ಕಳೆದ ವರ್ಷ ನಡೆದ ಮಹಾಕುಂಭಮೇಳದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಭೋಂಸ್ಲೆ ಸಾಕಷ್ಟು ವೈರಲ್ ಆಗಿದ್ದರು. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಸರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ, ತಮ್ಮ ವಿಶಿಷ್ಠ ಕಣ್ಣುಗಳಿಂದಲೇ ಫೇಮಸ್ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕುಂಭಮೇಳ ಗರ್ಲ್ ಎಂದೇ ಫೇಮಸ್ ಆಗಿದ್ದ ಮೊನಾಲಿಸಾ ಇದೀಗ ಕೇರಳದಲ್ಲಿ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಜೊತೆಗೆ ಮದುವೆ ಆಗಿದ್ದಾರೆ.
ಕುಟುಂಬದವರ ವಿರೋಧ
ಫರ್ಮಾನ್ ಖಾನ್ ಜೊತೆಗೆ ಕಳೆದ ಆರು ತಿಂಗಳಿನಿಂದ ಪ್ರೀತಿಯಲ್ಲಿದ್ದ ಮೊನಾಲಿಸಾ ಅವರು, ಮದುವೆಗೂ ಮುನ್ನ ಕೇರಳ ಪೊಲೀಸರ ಮೊರೆ ಹೋಗಿದ್ದರು. ಹೌದು, ಮೊನಾಲಿಸಾ ಮತ್ತು ಫರ್ಮಾನ್ ತಿರುವನಂತಪುರಂ ಪೊಲೀಸರನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದರು.
Monalisa: ಕುಂಭಮೇಳದ ವೈರಲ್ ಸ್ಟಾರ್ ಮೊನಾಲಿಸಾ ಸಿನಿಮಾದಲ್ಲಿ ಭರ್ಜರಿ ಆಫರ್!
"ತನ್ನ ತಂದೆ ವಿಜಯ್ ಸಿಂಗ್ ಭೋಂಸ್ಲೆ ಅವರು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ" ಎಂದು ಮೊನಾಲಿಸಾ ಆರೋಪಿಸಿದ್ದರು. ಮೊನಾಲಿಸಾ ಅವರ ತಂದೆ ಕೇರಳಕ್ಕೆ ಬಂದು ಆಕೆಯನ್ನು ಕರೆದೊಯ್ಯಲು ಪ್ರಯತ್ನಿಸಿದರಾದರೂ, ಆಕೆ ಬರಲು ನಿರಾಕರಿಸಿದರು. ಮೊನಾಸಲಿಗೆ ಈಗ 18 ವರ್ಷ ತುಂಬಿರುವುದರಿಂದ ಅವರಿಗೆ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ಮದುವೆ ಆಗಿದ್ದು ಎಲ್ಲಿ?
ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್ ದೇಗುಲದಲ್ಲಿ ಇಂದು ಸಂಜೆ 5.30ಕ್ಕೆ ಮೊನಾಲಿಸಾ ಮತ್ತು ಫರ್ಮಾನ್ ಮದುವೆ ನಡೆದಿದೆ. ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ಮತ್ತು ರಾಜಕೀಯ ನಾಯಕರ ಸಮ್ಮುಖದಲ್ಲಿ ಈ ವಿವಾಹ ಜರುಗಿದ್ದು, ವಧು ಮೊನಾಲಿಸಾ ಕೆಂಪು ಸೀರೆಯಲ್ಲಿ ಮಿಂಚಿದರೆ, ವರ ಫರ್ಮಾನ್ ಖಾನ್ ಬಿಳಿ ಶರ್ಟ್ ಮತ್ತು ಪಂಚೆ ಧರಿಸಿದ್ದರು. ದೇವಸ್ಥಾನದ ಸಂಪ್ರದಾಯದಂತೆ ವಿವಾಹ ವಿಧಿವಿಧಾನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮಗಳಿಗೆ ಮೊನಾಲಿಸಾ ಹೇಳಿದ್ದೇನು?
ಮದುವೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೊನಾಲಿಸಾ, "ನಮಗೆ ಕೇರಳ ರಾಜ್ಯವೆಂದರೆ ತುಂಬಾ ಇಷ್ಟ, ಹಾಗಾಗಿ ಇಲ್ಲೇ ಮದುವೆಯಾಗಲು ನಿರ್ಧರಿಸಿದೆವು," ಎಂದರೆ, ವರ ಫರ್ಮಾನ್, "ನಮ್ಮದು ಆರು ತಿಂಗಳ ಲವ್ ಸ್ಟೋರಿ. ಆದರೆ ನಮಗೆ ಇದು 60 ವರ್ಷಗಳ ಸಂಬಂಧದಂತೆ ಭಾಸವಾಗುತ್ತಿದೆ. ನಾನು ಕೂಡ ಒಬ್ಬ ನಟ.." ಎಂದು ಹೇಳಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮತ್ತು ಸಂಸದ ಎ.ಎ. ರಹೀಂ ಪಾಲ್ಗೊಂಡಿದ್ದರು.
ಮೊನಾಲಿಸಾ ಮದುವೆ ವಿಡಿಯೋ
ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿರುವ ಮೊನಾಲಿಸಾ
ಕುಂಭಮೇಳದಲ್ಲಿ ವೈರಲ್ ಆದಮೇಲೆ ಮೊನಾಲಿಸಾಗೆ ಅನೇಕ ಸಿನಿಮಾ ಆಫರ್‌ಗಳು ಬಂದವು. ಅದೇ ರೀತಿ ನಾಗಮ್ಮ ಎಂಬ ಚಿತ್ರದ ಮೂಲಕ ಅವರು ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಪಿ. ಬಿನ್. ವರ್ಗೀಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಚಿತ್ರೀಕರಣಕ್ಕಾಗಿ ಕೇರಳದ ಪೂವರ್‌ಗೆ ಆಗಮಿಸಿದ್ದ ಮೊನಾಲಿಸಾ, ಅಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.