ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSMB 29: ರಾಜಮೌಳಿ-ಮಹೇಶ್‌ ಬಾಬು ಕಾಂಬಿನೇಷನ್‌ ಚಿತ್ರದ ಬಜೆಟ್‌ ರಿವೀಲ್‌; ಈ ಮೊತ್ತದಲ್ಲಿ 4 ʼಬಾಹುಬಲಿʼಯಂತಹ ಸಿನಿಮಾ ನಿರ್ಮಿಸಬಹುದು!

Mahesh Babu: ಸದ್ಯ ಜಾಗತಿಕ ಸಿನಿರಸಿಕರ ಗಮನ ಸೆಳೆದ ಚಿತ್ರಗಳಲ್ಲಿ ಮಹೇಶ್‌ ಬಾಬು-ಎಸ್.ಎಸ್‌. ರಾಜಮೌಳಿ ಕಾಂಬಿನೇಷನ್‌ನ ಸಿನಿಮಾವೂ ಒಂದು. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಸದ್ಯ ಸಿನಿಮಾ ತಂಡ ಕೀನ್ಯಾದಲ್ಲಿ ಬೀಡುಬಿಟ್ಟಿದೆ. ಈ ಮಧ್ಯೆ ಚಿತ್ರದ ಬಜೆಟ್‌ ರಿವೀಲ್‌ ಆಗಿದೆ.

ರಾಜಮೌಳಿ-ಮಹೇಶ್‌ ಬಾಬು ಕಾಂಬಿನೇಷನ್‌ ಚಿತ್ರದ ಬಜೆಟ್‌ ರಿವೀಲ್‌

-

Ramesh B Ramesh B Sep 3, 2025 8:09 PM

ಹೈದರಾಬಾದ್‌: ತೆರೆಮೇಲೆ ಮ್ಯಾಜಿಕ್‌ ಸೃಷ್ಟಿಸಿ ವೀಕ್ಷಕರ ಮುಂದೆ ಹೊಸದೊಂದು ಲೋಕವನ್ನೇ ತೆರೆದಿಡುವ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ (SS Rajamouli) ಇದೀಗ ಮೊದಲ ಬಾರಿ ಮಹೇಶ್‌ ಬಾಬು (Mahesh Babu) ಜತೆ ಕೈಜೋಡಿಸಿದ್ದಾರೆ. ಟೈಟಲ್‌ ಇನ್ನೂ ಅಂತಿಮವಾಗದ ಈ ಚಿತ್ರ ʼಎಸ್‌ಎಸ್‌ಎಂಬಿ 29ʼ (SSMB 29) ಹೆಸರಿನಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ. ಅದ್ಧೂರಿಯಾಗಿ ಸಿನಿಮಾವನ್ನು ಕಟ್ಟಿಕೊಡಲು ರಾಜಮೌಳಿ ಮುಂದಾಗಿದ್ದು, ಮೇಕಿಂಗ್‌ನಲ್ಲಿ ತಮ್ಮ ಹಿಂದಿನ ʼಬಾಹುಬಲಿʼ ಸರಣಿ ಚಿತ್ರವನ್ನೂ ಮೀರಿ ಪ್ರೇಕ್ಷಕರ ಎದುರು ಹೊಸದೊಂದು ಜಗತ್ತನ್ನು ಅನಾವರಣಗೊಳಿಸಲಿದ್ದಾರೆ. ಭಾರತದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ದಕ್ಷಿಣ ಆಫ್ರಿಕಾದ ಕೀನ್ಯಾದಲ್ಲಿ ಬೀಡುಬಿಟ್ಟಿದೆ. ಈ ಮಧ್ಯೆ ಚಿತ್ರದ ಬಜೆಟ್‌ ರಿವೀಲ್‌ ಆಗಿದ್ದು, ಇದನ್ನು ತಿಳಿದು ಇಡೀ ಸಿನಿಜಗತ್ತೇ ದಂಗಾಗಿದೆ.

ಕೀನ್ಯಾದ ವಿದೇಶ ವ್ಯವಹಾರ ಖಾತೆಯ ಕಾರ್ಯದರ್ಶಿ ಮುಸಾಲಿಯಾ ಮುದಾವಾಡಿ ಅವರನ್ನು ರಾಜಮೌಳಿ ಹಾಗೂ ಚಿತ್ರತಂಡದವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೀನ್ಯಾದಲ್ಲಿ ಚಿತ್ರೀಕರಣ ನಡೆಸಿದ ಅನುಭವದ ಬಗ್ಗೆ ರಾಜಮೌಳಿ ಈ ಸಮಯದಲ್ಲಿ ಮಾತನಾಡಿದ್ದಾರೆ. ಇದೀಗ ಕೀನ್ಯಾದ ವೆಬ್‌ಸೈಟ್‌ ದಿ ಸ್ಟಾರ್‌ (The Star) ಚಿತ್ರದ ಬಜೆಟ್‌ ಗುಟ್ಟನ್ನು ರಿವೀಲ್‌ ಮಾಡಿದೆ.



