ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಗ್ರ್ಯಾಂಡ್ ಎಂಟ್ರಿ; ‘ಭಾವಾಂತರ’ ಚಿತ್ರದಲ್ಲಿ ಡಾಕ್ಯುಮೆಂಟರಿ ಮೇಕರ್ ರಾಧಾ!

Tanvi Rao: ‘ಭಾವಾಂತರ’ ಚಿತ್ರದ ಮೂಲಕ ತನ್ವಿ ರಾವ್ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದು, ಕಿರುತೆರೆಯ ಜನಪ್ರಿಯತೆ ಬಳಿಕ ಹಿರಿತೆರೆಯಲ್ಲಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಕಾರ್ತಿಕ್ ಶರ್ಮಾ ನಿರ್ದೇಶನದ ಭಾವಾಂತರ ಚಿತ್ರದಲ್ಲಿ ಡಾಕ್ಯುಮೆಂಟರಿ ಮೇಕರ್ ರಾಧಾ ಆಗಿ ಬಣ್ಣಹಚ್ಚಿದ್ದಾರೆ. ಈ ಹಿಂದೆ ಹಿಂದಿ ಸಿನಿಮಾಗಳಲ್ಲೂ ನಟಿಸಿ, ಶಾಸ್ತ್ರೀಯ ನೃತ್ಯದಲ್ಲೂ ಸೈ ಎನಿಸಿಕೊಂಡಿರುವ ಇವರು, ವಿಶಿಷ್ಟ ಕಥಾಹಂದರ ಹಾಗೂ ಮಹತ್ವಾಕಾಂಕ್ಷೆಯ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ನೂತನ ಪಯಣ ಆರಂಭಿಸಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ನಟಿ ತನ್ವಿ ರಾವ್ ಇದೀಗ ಸ್ಯಾಂಡಲ್‌ವುಡ್ ಅಂಗಳಕ್ಕೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ 'ರಾಧೇಶ್ಯಾಮ' ಧಾರಾವಾಹಿ ಸೇರಿದಂತೆ ಬಾಲಿವುಡ್‌ನ 'ಗುಲಾಬ್ ಗ್ಯಾಂಗ್', 'ಗುಲ್‌ಮೊಹರ್' ಹಾಗೂ 'ಗನ್ಸ್ ಆಫ್ ಬನಾರಸ್' ಚಿತ್ರಗಳಲ್ಲಿ ಅಭಿನಯಿಸಿ ಗಮನಸೆಳೆದಿರುವ ಇವರು, ನೃತ್ಯರಂಗದಲ್ಲೂ ಗುರುತಿಸಿಕೊಂಡು ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

ಬಹುತೇಕ ಕಲಾವಿದರು ಪ್ರಾದೇಶಿಕ ಚಿತ್ರರಂಗದಿಂದ ಬಾಲಿವುಡ್‌ನತ್ತ ಮುಖಮಾಡಿದರೆ, ತನ್ವಿ ರಾವ್ ಶಾಲಾ ದಿನಗಳಲ್ಲೇ ಬಾಲಿವುಡ್‌ ಪ್ರವೇಶಿಸಿ, ಬಳಿಕ ಕಿರುತೆರೆಯಲ್ಲಿ ಛಾಪು ಮೂಡಿಸಿ, ಇದೀಗ ಕನ್ನಡ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಹಿರಿತೆರೆಗೆ ಬಡ್ತಿ ಪಡೆದಿರುವುದು ವಿಶೇಷ.

ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ

ಪ್ರತಿಭಾವಂತ ನಟ, ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ 'ಭಾವಾಂತರ' ಚಿತ್ರದ ಮೂಲಕ ತನ್ವಿ ರಾವ್ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ. ಚಿತ್ರದ ಆಯ್ಕೆ ಕುರಿತು ಮಾತನಾಡಿರುವ ನಟಿ, "ಕಾರ್ತಿಕ್ ಶರ್ಮಾ ಅವರು 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ನನ್ನ ನಟನೆ ನೋಡಿ ಗುರುತಿಸಿದ್ದರು. ನಂತರ ನನ್ನನ್ನು ಸಂಪರ್ಕಿಸಿ ಕಥೆ ವಿವರಿಸಿದರು. ಇಂತಹ ವಿಶಿಷ್ಟ ಹಾಗೂ ಇಷ್ಟೊಂದು ಡೆಪ್ತ್‌ ಇರುವ ಕಥೆಯನ್ನು ನಾನು ಈ ಹಿಂದೆ ಎಂದೂ ಕೇಳಿರಲಿಲ್ಲ. ಹಾಗಾಗಿ ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ. ಸ್ವಲ್ಪ ಸಮಯ ತೆಗೆದುಕೊಂಡು ಕಥೆ ಮತ್ತು ಪಾತ್ರದ ಸ್ವರೂಪದ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಿದೆವು. ಮೊದಲ ಹೆಜ್ಜೆಯಲ್ಲೇ ನನಗೆ ಹೇಳಿಮಾಡಿಸಿದಂತಹ ಅದ್ಭುತ ಕಥೆ ಮತ್ತು ಮಹತ್ವಾಕಾಂಕ್ಷೆಯ ಪಾತ್ರ ಸಿಕ್ಕಿರುವುದು ಅಪಾರ ಸಂತಸ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ʻಭಾವಾಂತರʼ ಚಿತ್ರದ ಮೂಲಕ ಹೊಸ ಸಾಹಸಕ್ಕೆ ಮುಂದಾದ ಸಂಗೀತ ನಿರ್ದೇಶಕ ಕಾರ್ತಿಕ್‌ ಶರ್ಮಾ; ಸಾಥ್‌ ನೀಡಿದ ʻಹೊಂಬಾಳೆ ಫಿಲ್ಮ್ಸ್‌ʼ

