ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿಷ್ಠಿತ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ಮಹಿಮಾ’ ಚಿತ್ರ ಆಯ್ಕೆ: ಅಕ್ಟೋಬರ್ 17ರಂದು ಗ್ರ್ಯಾಂಡ್ ಪ್ರೀಮಿಯರ್

Mahima Kannada Movie: ಉತ್ತರ ಅಮೆರಿಕದ ಅತಿ ದೊಡ್ಡ ಸೌತ್ ಏಷ್ಯನ್ ಚಲನಚಿತ್ರೋತ್ಸವವಾದ IFFSA ಟೊರೊಂಟೊಗೆ ಕನ್ನಡದ ‘ಮಹಿಮಾ’ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಅಕ್ಟೋಬರ್ 17ರಂದು ಅದ್ಧೂರಿ ಪ್ರೀಮಿಯರ್ ಕಾಣಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್, ಕೆನಡಾದ ಹಿನ್ನೆಲೆಯಲ್ಲಿ ಸಾಗುವ ನಿಗೂಢ ಅಪರಾಧ ಹಾಗೂ ತನಿಖೆಯ ರೋಚಕತೆಯನ್ನು ಒಳಗೊಂಡಿದೆ.

ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಉತ್ತರ ಅಮೆರಿಕದಲ್ಲೇ ಅತಿ ದೊಡ್ಡ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾಗೂ ದಕ್ಷಿಣ ಏಷ್ಯಾದ ಬಹುಭಾಷಾ ಸಿನಿಮಾಗಳನ್ನು ಪ್ರದರ್ಶಿಸುವ ಪ್ರತಿಷ್ಠಿತ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFSA Toronto) ಕನ್ನಡದ ‘ಮಹಿಮಾ’ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಅಕ್ಟೋಬರ್ 17ರಂದು ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯಲಿದ್ದು, ಸಾಗರೋತ್ತರ ಕನ್ನಡಿಗರಲ್ಲಿ ಹಾಗೂ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕೃಷ್ಣ ಕ್ರಿಯೇಷನ್ಸ್ ಅರ್ಪಣೆಯಲ್ಲಿ, ಡ್ರೀಮ್ಸ್ ಮೀಡಿಯಾ ಕೆನಡಾ ಲಾಂಛನದಲ್ಲಿ ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಮತ್ತು ನವೀನ್ ಕುಮಾರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಗೋಕುಲ ಎಂಟರ್‌ಟೈನರ್ಸ್ ಸಂಸ್ಥೆಯ ಗೋವಿಂದರಾಜು ಹಾಗೂ ಶಶಿಧರ್ ರೆಡ್ಡಿ ಅವರ ಸಹ-ನಿರ್ಮಾಣ ಚಿತ್ರಕ್ಕಿದೆ. ಟೊರೊಂಟೊ ಚಿತ್ರೋತ್ಸವಕ್ಕೆ ಆಯ್ಕೆಯಾಗುವುದಕ್ಕೂ ಮುನ್ನವೇ ‘ಮಹಿಮಾ’ ಸಿನಿಮಾ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಇತ್ತೀಚೆಗೆ ಯಶಸ್ವಿಯಾಗಿ ಜರುಗಿದ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನ ಕಂಡು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದುಕೊಂಡಿತ್ತು.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕಿರಣ್ ಭಾರ್ತೂರ್ ಕೆನಡಾದ ಟೊರೊಂಟೊದಲ್ಲಿ ನೆಲೆಸಿರುವ ಯಶಸ್ವಿ ಉದ್ಯಮಿ. ಈ ಹಿಂದೆ ‘ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ನಿರ್ಮಿಸಿದ್ದ ಅವರು, ಡ್ರೀಮ್ಸ್ ಮೀಡಿಯಾ ಸಂಸ್ಥೆಯ ಮೂಲಕ ಈವರೆಗೆ 50ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಕೆನಡಾದಾದ್ಯಂತ ಯಶಸ್ವಿಯಾಗಿ ವಿತರಿಸಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಇನ್ನು ಈವರೆಗೂ ಹಲವು ಗಮನಾರ್ಹ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಮತ್ತೊಬ್ಬ ಉದ್ಯಮಿ ಹಾಗೂ ಕೆನಡಾ ನಿವಾಸಿ ನವೀನ್ ಕುಮಾರ್ ‘ಮಹಿಮಾ’ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದ ಕಥೆ ಹಾಗೂ ಚಿತ್ರಕಥೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ʻನಾದಬ್ರಹ್ಮʼ ಹಂಸಲೇಖಗೆ 'ಜೀವಮಾನ ಶ್ರೇಷ್ಠ ಸಾಧನೆ' ಪ್ರಶಸ್ತಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗೌರವ

ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಈ ಚಿತ್ರದ ಕಥಾಹಂದರವು ಸಂಪೂರ್ಣ ಕೆನಡಾದಲ್ಲೇ ಸಾಗುತ್ತದೆ. ಟೊರೊಂಟೊದಲ್ಲಿ ವಾಸವಾಗಿರುವ ನಾಯಕಿ ಮಹಿಮಾ, ಒಂದು ರಾತ್ರಿ ತನ್ನ ಅತ್ತೆಯ ಮಗಳು ಸಾನ್ವಿಯೊಂದಿಗೆ ಕಾರಿನಲ್ಲಿ ತೆರಳುವಾಗ ಆಕಸ್ಮಿಕವಾಗಿ ಕೆನಡಾದ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದು, ಹೆದರಿ ಸ್ಥಳದಿಂದ ಪರಾರಿಯಾಗುತ್ತಾಳೆ. ಈ ಘಟನೆಯ ಬಳಿಕ ಅಪರಾಧ ಪ್ರಜ್ಞೆಯಿಂದ ನರಳುವ ಮಹಿಮಾಳನ್ನು ಮೃತ ಯುವತಿಯ ಪ್ರತೀಕಾರದ ಆತ್ಮ ಕಾಡಲು ಆರಂಭಿಸುತ್ತದೆ. ಇದರ ನಡುವೆ ಆಕೆಯ ಕುಟುಂಬದಲ್ಲಿ ಸರಣಿ ನಿಗೂಢ ಸಾವುಗಳು ಸಂಭವಿಸಿದಾಗ, ಡಿಟೆಕ್ಟಿವ್ ಆರ್ಯ ತನಿಖೆ ಕೈಗೆತ್ತಿಕೊಳ್ಳುತ್ತಾನೆ. ಈ ತನಿಖೆಯ ಅಂತ್ಯದಲ್ಲಿ ಆತ್ಮದ ಹಿಂದಿರುವ ಬೆಚ್ಚಿಬೀಳಿಸುವ ರಹಸ್ಯವೊಂದು ಬಯಲಾಗುತ್ತದೆ. ಇಡೀ ಚಿತ್ರದ ಚಿತ್ರೀಕರಣವನ್ನು ಕೆನಡಾದ ಸುಂದರ ಹಾಗೂ ನೈಜ ತಾಣಗಳಲ್ಲೇ ನಡೆಸಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರದ ತಾರಾಗಣದಲ್ಲಿ, ಮೂಲತಃ ದಕ್ಷಿಣ ಕನ್ನಡದವರಾಗಿದ್ದು ಪ್ರಸ್ತುತ ಕೆನಡಾದಲ್ಲಿ ಖ್ಯಾತ ವ್ಲಾಗರ್ ಆಗಿ ಗುರುತಿಸಿಕೊಂಡಿರುವ ಪ್ರಜ್ಞಾ ಜೈನ್ ಮುಖ್ಯಭೂಮಿಕೆಯ ‘ಮಹಿಮಾ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ರಘುರಾಮ್ (ಮಾಲ್ಗುಡಿ ಡೇಸ್ ಖ್ಯಾತಿ), ಬಿಯೆಟಾ ನಿಕೋಲ್ ಆಮ್ರೆ, ಕಾವ್ಯಶ್ರೀ, ಪಾಲ್ ಹಾಪ್ಕಿನ್ಸ್ ಹಾಗೂ ಮಂಜುಳಾ ರಾಣೆ ಸೇರಿದಂತೆ ದೇಶ-ವಿದೇಶಗಳ ಕಲಾವಿದರು ನಟಿಸಿದ್ದಾರೆ.

ಈ ಮಹತ್ವದ ಸಾಧನೆಯ ಕುರಿತು ಸಂತಸ ಹಂಚಿಕೊಂಡಿರುವ ನಿರ್ಮಾಪಕರಾದ ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಮತ್ತು ನವೀನ್ ಕುಮಾರ್, "ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಅಕ್ಕ ಸಮ್ಮೇಳನದಲ್ಲಿ ನಮ್ಮ ಚಿತ್ರಕ್ಕೆ ದೊರೆತ ಪ್ರಶಂಸೆ ನಮಗೆ ದೊಡ್ಡ ಹುರುಪು ನೀಡಿದೆ. ಇದೀಗ ಸಹಸ್ರಾರು ಸಿನಿಪ್ರೇಮಿಗಳು ಸಾಕ್ಷಿಯಾಗುವ ಸೌತ್ ಏಷ್ಯಾದ ಪ್ರತಿಷ್ಠಿತ ಐಎಫ್‌ಎಫ್‌ಎಸ್‌ಎ ಟೊರೊಂಟೊ ಚಿತ್ರೋತ್ಸವಕ್ಕೆ ‘ಮಹಿಮಾ’ ಸಿನಿಮಾ ಆಯ್ಕೆಯಾಗಿ ಪ್ರದರ್ಶನಗೊಳ್ಳುತ್ತಿರುವುದು ಅಪಾರ ಹೆಮ್ಮೆಯ ವಿಷಯ. ಮುಂದೆಯೂ ಕೂಡ ನಮ್ಮ ಸಂಸ್ಥೆಯ ವತಿಯಿಂದ ಇಂತಹದೇ ಸದಭಿರುಚಿಯ ಮತ್ತು ವಿಭಿನ್ನ ಕಥಾವಸ್ತುವಿನ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಲು ಬದ್ಧರಾಗಿದ್ದೇವೆ" ಎಂದು ತಿಳಿಸಿದ್ದಾರೆ.