ಈ ಸುದ್ದಿಯನ್ನೂ ಓದಿ: Mahesh Babu: ರಕ್ತಸಿಕ್ತ ಮೈ, ಕೊರಳಲ್ಲಿ ತ್ರಿಶೂಲದ ಹಾರ; ಮಹೇಶ್‌ ಬಾಬು-ರಾಜಮೌಳಿ ಚಿತ್ರದ ಫಸ್ಟ್‌ ಲುಕ್‌ ಔಟ್‌

ಬಜೆಟ್‌ ಎಷ್ಟು?

ʼಎಸ್‌ಎಸ್‌ಎಂಬಿ 29' ಬರೋಬ್ಬರಿ 1,188 ಕೋಟಿ ರೂ. ($135 million) ಬಜೆಟ್‌ನಲ್ಲಿ ತಯಾರಾಗಲಿದೆ ಎಂದು ವೆಬ್‌ಸೈಟ್‌ ತಿಳಿಸಿದೆ. ಆ ಮೂಲಕ ಇದು ಏಷ್ಯಾದ ಅತೀ ದುಬಾರಿ ಚಿತ್ರಗಳಲ್ಲಿ ಒಂದು ಎನಿಸಿಕೊಳ್ಳಲಿದೆ. ಈ ಹಿಂದೆ ಸಿನಿಮಾ 1,022 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ ಎನ್ನಲಾಗಿತ್ತು. ‌2 ಭಾಗಗಳಲ್ಲಿ ಚಿತ್ರ ತೆರೆಗೆ ಬರಲಿರುವುದರಿಂದ ಬಜೆಟ್‌ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ವಿದೇಶದ ವಿವಿಧ ಭಾಗಗಳಲ್ಲಿ ಶೂಟಿಂಗ್‌ ನಡೆಯಲಿದ್ದು, ಕೀನ್ಯಾ ಶೆಡ್ಯೂಲ್‌ ಬಹುತೇಕ ಪೂರ್ಣಗೊಂಡಿದೆ. ಇದು ಕಾಡಿನಲ್ಲಿ ನಡೆಯುವ ಸಾಹಸಮಯ ಆ್ಯಕ್ಷನ್‌ ಥ್ರಿಲ್ಲರ್ ಆಗಿದ್ದು, ಆಫ್ರಿಕಾ ಭಾಗದ ಶೇ. 95ರಷ್ಟು ಭಾಗ ಕೀನ್ಯಾದಲ್ಲೇ ನಡೆದಿದೆ. ರಾಜಮೌಳಿ ಜತೆಗೆ ಸುಮಾರು 120 ಸಿಬ್ಬಂದಿಯೂ ಅಲ್ಲಿಗೆ ತೆರಳಿದ್ದಾರೆ.

120 ದೇಶಗಳಲ್ಲಿ ಬಿಡುಗಡೆ

ಈ ಚಿತ್ರವನ್ನು ಸುಮಾರು 120 ದೇಶಗಳಲ್ಲಿ ಬಿಡುಗಡೆ ಮಾಡಲು ರಾಜಮೌಳಿ ಯೋಜನೆ ರೂಪಿಸಿದ್ದಾರೆ. ಏಪ್ರಿಲ್‌ನಲ್ಲಿ ಆರಂಭವಾದ ಶೂಟಿಂಗ್‌ ಈಗಲೂ ಮುಂದುವರಿದಿದೆ. ಮಹೇಶ್‌ ಬಾಬು ಹುಟ್ಟುಹಬ್ಬದ ಪ್ರಯುಕ್ತ ಆಗಸ್ಟ್‌ 9ರಂದು ಚಿತ್ರದ ಮೊದಲ ಪೋಸ್ಟರ್‌ ರಿಲೀಸ್‌ ಆಗಿತ್ತು. ಜತೆಗೆ ಚಿತ್ರದ ಹೆಚ್ಚಿನ ವಿವರ ನವೆಂಬರ್‌ನಲ್ಲಿ ರಿವೀಲ್‌ ಮಾಡುವುದಾಗಿ ರಾಜಮೌಳಿ ತಿಳಿಸಿದ್ದರು.

ಭಾರತದ ದುಬಾರಿ ಚಿತ್ರ

ʼಎಸ್‌ಎಸ್‌ಎಂಬಿ 29ʼ ಭಾರತದ 2ನೇ ಅತಿ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ. ರಣಬೀರ್‌ ಕಪೂರ್‌-ಯಶ್‌ ನಟನೆಯ ʼರಾಮಾಯಣʼ 2,000 ಕೋಟಿ ರೂ.ಗಿಂತ ಅಧಿಕ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ಇನ್ನು ಅಲ್ಲು ಅರ್ಜುನ್‌-ಅಟ್ಲಿ-ದೀಪಿಕಾ ಪಡುಕೋಣೆ ಕಾಂಬಿನೇಷನ್‌ನ ಚಿತ್ರ 800 ಕೋಟಿ ರೂ. ಮತ್ತು ಯಶ್‌ ಅವರ ʼಟಾಕ್ಸಿಕ್‌ʼ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ʼಎಸ್‌ಎಸ್‌ಎಂಬಿ 29ʼ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಬಹುಭಾಷಾ ನಟ, ಮಲಯಾಳಂ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗ 2027ರಲ್ಲಿ ಮತ್ತು 2ನೇ ಭಾಗ 2029ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.