ಈ ಸಿನಿಮಾದಲ್ಲಿ ನಾನು ಡಾಕ್ಯುಮೆಂಟರಿ ಫಿಲ್ಮ್ ಮೇಕರ್

ಈ ಚಿತ್ರದಲ್ಲಿ ತನ್ವಿ ರಾವ್ 'ರಾಧಾ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ಬೆಳಕು ಚೆಲ್ಲಿದ ಅವರು, "ಚಿತ್ರದಲ್ಲಿ ನನ್ನ ಪಾತ್ರ ರಾಧಾ ಒಬ್ಬ ಮಹತ್ವಾಕಾಂಕ್ಷೆಯ, ಎಲ್ಲದರಲ್ಲೂ ಪರಿಪೂರ್ಣತೆ ಬಯಸುವ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ವೃತ್ತಿ ಬದುಕಿನ ಬಗ್ಗೆ ಅಪಾರ ಬದ್ಧತೆ, ಪ್ರೀತಿ ಹೊಂದಿರುವ ಆಕೆ, ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿಡಲು ಬಯಸುವ ಸ್ವಭಾವದವಳು. ಹೊಸ ಕಥೆಗಳನ್ನು ಹುಡುಕುವುದು ಆಕೆಗೆ ಅಚ್ಚುಮೆಚ್ಚು. ಅಂತಹ ಆಕೆಯ ಬದುಕಿನಲ್ಲಿ ಒಂದು ಅನಿರೀಕ್ಷಿತ ತಿರುವು ಎದುರಾಗುತ್ತದೆ; ಅದರ ಸುತ್ತಮುತ್ತಲಿನ ಮಹತ್ವದ ವಿದ್ಯಮಾನಗಳೇ ‘ಭಾವಾಂತರ’ ಚಿತ್ರದ ಕಥಾಹಂದರ" ಎಂದು ಹೇಳಿದ್ದಾರೆ.

ಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ

ಚಿತ್ರೀಕರಣಕ್ಕೂ ಮುನ್ನ ನಡೆದ ತಾಲೀಮು ಮತ್ತು ಸಿದ್ಧತೆಗಳ ಕುರಿತು ಮಾತನಾಡಿದ ತನ್ವಿ, "ಚಿತ್ರೀಕರಣ ಆರಂಭಕ್ಕೂ ಮುನ್ನ ಹಲವು ದಿನಗಳ ಕಾಲ ನಟನೆ ಮತ್ತು ಪಾತ್ರದ ವರ್ಕ್‌ಶಾಪ್ ನಡೆಸಿದೆವು. ನಿರ್ದೇಶಕ ಕಾರ್ತಿಕ್ ಶರ್ಮಾ ಅವರು ನಮ್ಮಿಂದ ಅತ್ಯುತ್ತಮ ಅಭಿನಯವನ್ನು ಹೊರತೆಗೆಯಲು ಅಗತ್ಯ ತರಬೇತಿ ನೀಡಿದರು. ಪಾತ್ರದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಆಳವಾದ ಅಧ್ಯಯನ ನಡೆಸಲಾಯಿತು. ಪ್ರತಿಯೊಂದು ದೃಶ್ಯ ಹಾಗೂ ಸಂಭಾಷಣೆಯ ಬಗ್ಗೆ ಸಾಕಷ್ಟು ಚರ್ಚಿಸಿ ಕೆಲಸ ಮಾಡಿದ್ದೇವೆ. ಕಾರ್ತಿಕ್ ಕೆಲಸದಲ್ಲಿ ಎಷ್ಟೇ ಶಿಸ್ತಿನಿಂದ ತೊಡಗಿಸಿಕೊಂಡಿದ್ದರೂ, ಸೆಟ್‌ನಲ್ಲಿ ಸದಾ ಕೂಲ್ ಆಗಿರುತ್ತಾರೆ. ನಿರ್ದಿಷ್ಟ ಚೌಕಟ್ಟಿಗೆ ಕಲಾವಿದರನ್ನು ಕಟ್ಟಿಹಾಕದೆ, ಅವರೊಳಗಿನ ಪ್ರತಿಭೆ ಸಹಜವಾಗಿ ಹೊರಹೊಮ್ಮಲು ಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ರಿಯಲ್ ಲೊಕೇಶನ್‌ನಲ್ಲೇ ಚಿತ್ರೀಕರಣ ನಡೆಸಿರುವುದು ಚಿತ್ರದ ಮತ್ತೊಂದು ವಿಶೇಷ" ಎಂದಿದ್ದಾರೆ.