಫರ್ಮಾನ್ ಖಾನ್ ಯಾರು?
ಫರ್ಮಾನ್ ಖಾನ್ ಮೂಲತಃ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯವರು. ಅವರು ಕೂಡ ಕಲಾವಿದರಾಗಿದ್ದು, ಮದುವೆ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. "ಈ ಮದುವೆಯಲ್ಲಿ ಮತಾಂತರ ನಡೆದಿದೆ, ಮೊನಾಲಿಸಾ ಇನ್ನೂ ಅಪ್ರಾಪ್ತವಯಸ್ಕಳು ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ಹರಡಿರುವೆ. ಅವೆಲ್ಲವೂ ಸುಳ್ಳು. ನಮ್ಮಿಬ್ಬರಲ್ಲಿ ಯಾರೂ ಧರ್ಮ ಬದಲಿಸಿಲ್ಲ. ಅವಳು ಹಿಂದೂವಾಗಿಯೇ ಇದ್ದಾಳೆ, ನಾನು ಮುಸ್ಲಿಂ ಆಗಿಯೇ ಇದ್ದೇನೆ. ಪ್ರೀತಿಯಲ್ಲಿ ಮತಾಂತರದ ಅಗತ್ಯವಿಲ್ಲ. ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ" ಎಂದು ಫರ್ಮಾನ್ ಖಾನ್ ಹೇಳಿದ್ದಾರೆ.
ಈ ನಡುವೆ ಮೊನಾಲಿಸಾ ಅಪ್ರಾಪ್ತವಯಸ್ಕಳು ಎಂಬ ಆರೋಪಕ್ಕೆ ಪ್ರತಿಯಾಗಿ ಫರ್ಮಾನ್ ಅವರು ಮೊನಾಲಿಸಾ ಅವರ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರವನ್ನು ಮಾಧ್ಯಮಗಳಿಗೆ ನೀಡಿದ್ದಾರೆ. "ಮೊನಾಲಿಸಾ ಪ್ರಾಪ್ತವಯಸ್ಕಳು. ನಾವು ಕೇರಳ ಸರ್ಕಾರದ K-SMART ಆಪ್ ಮೂಲಕ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಿದ್ದೇವೆ" ಎಂದು ಫರ್ಮಾನ್ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ & ಫರ್ಮಾನ್
VIDEO | Thiruvananthapuram, Kerala: “I got married according to Hindu rituals. It is not ‘love jihad’. I respect all religions and consider every religion equal,” says Viral Mahakumbh girl Monalisa.
— Press Trust of India (@PTI_News) March 12, 2026
(Full video available on https://t.co/n147TvrpG7) pic.twitter.com/LFNk6GzGMC
ಸಿನಿಮಾ ಸೆಟ್‌ನಲ್ಲಿ ಅರಳಿದ ಪ್ರೀತಿ
ಸುಮಾರು ಆರು ತಿಂಗಳ ಹಿಂದೆ ಮಲಯಾಳಂನ ಪಿ. ಬಿನ್ ವರ್ಗೀಸ್ ನಿರ್ದೇಶನದ 'ನಾಗಮ್ಮ' ಚಿತ್ರದ ಮುಹೂರ್ತದ ವೇಳೆ ಫರ್ಮಾನ್ ಮತ್ತು ಮೊನಾಲಿಸಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಚಿತ್ರದಲ್ಲಿ ಫರ್ಮಾನ್ ಖಾನ್ ಖಳನಾಯಕನಾಗಿ ನಟಿಸುತ್ತಿದ್ದರೆ, ಮೊನಾಲಿಸಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಸೆಟ್‌ನಲ್ಲಿಯೇ ಇಬ್ಬರ ನಡುವೆ ಪ್ರೀತಿ ಚಿಗುರಿ, ಇದೀಗ ಮದುವೆಯಾಗಿದ್ದಾರೆ.
ಕೇರಳ ಜನರ ಬೆಂಬಲಕ್ಕೆ ಧನ್ಯವಾದ ಹೇಳಿದ ದಂಪತಿ
ಕೇರಳದ ಜನರು ನೀಡುತ್ತಿರುವ ಬೆಂಬಲಕ್ಕೆ ಮೊನಾಲಿಸಾ ಮತ್ತು ಫರ್ಮಾನ್ ಸಂತಸ ವ್ಯಕ್ತಪಡಿಸಿದರು. "ಕೇರಳದ ಜನರು ತುಂಬಾ ಸಹಕಾರ ನೀಡುತ್ತಿದ್ದಾರೆ. ಮೊನಾಲಿಸಾ ಇಷ್ಟಪಟ್ಟರೆ ಇಲ್ಲೇ ವಾಸಿಸುವ ಆಲೋಚನೆ ಇದೆ" ಎಂದು ಫರ್ಮಾನ್ ಹೇಳಿದ್ದಾರೆ.