ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಭಾವಾಂತರʼ ಚಿತ್ರದ ಮೂಲಕ ಹೊಸ ಸಾಹಸಕ್ಕೆ ಮುಂದಾದ ಸಂಗೀತ ನಿರ್ದೇಶಕ ಕಾರ್ತಿಕ್‌ ಶರ್ಮಾ; ಸಾಥ್‌ ನೀಡಿದ ʻಹೊಂಬಾಳೆ ಫಿಲ್ಮ್ಸ್‌ʼ

ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು, ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಮೂಲಕ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ನಿರ್ದೇಶನದ ಚೊಚ್ಚಲ ಚಿತ್ರ ‘ಭಾವಾಂತರ’ದ ಆಡಿಯೋ ಹಕ್ಕುಗಳನ್ನು ಖರೀದಿಸಿ ಬೆನ್ನೆಲುಬಾಗಿ ನಿಂತಿದೆ.

ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಈಗ ಡೈರೆಕ್ಟರ್; ಸಾಥ್‌ ನೀಡಿದ ʻಹೊಂಬಾಳೆʼ

-

Avinash GR
Avinash GR May 31, 2026 6:09 PM

ಸ್ಯಾಂಡಲ್‌ವುಡ್‌ನಲ್ಲಿ ಬಾಲನಟನಾಗಿ ಹಾಗೂ ಜನಪ್ರಿಯ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಪ್ರತಿಭೆ ಕಾರ್ತಿಕ್ ಶರ್ಮ, ಈಗ ‘ಭಾವಾಂತರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಕನ್ನಡದ ಹೆಮ್ಮೆಯ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ತನ್ನದೇ ಆದ ‘ಹೊಂಬಾಳೆ ಮ್ಯೂಸಿಕ್’ ಆಡಿಯೋ ಲೇಬಲ್ ಮೂಲಕ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿ, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದೆ.

ನಟನೆ, ಸಂಗೀತ ನಿರ್ದೇಶನದಲ್ಲಿ ಸೈ ಎನಿಸಿಕೊಂಡ ಕಾರ್ತಿಕ್

ಹಿಂದೆ `ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಭಿನಯದ ‘ವೀರ ಕನ್ನಡಿಗ’, ಖುಷ್ಬೂ ನಟನೆಯ ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಬಾಲನಟನಾಗಿ ಮಿಂಚಿದ್ದ ಕಾರ್ತಿಕ್ ಶರ್ಮ, ಕೇವಲ ನಟನೆಯಷ್ಟೇ ಅಲ್ಲದೆ ಸಂಗೀತ ಲೋಕದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ನೂರಕ್ಕೂ ಹೆಚ್ಚು ಜನಪ್ರಿಯ ಟಿವಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಿಗೆ ಇವರು ಸಂಗೀತ ಸಂಯೋಜಿಸಿದ್ದಾರೆ. ಇದೀಗ ಚಿತ್ರರಂಗದಲ್ಲಿ ತಮಗಿರುವ ಸುದೀರ್ಘ ಅನುಭವವನ್ನು ಧಾರೆ ಎರೆದು ‘ಭಾವಾಂತರ’ ಸಿನಿಮಾವನ್ನು ಸಿದ್ದಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಜೊತೆ ಪ್ರಶಾಂತ್‌ ನೀಲ್‌ ಮೊದಲು ಕೈಜೋಡಿಸಿದ್ದು ʻಕೆಜಿಎಫ್‌ʼ ಸಿನಿಮಾಕ್ಕಾಗಿ ಅಲ್ಲ; ಅಪ್ಪು ಜೊತೆ ಮಾಡಬೇಕಿದ್ದ ಆ ಪ್ರಾಜೆಕ್ಟ್‌ ಏನಾಯ್ತು?

ದಕ್ಷಿಣ ಭಾರತದಲ್ಲೇ ಮೊದಲ ಪ್ರಯೋಗ

ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅವರು, "ದಕ್ಷಿಣ ಭಾರತದ ಚಿತ್ರರಂಗದಲ್ಲೇ ಈ ರೀತಿಯ ವಿಶಿಷ್ಟವಾದ ಕಥಾಹಂದರ ಈವರೆಗೂ ಬಂದಿಲ್ಲ. ಅಷ್ಟು ಅಪರೂಪವಾದ ಮತ್ತು ನೈಜತೆಗೆ ಹತ್ತಿರವಾದ ಎಳೆಯನ್ನು ಈ ಚಿತ್ರ ಹೊಂದಿದೆ. ಚಿತ್ರದಲ್ಲಿ ನಾನೇ ಸಂಗೀತ ನೀಡಿದ ಐದು ಹಾಡುಗಳಿದ್ದು, ಅವುಗಳನ್ನು ಹೊಂಬಾಳೆ ಮ್ಯೂಸಿಕ್ ಸಂಸ್ಥೆ ಹೆಮ್ಮೆಯಿಂದ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ಚಿತ್ರದ ಆಕರ್ಷಕ ಟೀಸರ್‌ಗೆ ನಿರೀಕ್ಷೆಗೂ ಮೀರಿದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಆದಷ್ಟು ಬೇಗ ತೆರೆಮೇಲೆ ಬರಲಿದೆ ʻಭಾವಾಂತರʼ

ಈಗಾಗಲೇ ಚಿತ್ರೀಕರಣದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ‘ಭಾವಾಂತರ’ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಕರಾವಳಿಯ ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನ ಸುಂದರ ತಾಣಗಳಲ್ಲಿ ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಚಿತ್ರದಲ್ಲಿ ಕಾರ್ತಿಕ್ ಶರ್ಮ ಅವರೊಂದಿಗೆ ಖ್ಯಾತ ನಟಿ ತನ್ವಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಜೊತೆ ಕೈಜೋಡಿಸುತ್ತಾರಾ ಜೂ. ಎನ್‌ಟಿಆರ್? ತಾರಕ್‌ ಜನ್ಮದಿನದಂದೇ ಸಿಕ್ತಾ ದೊಡ್ಡ ಸುಳಿವು?

ಕಿಕ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಈ ವಿಭಿನ್ನ ಚಿತ್ರ ನಿರ್ಮಾಣವಾಗಿದ್ದು, ತಾರಾಗಣದಲ್ಲಿ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಮತ್ತು ಭಾನು ಮುಂತಾದ ಪ್ರತಿಭಾನ್ವಿತ ಕಲಾವಿದರು ಬಣ್ಣ ಹಚ್ಚಿದ್ದಾರೆ. ತಾಂತ್ರಿಕ ತಂಡದಲ್ಲಿ ಸಾಗರ್ ಅತ್ದ್ಕರ್ ಅವರ ಸಿನಿಮಾಟೋಗ್ರಫಿ ಹಾಗೂ ಆಶೀಷ್ ಹುಲಕುಂದ್ ಅವರ ಸಂಕಲನ ಚಿತ್ರಕ್ಕಿದೆ. ಒಟ್ಟಾರೆಯಾಗಿ, ಹೊಂಬಾಳೆ ಸಂಸ್ಥೆಯ ಬೆಂಬಲದೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಬರುತ್ತಿರುವ ‘ಭಾವಾಂತರ’ ಸಿನಿಮಾ ಕುತೂಹಲ ಮೂಡಿಸಿದೆ.